ಅನರ್ಹ ಶಾಸಕರ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಮೋಹನ್​ ಶಾಂತನಗೌಡರ್: ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​

ನವದೆಹಲಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಕ್ರಮ ಪ್ರಶ್ನಿಸಿ ಶಾಸಕ ಸ್ಥಾನದಿಂದ ಅನರ್ಹಗೊಂಡವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ವಿಚಾರಣೆಯನ್ನು ಮತ್ತೆ ಮುಂದೂಡಿದೆ.

ಮಂಗಳವಾರ ಬೆಳಗ್ಗೆ ನ್ಯಾ.ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಆದರೆ, ವಿಚಾರಣೆಯಿಂದ ಕರ್ನಾಟಕ ಮೂಲದ ನ್ಯಾ. ಮೋಹನ್​ ಶಾಂತನಗೌಡರ್ ಅವರು ಹಿಂದೆ ಸರಿದಿರುವುದರಿಂದ ಅರ್ಜಿ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ. ಹೀಗಾಗಿ ಅನರ್ಹ ಶಾಸಕರಿಗೆ ಇನ್ನೂ ಒಂದು ವಾರ ಟೆನ್ಶನ್ ಹಾಗೇ ಇರಲಿದೆ.

ಅರ್ಜಿಯ ತುರ್ತು ವಿಚಾರಣೆ ಮಾಡಿ ಎಂದು ಸತತ ನಾಲ್ಕು ಬಾರಿ ಕೇಳಿಕೊಂಡರೂ ಸುಪ್ರೀಂ ಸೊಪ್ಪು ಹಾಕಿರಲಿಲ್ಲ. ರಿಜಿಸ್ಟ್ರಾರ್ ಮೂಲಕವೇ ಕೇಸಿನ ಪಟ್ಟಿಯಾಗಿ ವಿಚಾರಣೆಗೆ ನಿಗದಿಯಾಗಲಿ ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು. ಅಲ್ಲದೆ, ಎರಡು ಬಾರಿ ವಿಚಾರಣೆಗೆ ಕೇಸು ನಿಗದಿಯಾದರೂ ಕೊನೇ ಹಂತದಲ್ಲಿ ಪಟ್ಟಿಯನ್ನು ಅಳಿಸಿ ಹಾಕಲಾಗಿತ್ತು. ಕಂಗಾಲಾಗಿದ್ದ ಅನರ್ಹ ಶಾಸಕರು ಬಿಜೆಪಿ ನಾಯಕರ ವಿರುದ್ಧವೂ ಹತಾಶೆ ಹೊರಹಾಕಿದ್ದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *