ಉತ್ತರಪ್ರದೇಶ: ಜಿಲ್ಲಾ ನ್ಯಾಯಾಧೀಶರ ಮಗ ಎಂದು ಹೇಳಲಾದ ವ್ಯಕ್ತಿಯೊಬ್ಬ ತನ್ನ ಕಾರನ್ನು ಎಳೆದೊಯ್ದ ಟ್ರಾಫಿಕ್ ಪೊಲೀಸರಿಗೆ ಬೆದರಿಕೆ ಹಾಕಿದ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಹಣ ಕೊಟ್ಟು 2 ವರ್ಷವಾದರೂ ಗ್ರಾಪಂಗೆ ಆಟೋಟಿಪ್ಪರ್ ನೀಡದೆ ಮೋಸ
ಜಿಲ್ಲಾ ನ್ಯಾಯಾಧೀಶರೊಬ್ಬರ ಪುತ್ರನ ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರು ಹಜರತ್ ಗಂಜ್ನ ನೋ ಪಾರ್ಕಿಂಗ್ ವಲಯದಲ್ಲಿ ನಿಲುಗಡೆ ಮಾಡಲಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ವಾಹನ ಸಂಖ್ಯೆಯನ್ನು ಹಲವು ಬಾರಿ ಮೈಕ್ನಲ್ಲಿ ಕೂಗಿ, ಕೂಡಲೇ ತೆರವುಗೊಳಿಸಲು ತಿಳಿಸಿದ್ದಾರೆ. ಆದ್ರೆ, ಎಷ್ಟು ಬಾರಿ ಹೇಳಿದರು, ಕಾರಿನ ಬಳಿ ಬಾರದ ಚಾಲಕನ ವಿರುದ್ಧ ಕ್ರಮ ಜರುಗಿಸಿದ ಪೊಲೀಸರು, ಕಾರನ್ನು ಟೋಯಿಂಗ್ ಮಾಡಿದ್ದಾರೆ.
ಸಂಚಾರಿ ಪೊಲೀಸರ ಬಳಿ ಬಂದ ಜಿಲ್ಲಾ ನ್ಯಾಯಾಧೀಶರೊಬ್ಬರ ಪುತ್ರ, ಕುಪಿತಗೊಂಡು ತನ್ನ ಕಾರನ್ನು ಕೂಡಲೇ ಇಳಿಸಲು ಹೇಳಿದ್ದಾನೆ. ಆದ್ರೆ, ಪೊಲೀಸರು ದಂಡ ಪಾವತಿಸಿ, ತದನಂತರ ತೆಗೆದುಕೊಂಡು ಹೋಗಲು ತಿಳಿಸಿದ್ದಾರೆ. ಇದಕ್ಕೆ ಸಿಡಿಮಿಡಿಗೊಂಡ ವ್ಯಕ್ತಿ, ಸಂಚಾರಿ ಪೊಲೀಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಮೋಕ್ಷ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ: ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸು:ಶಾಸಕ ಹೆಚ್.ಪಿ.ಸ್ವರೂಪ್
ರಸ್ತೆಯಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವ್ಯಕ್ತಿ, ಕಾರನ್ನು ಬಿಟ್ಟುಬಿಡಿ. ನಾನು ಜಿಲ್ಲಾ ನ್ಯಾಯಾಧೀಶರ ಪುತ್ರ, ಈ ಕೂಡಲೇ ಜಾಮರ್ ಹಾಕಿದ ಕಾರನ್ನು ಬಿಡದಿದ್ದರೆ, ನಿಮಗೆ ತಕ್ಕ ಪಾಠ ಕಲಿಸುತ್ತೇನೆ. ಪೊಲೀಸ್ ಠಾಣೆಗೆ ಕರೆದೊಯ್ದು ಇದರ ಪರಿಣಾಮ ಎದುರಿಸುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸ್ವಲ್ಪ ಸಮಯದ ಬಳಿಕ ಪೊಲೀಸರು ಆತನಿಂದ 1,100 ರೂ. ದಂಡವನ್ನು ಪಾವತಿಸಿಕೊಂಡು ಕಾರನ್ನು ಬಿಡುಗಡೆ ಮಾಡಿದ್ದಾರೆ,(ಏಜೆನ್ಸೀಸ್).