ಕಾನೂನು ವ್ಯಾಪ್ತಿ ಮಹಾಸಾಗರ ಇದ್ದಂತೆ, ಹೊಸ ಕಾನೂನು, ಕಾಯ್ದೆ ಅಧ್ಯಯನ ಅಗತ್ಯ

ಚಿಕ್ಕಮಗಳೂರು: ವಕೀಲರು, ನ್ಯಾಯಾಧೀಶರು ಸದಾ ಅಧ್ಯಯನಶೀಲತೆ ಮೈಗೂಡಿಸಿಕೊಂಡರೆ ಉತ್ತಮ ವೃತ್ತಿಪರತೆ ಹೊಂದಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ್ ಎಂ.ಅಡಿಗ ಸಲಹೆ ನೀಡಿದರು.

ವರ್ಗಾವಣೆಗೊಂಡಿರುವ ನ್ಯಾಯಾಧೀಶರಾದ ಎ.ಎಸ್.ಸದಲಗಿ ಮತ್ತು ರಮೇಶ್ ಅವರಿಗೆ ವಕೀಲರ ಸಂಘದಿಂದ ವಕೀಲರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಾನೂನು ವ್ಯಾಪ್ತಿ ಸಾಗರ ಇದ್ದಂತೆ. ಹೊಸ ಕಾನೂನು, ಕಾಯ್ದೆಗಳು ಹಾಗೂ ಮಹತ್ವದ ತೀರ್ಪಗಳ ಕುರಿತು ಅಧ್ಯಯನ ಮಾಡಿ ನ್ಯಾಯ ವಿತರಣೆಯಲ್ಲಿ ಸಮರ್ಥತೆ ಮೆರೆಯುವಂತೆ ಹೇಳಿದರು.

ವರ್ಗಾವಣೆಗೊಂಡ ಕಾರ್ವಿುಕ ನ್ಯಾಯಾಲಯದ ನ್ಯಾಯಾಧೀಶ ಎ.ಎಸ್.ಸದಲಗಿ ಮಾತನಾಡಿ, ಚಿಕ್ಕಮಗಳೂರಿನಲ್ಲಿ ಸೇವೆ ಸಲ್ಲಿಸಿರುವುದು ನನಗೆ ಸದಾ ಸ್ಮರಣೆಯಲ್ಲಿರುತ್ತದೆ. ಇಲ್ಲಿ ಉತ್ತಮ ಪರಿಸರವಿದ್ದು, ವಕೀಲರ ಸಂಘ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ವಕೀಲರು ಹಾಗೂ ನ್ಯಾಯಾಧೀಶರು ಒಂದು ರಥದ ಚಕ್ರಗಳಿದಂತೆ. ಶೀಘ್ರ ಪ್ರಕರಣ ಇತ್ಯರ್ಥ ಪಡಿಸುವಲ್ಲಿ ವಕೀಲರ ಪಾತ್ರ ಮಹತ್ವದ್ದು ಎಂದರು.

ಒಂದನೇ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ರಮೇಶ್ ಮಾತನಾಡಿ, ಕಾನೂನು ಕಠಿಣವಾಗಿದ್ದು, ಚೌಕಟ್ಟಿನಲ್ಲಿಯೆ ನಾವೆಲ್ಲರೂ ಕೆಲಸ ಮಾಡಬೇಕು. ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಮಾಡುವಲ್ಲಿ ಚಿಕ್ಕಮಗಳೂರಿನ ವಕೀಲರ ಸಂಘ ಹೆಚ್ಚು ಸಹಕಾರ ನೀಡುತ್ತಿದೆ ಎಂದು ಸ್ಮರಿಸಿದರು.

Leave a Reply

Your email address will not be published. Required fields are marked *