46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್​ ಗೊಗೊಯ್​ ನೇಮಕ

ನವದೆಹಲಿ: ಸುಪ್ರೀಂಕೋರ್ಟ್​ನ 46ನೇ ಮುಖ್ಯನ್ಯಾಯಮೂರ್ತಿಯಾಗಿ ರಂಜನ್ ಗೊಗೊಯ್ ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ನೇಮಿಸಿದ್ದಾರೆ.

ಸುಪ್ರೀಂ ಕೋರ್ಟ್​ನ ಎರಡನೇ ಹಿರಿಯ ನ್ಯಾಯಮೂರ್ತಿಯಾಗಿರುವ ಗೊಗೊಯ್​ ಅವರ ಹೆಸರನ್ನು ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸಿಜೆಐ ದೀಪಕ್​ ಮಿಶ್ರಾ ಅವರ ಶಿಫಾರಸು ಮಾಡಿದ್ದರು.

ಅಕ್ಟೋಬರ್​ 2 ರಂದು ಹಾಲಿ ಸಿಜೆಐ ದೀಪಕ್​ ಮಿಶ್ರಾ ಅವರು ನಿವೃತ್ತಿಯಾಗಲಿದ್ದು, ಅಕ್ಟೋಬರ್​ 3 ರಂದು ಗೊಗೊಯ್​ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಗೊಗೊಯ್​ ಅವರು 2019ರ ನವೆಂಬರ್​ 17ರವರೆಗೆ ಸೇವಾವಧಿ ಹೊಂದಿದ್ದಾರೆ.

ಗುವಾಹಟಿ ಹೈಕೋರ್ಟ್​ಗೆ 2001ರಲ್ಲಿ ನ್ಯಾಯಮೂರ್ತಿಯಾಗಿ ನೇಮಕವಾದ ನ್ಯಾ.ಗೊಗೊಯ್, 2012ರಲ್ಲಿ ಸುಪ್ರೀಂ ಕೋರ್ಟ್​ಗೆ ಬಡ್ತಿ ಪಡೆದಿದ್ದರು. ನಿವೃತ್ತರಾಗಿರುವ ನ್ಯಾ. ಚೆಲಮೇಶ್ವರ್ ಜತೆ ಸುದ್ದಿಗೋಷ್ಠಿ ನಡೆಸಿದ ಇತರ ನಾಲ್ವರು ಹಿರಿಯ ನ್ಯಾಯಮೂರ್ತಿಗಳಲ್ಲಿ ನ್ಯಾ. ಗೊಗೊಯ್ ಕೂಡ ಒಬ್ಬರು ಎನ್ನುವುದು ವಿಶೇಷ. (ಏಜೆನ್ಸೀಸ್​)