ಲೈಂಗಿಕ ಕಿರುಕುಳ ಆರೋಪ ಅಲ್ಲಗಳೆದ ಸಿಜೆಐ, ನ್ಯಾಯಾಂಗ ವ್ಯವಸ್ಥೆ ಅಪಾಯದಲ್ಲಿದೆ ಎಂದು ಕಳವಳ

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ಕಿರುಕುಳ ಆರೋಪವನ್ನು ಅಲ್ಲಗಳೆದಿದ್ದು, ನ್ಯಾಯಾಂಗ ವ್ಯವಸ್ಥೆಯು ಅಪಾಯದಲ್ಲಿದೆ ಮತ್ತು ಅದನ್ನು ಬಲಿಪಶುವನ್ನಾಗಿ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನ ಮಾಜಿ ಮಹಿಳಾ ಸಿಬ್ಬಂದಿಯೊಬ್ಬರು ಹಲವು ಹಿರಿಯ ನ್ಯಾಯಾಧೀಶರಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ವಿಶೇಷ ಪೀಠವು ಇಂದು ತುರ್ತು ವಿಚಾರಣೆ ನಡೆಸಿದೆ.

ವಿಚಾರಣೆ ವೇಳೆ ಮಾತನಾಡಿರುವ ರಂಜನ್ ಗೊಗೊಯ್‌, ಈ ರೀತಿಯ ಆರೋಪಗಳಿಗೆ ಉತ್ತರಿಸಲು ನಾನು ಕೆಳಮಟ್ಟಕ್ಕೆ ಇಳಿಯಲು ಬಯಸುವುದಿಲ್ಲ. ಈ ಆರೋಪದ ಹಿಂದೆ ಪಿತೂರಿಯಿದ್ದು, ಇದರ ಹಿಂದೆ ದೊಡ್ಡ ಶಕ್ತಿ ಇರಬೇಕು. ಅವರು ಮುಖ್ಯ ನ್ಯಾಯಮೂರ್ತಿಗಳ ಕಚೇರಿಯನ್ನು ನಿಷ್ಕ್ರಿಯಗೊಳಿಸಲು ಬಯಸುತ್ತಿದ್ದಾರೆ ಎಂದು ದೂರಿದರು.

ಮುಂದಿನ ವಾರ ಪ್ರಮುಖ ಪ್ರಕರಣವೊಂದರ ವಿಚಾರಣೆಗಾಗಿ ನನ್ನನ್ನು ನಿಯೋಜಿಸಲಾಗಿದೆ. ಅದನ್ನು ತಪ್ಪಿಸುವ ಹುನ್ನಾರವಾಗಿ ನನ್ನ ಮೇಲೆ ಆರೋಪ ಹೊರಿಸಲಾಗಿದೆ. ಆದರೆ, ನಾನು ಈ ಖುರ್ಚಿಯಲ್ಲಿಯೇ ಕುಳಿತುಕೊಳ್ಳುತ್ತೇನೆ ಮತ್ತು ಯಾವುದೇ ಭಯವಿಲ್ಲದೆ ನ್ಯಾಯಾಂಗದ ಕಾರ್ಯಗಳನ್ನು ಮಾಡುತ್ತೇನೆ. ನನ್ನ ಖಾತೆಯಲ್ಲಿ 6.8 ಲಕ್ಷ ರೂ. ಇದೆ. ಆದರೆ, ನನ್ನ ಜವಾನನ ಬಳಿಯಲ್ಲಿ ಇದಕ್ಕಿಂತ ಜಾಸ್ತಿ ಹಣವಿದೆ. ಕಳೆದ 20 ವರ್ಷಗಳ ಬಳಿಕ ಮುಖ್ಯ ನ್ಯಾಯಮೂರ್ತಿಗೆ ದೊರಕಿದ ಉಡುಗೊರೆ ಇದು ಎಂದು ತಿಳಿಸಿದ್ದಾರೆ.

ಈ ವೇಳೆ ಯಾವುದೇ ನ್ಯಾಯಾಂಗದ ಆದೇಶವನ್ನು ನೀಡಲು ನಿರಾಕರಿಸಿದ ವಿಶೇಷ ಪೀಠವು, ಈ ವಿಚಾರದಲ್ಲಿ ಮಾಧ್ಯಮಗಳು ಕಾರ್ಯನಿರ್ವಹಿಸಲು ಮತ್ತು ಜವಾಬ್ದಾರಿಯುತವಾಗಿ ವರ್ತಿಸಲು ಅವುಗಳ ವಿವೇಚನೆಗೆ ಬಿಟ್ಟುಬಿಡಿ ಎಂದು ಹೇಳಿದರು.

ಮುಂದಿನ ಹಂತಗಳಲ್ಲಿ ಈ ಕುರಿತ ಆದೇಶ ಹೊರಡಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.
ರಂಜನ್‌ ಗೊಗೊಯ್‌ ಅವರ ವಿರುದ್ಧದ ಎಲ್ಲ ಆರೋಪಗಳು ದುರುದ್ದೇಶಪೂರಿತವಾಗಿವೆ ಮತ್ತು ಇವುಗಳಿಗೆ ಯಾವ ಆಧಾರವು ಇಲ್ಲ ಎಂದು ಸುಪ್ರೀಂ ಕೋರ್ಟ್ ಸೆಕ್ರೆಟರಿ ಜನರಲ್ ಸಂಜೀವ್ ಸುಧಾಕರ್‌ ಕಲ್ಗಾಂಕರ್‌ ತಿಳಿಸಿದ್ದಾರೆ. (ಏಜೆನ್ಸೀಸ್‌)