ನ್ಯಾಯಾಂಗದಲ್ಲೂ ಭ್ರಷ್ಟಾಚಾರ ತಾಂಡವ

ಶಿವಮೊಗ್ಗ: ಸಮಾಜಕ್ಕೆ ನ್ಯಾಯಯುತ ಮಾರ್ಗದರ್ಶನ ನೀಡಬೇಕಿರುವ ಇಂದಿನ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

ಶುಕ್ರವಾರ ಶೇಷಾದ್ರಿಪುರಂನ ಎನ್​ಇಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ದಶಮಾನೋತ್ಸವ ಉದ್ಘಾಟಿಸಿ ಮಾತನಾಡಿ, ಸಂವಿಧಾನದ ಪ್ರಮುಖ ಅಂಗವಾದ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಇದೆ ಎಂದು ಎಲ್ಲರಿಗೂ ತಿಳಿದಿದೆ. ವ್ಯಾಜ್ಯಗಳು ತ್ವರಿತ ವಿಲೇವಾರಿ ಆಗದೇ ಸುದೀರ್ಘವಾಗಿ ವಿಚಾರಣೆಗೆ ಒಳಪಡುತ್ತಿವೆ ಎಂದರು.

ಸಮಾಜದ ಮೂಲೆ ಮೂಲೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕಂಟಕ ತಪ್ಪಿದ್ದಲ್ಲ. ಇದು ಕ್ರಾಂತಿಕಾರಿ ಪ್ರತಿಫಲದತ್ತ ಹೊರಳದಂತೆ ನೋಡಿಕೊಳ್ಳಬೇಕಿದ್ದು, ದೇಶ ಒಂದೇ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗೆ ಸೇರಿಲ್ಲ. ಅದನ್ನು ಮುಂದುವರಿಸುವ ಸಾಮಾಜಿಕ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಸಂಸತ್ ಅಧಿವೇಶನಕ್ಕೆ ಪ್ರತಿ ದಿನ ಕೋಟ್ಯಂತರ ರೂ. ವ್ಯಯಿಸಲಾಗುತ್ತಿದೆ. ಆದರೆ ದೇಶದ ಒಳಿತಿಗೆ ಕಾನೂನು ರೂಪಿಸಬೇಕಾದ ಜನಪ್ರತಿನಿಧಿಗಳು ಕಾಲಹರಣ ಮಾಡುತ್ತಿದ್ದಾರೆ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಭಿವೃದ್ಧಿ ಆದಂತಹ ದೇಶದಲ್ಲಿ ದುರಾಸೆ ತುಂಬಿಕೊಂಡಿದೆ. ಕೆಲವೇ ಕೆಲವರು ಶ್ರಿಮಂತರಾಗುತ್ತಿದ್ದಾರೆ. ಹಗರಣಗಳ ಸಂಖ್ಯೆಯ ಹಿಂದಿನ ಸೊನ್ನೆಗಳು ಬೆಳೆಯುತ್ತಿವೆ. ಸಮಾಜದಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಗೆ ಬೆಲೆ ಇಲ್ಲವಾಗಿದೆ. ಸತ್ಯ ಹೇಳಲು ಹೊರಟರೆ ಹುಚ್ಚರಂತೆ ಭಾವಿಸುತ್ತಾರೆ. ಜೈಲಿಗೆ ಹೋಗಿ ಬಂದವರಿಗೆ ಹೂಹಾರ ಹಾಕಿ ಸ್ವಾಗತಿಸುವ ಸಂಸ್ಕೃತಿ ಬೆಳೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಮಾತನಾಡಿ, ಇಂಗ್ಲಿಷ್​ನಲ್ಲಿ ಅನ್ವೇಷಣೆಗಳು ನಡೆಸಬೇಕಾದ ಸಂದರ್ಭದಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆ ಇದೆ. ಇದು ಉದ್ಯೋಗ ಸೇರಿ ಜೀವನ ಭದ್ರತೆಗೆ ಪ್ರಮುಖ ಅಸ್ತ್ರ ಎಂದು ಹೇಳಿದರು.

ಸಮಿತಿ ಅಧ್ಯಕ್ಷ ಎ.ಎಸ್.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಜಂಟಿ ಕಾರ್ಯದರ್ಶಿ ಡಿ.ಆರ್.ಅಮರೇಂದ್ರ ಕಿರೀಟಿ, ಖಜಾಂಚಿ ಸಿ.ಆರ್.ನಾಗರಾಜ್, ಪಿ.ನಾರಾಯಣ, ಮೈಲಾರಪ್ಪ, ಡಿ.ಎಚ್.ಸುಬ್ರಹ್ಮಣ್ಯ, ಸುದರ್ಶನ್ ಮತ್ತಿತರರಿದ್ದರು. ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.

ಕೂಪ ಮಂಡೂಕನಾಗಿದ್ದೆ: ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವವರೆಗೂ ನಾನು ಕೂಡ ಕೂಪ ಮಂಡೂಕನಾಗಿದ್ದೆ. ಜೀವನದಲ್ಲಿ ಎಲ್ಲವೂ ಇದ್ದು ಸುಖಕರವಾಗಿದ್ದೇನೆ ಎಂದು ಭಾವಿಸಿದ್ದೆ. ಆದರೆ ನ್ಯಾಯಾಂಗ ವ್ಯವಸ್ಥೆಯಿಂದ ಹೊರಬಂದು ಲೋಕಾಯುಕ್ತ ಸೇರಿದ ಬಳಿಕ ಸಮಾಜದ ಸ್ಥಿತಿ ಅರಿವಿಗೆ ಬಂತು. ಜನರ ಕಷ್ಟಗಳು ಅರ್ಥವಾದವು ಎಂದು ಸಂತೋಷ್ ಹೆಗ್ಡೆ ಹೇಳಿದರು.

ಹಿರಿಯರು ಕಟ್ಟಿದ ಮೌಲ್ಯಗಳು ಕುಸಿಯುತ್ತಿವೆ. ಸದೃಢ ದೇಶ ನಿರ್ವಣಕ್ಕೆ ಜನಪರ ಸಮಾಜ ಕಟ್ಟಬೇಕಿದ್ದು, ಅದು ಹಿರಿಯರಿಂದ ಸಾಧ್ಯವಿಲ್ಲ. ಬದಲಾಗಿ ಯುವ ಸಮೂಹದಲ್ಲಿ ಆ ಶಕ್ತಿ ಇದ್ದು, ವಿದ್ಯಾರ್ಥಿ ದಿಸೆಯಿಂದಲೇ ಜಾಗೃತರಾಗಬೇಕಿದೆ.

| ಎನ್.ಸಂತೋಷ್ ಹೆಗಡೆ