ಕಾನೂನು ತಿಳಿವಳಿಕೆ ಹೊಂದಿ

ಚಿಕ್ಕಮಗಳೂರು: ಮಹಿಳೆಯರು ಆತ್ಮವಿಶ್ವಾಸ ರೂಢಿಸಿಕೊಂಡು ಸ್ವ ಉದ್ಯೋಗದ ಜತೆಗೆ ಕಾನೂನು ತಿಳಿವಳಿಕೆ ಹೊಂದಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಗಂಟಿ ಸಲಹೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ಗುರುವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಸ್ತ್ರೀಶಕ್ತಿ ಸಂಘಗಳ ಮೂಲಕ ಜಾಗೃತರಾಗಿ ವ್ಯವಹಾರ ಜ್ಞಾನ ಮತ್ತು ಸ್ವ ಉದ್ಯೋಗ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹಿಂದೆ ಮಹಿಳೆಯರ ಹಕ್ಕಿಗಾಗಿ ಮಹಿಳಾ ದಿನಾ ಆಚರಣೆಯಾಗುತ್ತಿತ್ತು. ಈಗ ಮಹಿಳೆಯರ ಸಾಧನೆ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕಾರ್ಯಕ್ರಮ ಮಾಡಲಾಗುತ್ತಿದೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಜವಾಬ್ದಾರಿಯುತ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಸ್ತೂರಿಬಾ ಸದನದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ಮಾತನಾಡಿ, ಸ್ವಾತಂತ್ರ್ಯ್ಕಾಗಿ ಹೋರಾಡಿದ ವೀರ ವನಿತೆಯರ ಆದರ್ಶ ಗುಣಗಳನ್ನು ಪ್ರತಿಯೊಬ್ಬ ಮಹಿಳೆಯೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಿಳೆಯರು ಸ್ವತಂತ್ರವಾಗಿ ಎಲ್ಲ ಕ್ಷೇತ್ರದಲ್ಲೂ ದುಡಿಯುವುದರ ಜತೆಗೆ ಸಾಧನೆ ಮಾಡಿದ್ದಾರೆ ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಶ್ರುತಿ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲೂ ಸಾಧನೆ ಮಾಡುತ್ತಿದ್ದು, ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ. ಒಲಿಂಪಿಕ್ಸ್ ಪದಕ ಪಡೆದ ಅನೇಕ ಮಹಿಳಾ ಮಣಿಗಳಿದ್ದಾರೆ. ಪೈಲಟ್, ಸೈನಿಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಸ್ವ ಉದ್ಯೋಗಿ ಗೌರಮ್ಮ ಅವರನ್ನು ಸನ್ಮಾನಿಸಲಾಯಿತು. ಗ್ರಾಮಿಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಗೀತಾ, ತಾಲೂಕು ಯೋಜನಾಧಿಕಾರಿ ಸುನೀತಾ ಪ್ರಭು, ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್, ಮಹಿಳಾ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಎ.ಶಶಿಕಲಾ, ನಾಗಭೂಷಣ್ ಪೈ, ರತ್ನಾ ಇದ್ದರು.