ಜಿಲ್ಲಾ ಸರ್ಕಾರಿ ಸ್ವಚ್ಛತಾ ಸಿಬ್ಬಂದಿ ವಜಾ ಖಂಡಿಸಿ ಪ್ರತಿಭಟನೆ

ಚಿಕ್ಕಮಗಳೂರು: ಜಿಲ್ಲಾ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ ಕ್ರಮ ವಿರೋಧಿಸಿ ಬುಧವಾರ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸ್ವಚ್ಛತಾ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಮಲ್ಲೇಗೌಡ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 15-20 ವರ್ಷಗಳಿಂದ ದಿನಗೂಲಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದ 30ಕ್ಕೂ ಹೆಚ್ಚು ಮಂದಿಯನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಲಾಗಿದೆ. ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದು ಬುಧವಾರ ಅಧಿಕಾರಿಗಳು ಹೇಳಿದ ತಕ್ಷಣ ದಿಕ್ಕು ತೋಚದೆ ಸಿಬ್ಬಂದಿ ಆಸ್ಪತ್ರೆ ಮುಂದೆ ಜಮಾಯಿಸಿದರು.

ಆಗ ಸ್ಥಳಕ್ಕೆ ಆಗಮಿಸಿದ ಡಿಎಸ್​ಎಸ್​ನ ಜಿಲ್ಲಾ ಸಂಚಾಲಕ ಕೆ.ಕುಮಾರ್, ಸಿಬ್ಬಂದಿಯನ್ನು ಮರಳಿ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಆಗ್ರಹಿಸಿ ದಿಢೀರ್ ಧರಣಿ ಆರಂಭಿಸಿದರು. ಎರಡು ದಶಕಗಳಿಂದ ಈ ಕೆಲಸವನ್ನೇ ನಂಬಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಇಷ್ಟು ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ವಿಮುಕ್ತಿಗೊಳಿಸಿದರೆ ಮುಂದಿನ ಜೀವನಕ್ಕೆ ತೊಂದರೆಯಾಗಲಿದೆ ಎಂದರು.

ಸಿಬ್ಬಂದಿ ಮುಂದುವರಿಸಲು ಸೂಚನೆ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರ ನಿವಾಸಕ್ಕೆ ತೆರಳಿದ ರಾಧಾ ಸುಂದರೇಶ್ ನೇತೃತ್ವದ ತಂಡ ಕೆಲಸದ ರದ್ದತಿ ಆದೇಶ ಹಿಂಪಡೆಯದಿದ್ದರೆ ಚುನಾವಣೆ ನಂತರ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಆದ್ದರಿಂದ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಎಂಎಲ್​ಸಿ ಬೋಜೇಗೌಡ ಸರ್ಕಾರದ ಕಾರ್ಯದರ್ಶಿಯನ್ನು ದೂರವಾಣಿ ಮೂಲಕ ಸಂರ್ಪಸಿ, ಜೂನ್​ವರೆಗೂ ಸಿಬ್ಬಂದಿಯನ್ನು ಸೇವೆಯಲ್ಲಿ ಮುಂದುವರಿಸಿ. ಚುನಾವಣೆ ಬಳಿಕ ರ್ಚಚಿಸುವ ಬಗ್ಗೆ ತಿಳಿಸಿದಾಗ ಸ್ಪಂದಿಸಿದ ಅಧಿಕಾರಿಗಳು ಸಿಬ್ಬಂದಿಯನ್ನು ಮುಂದುವರಿಸಲು ಜಿಲ್ಲಾ ಆಸ್ಪತ್ರೆ ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಸಮಸ್ಯೆಗೆ ತಾತ್ಕಾಲಿಕ ತೆರೆ ಬಿದ್ದಿದೆ.

Leave a Reply

Your email address will not be published. Required fields are marked *