ಭಾರತೀಯ ಸೇನೆಯ ಯೋಧನ ಒಂದೇ ಒಂದು ಏಟಿಗೆ ಪತರಗುಟ್ಟಿದ್ದ ಮಸೂದ್​ ಅಜರ್​!

ನವದೆಹಲಿ: ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ದಾಳಿಯ ಮಾಸ್ಟರ್​ ಮೈಂಡ್​, 2008ರ ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೈಷ್​ ಎ ಮೊಹಮ್ಮದ್​ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್​ ಅಜರ್​ ಭಾರತೀಯ ಸೇನೆಯ ಯೋಧನ ಒಂದೇ ಒಂದು ಏಟಿಗೆ ಪತರಗುಟ್ಟಿದ್ದ ಎಂದು ಸಿಕ್ಕಿಂನ ನಿವೃತ್ತ ಡಿಜಿ ಅವಿನಾಶ್ ಮೊಹಾನನಿ ತಿಳಿಸಿದ್ದಾರೆ.

1994ರ ಫೆಬ್ರವರಿಯಲ್ಲಿ ಪೋರ್ಚಿಗೀಸ್​ ಪಾಸ್​ಪೋರ್ಟ್​ ಬಳಸಿ ಭಾರತಕ್ಕೆ ಬಂದಿದ್ದ ಮಸೂದ್​ ಅಜರ್​ನನ್ನು ಜಮ್ಮು ಮತ್ತು ಕಾಶ್ಮೀರದ ಅನಂತಪುರ ಜಿಲ್ಲೆಯಲ್ಲಿ ಸೆರೆ ಹಿಡಿಯಲಾಗಿತ್ತು. ಈ ಸಂದರ್ಭದಲ್ಲಿ ಸೆರೆಸಿಕ್ಕಿದ್ದ ಮಸೂದ್​ನನ್ನು ವಿಚಾರಣೆಗೆ ಒಳಪಡಿಸುವ ವೇಳೆ ಸೇನೆಯ ಯೋಧರೊಬ್ಬರು ಆತನ ಕೆನ್ನೆಗೆ ಬಾರಿಸಿದ್ದ ಒಂದೇ ಒಂದು ಏಟಿಗೆ ಆತ ತನ್ನ ಯೋಜನೆಗಳ ಸಂಪೂರ್ಣ ಮಾಹಿತಿ ನೀಡಿದ್ದ ಎಂದು ಆತನ ವಿಚಾರಣೆ ನಡೆಸಿದ ತಂಡದಲ್ಲಿದ್ದ ಅವಿನಾಶ್​ ನೆನಪಿಸಿಕೊಂಡಿದ್ದಾರೆ.

ಆತನನ್ನು ವಿಚಾರಣೆಗೆ ಒಳಪಡಿಸುವ ವೇಳೆ ನಮಗೆ ಹೆಚ್ಚಿನ ಕಷ್ಟವಾಗಲಿಲ್ಲ. ಒಂದು ಏಟು ಬಿದ್ದ ತಕ್ಷಣ ಆತ ಕಣಿವೆ ರಾಜ್ಯದಲ್ಲಿ ನಡೆಯುತ್ತಿದ್ದ ಉಗ್ರ ಚಟುವಟಿಕೆಗಳು, ಮತ್ತು ಪಾಕಿಸ್ತಾನದಲ್ಲಿ ನೆಲೆ ಸ್ಥಾಪಿಸಿರುವ ಉಗ್ರ ಸಂಘಟನೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಬಿಚ್ಚಿಟ್ಟಿದ್ದ ಎಂದು ಅವಿನಾಶ್​ ತಿಳಿಸಿದ್ದಾರೆ.

1999ರಲ್ಲಿ ಕಂದಹಾರ್​ ವಿಮಾನ ಅಪಹರಣ ಪ್ರಕರಣದಲ್ಲಿ ಮಸೂದ್​ನನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ನಂತರ ಮಸೂದ್ ಸಂಸತ್​ ಭವನ, ಪಠಾಣ್​ಕೋಟ್​ ವಾಯುನೆಲೆ, ಉರಿ ಸೇನಾನೆಲೆಯ ಮೇಲೆ ದಾಳಿ ನಡೆಸಿದ್ದ. ಜತೆಗೆ 2008ರ ಮುಂಬೈ ದಾಳಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ. (ಏಜೆನ್ಸೀಸ್​)