More

    ಪರಿಸರ ರಕ್ಷಣೆ ಬಗ್ಗೆ ಬರೀ ಚಿಂತನೆ ಸಾಲದು

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಪರಿಸರ ಮಾಲಿನ್ಯ ಕರೊನಾಗಿಂತ ಭೀಕರ. ಕರೊನಾ ಸಾವಿರಾರು ಜನರನ್ನು ಬಲಿ ಪಡೆದಿದ್ದರೆ, ಪರಿಸರ ಮಾಲಿನ್ಯದಿಂದ ಲಕ್ಷಾಂತರ ಜನರು ಜೀವ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಪರಿಸರ ಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯವಾಗಿದೆ ಎಂದು ಪರಿಸರ ತಜ್ಞ ಡಾ. ರಾಜೇಂದ್ರ ಪೋದ್ದಾರ ಅಭಿಪ್ರಾಯಪಟ್ಟರು.
    ವಿಶ್ವ ಪರಿಸರ ದಿನ ನಿಮಿತ್ತ ಇಲ್ಲಿನ ಹೊಸಯಲ್ಲಾಪುರ ರಸ್ತೆಯಲ್ಲಿನ ಮಹಾದೇವ ಹೊರಟ್ಟಿ ನಿವಾಸದಲ್ಲಿ ಭಾರತ ಏಕತಾ ಆಂದೋಲನ ಮತ್ತು ಬಸವ ಶಾಂತಿ ಮಿಶನ್ ಸಂಘಟನೆಗಳು ಭಾನುವಾರ ಏರ್ಪಡಿಸಿದ್ದ ಮಳೆ-ಬೆಳೆಗಾಗಿ ಸರ್ವಧರ್ಮ ಪ್ರಾರ್ಥನೆ ಹಾಗೂ ಜೀವ ಸಂಕುಲದ ಅಳಿವು-ಉಳಿವು ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.
    ಪರಿಸರ ಮಾಲಿನ್ಯದಿಂದ ತಾಪಮಾನ ಹೆಚ್ಚುತ್ತಿದೆ. ಹವಾಮಾನ ವೈಪರಿತ್ಯದಿಂದ ಮಳೆ-ಬೆಳೆ ಚಕ್ರದಲ್ಲಿ ಏರುಪೇರು ಆಗುತ್ತಿದೆ. ರೈತರು ತೊಂದರೆ ಅನುಭವಿಸುತ್ತಿದ್ದು, ಕೃಷಿ ತಜ್ಞರು ರೈತರಿಗೆ ಅಗತ್ಯ ಸಲಹೆ ನೀಡಬೇಕು. ಪರಿಸರ ರಕ್ಷಣೆ ಬಗ್ಗೆ ಚಿಂತನೆ ನಡೆದರೆ ಸಾಲದು, ಕ್ರಿಯೆ ಕೂಡ ಆಗಬೇಕು. ಬರೀ ಸಸಿಗಳನ್ನು ನೆಡದೆ ಅವುಗಳನ್ನು ಬೆಳೆಸಬೇಕು ಎಂದರು.
    ಸಕಾಲದಲ್ಲಿ ಮಳೆ-ಬೆಳೆಗಾಗಿ ಸರ್ವಧರ್ಮ ಪ್ರಾರ್ಥನೆ ಆಯೋಜಿಸಿದ್ದು ಸಂತಸದ ಸಂಗತಿ. ಇದೊಂದು ಅಪರೂಪದ ಕಾರ್ಯಕ್ರಮ. ದೇಶಾದ್ಯಂತ ಇಂತಹ ಕಾರ್ಯಕ್ರಮಗಳು ಹೆಚ್ಚಾಗಲಿ ಎಂದರು.
    ಮಹಾದೇವ ಹೊರಟ್ಟಿ ಮಾತನಾಡಿ, ಪರಿಸರ ಚಿಂತನೆ ಸಭೆಯಲ್ಲಿ ಮಂಡನೆಯಾದ ವಿಷಯಗಳನ್ನು ಜಿ20 ಸಭೆಗೆ ಕಳಿಸಲಾಗುವುದು. ಈ ಕುರಿತು ಜಗತ್ತಿನ ಗಮನ ಸೆಳೆಯಲಾಗುವುದು ಎಂದರು.
    ಇದಕ್ಕೂ ಪೂರ್ವದಲ್ಲಿ ಸಿದ್ಧಾರೂಢಮಠದ ಶ್ರೀ ಮುಕ್ತಾನಂದ ಸ್ವಾಮೀಜಿ, ಗ್ಯಾನಿ ಮನಜಿತ್‌ಸಿಂಗ್, ಡಾ. ಶಾರದಾ ಭಟ್, ಅಂಜಲಿನಾ ಗ್ರೆಗರಿ, ಎಂ.ಎನ್. ಮುತ್ತಿನ, ಪಂ. ದತ್ತಾತ್ರೇಯ ಕುಲಕರ್ಣಿ, ಮೊಹಮ್ಮದ್ ರಫೀಕ್ ಕಿರಸಾಳೆ, ಪ್ರೇಮಕ್ಕ ಹೊರಟ್ಟಿ ಸರ್ವಧರ್ಮ ಪ್ರಾರ್ಥನೆ ನಡೆಸಿದರು.
    ರಂಜಾನ್ ದರ್ಗಾ, ಈರಣ್ಣಬಡಿಗೇರ, ಶಂಕರ ಕುಂಬಿ, ಮನೋಜ ಪಾಟೀಲ, ಶಂಭಲಿಂಗ ಹೆಗಡಾಳ ಅಭಿಪ್ರಾಯ ಹಂಚಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts