ಪ್ರೇರಣಾ ಉತ್ಸವಕ್ಕೆ ಅದ್ದೂರಿ ಚಾಲನೆ

ಚಿಕ್ಕೋಡಿ: ಕಲೆ, ಸಂಸ್ಕೃತಿ, ಕೌಶಲಗಳು, ಆಟಗಳು ಹಾಗೂ ಗ್ರಾಮೀಣ ಜಗತ್ತಿನಲ್ಲಿ ಜಾನಪದ ಭಾಷಾ ಸೊಗಡನ್ನು ಸಾಕ್ಷೀಕರಿಸುವ ಮಹತ್ವಪೂರ್ಣ 7ನೇ ಪ್ರೇರಣಾ ಉತ್ಸವಕ್ಕೆ ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯಿಂದ ಭಾನುವಾರ ಚಾಲನೆ ದೊರೆಯಿತು.

ಯಕ್ಸಂಬಾ ಜೊಲ್ಲೆ ಉದ್ಯೋಗ ಸಮೂಹ ಪ್ರತಿವರ್ಷ ಡಿ.23ರಿಂದ 28ರ ವರೆಗೆ ಸಂಸ್ಥೆಯ ಪ್ರೇರಣಾ ಶಕ್ತಿ ಜ್ಯೋತಿಪ್ರಸಾದ ಜೊಲ್ಲೆ ಅವರ ಹುಟ್ಟುಹಬ್ಬ ನಿಮಿತ್ತ ಪ್ರೇರಣಾ ಉತ್ಸವ ಹಮ್ಮಿಕೊಳ್ಳುತ್ತಿದೆ. ಈ ಉತ್ಸವ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗಾಗಿ ಹಮ್ಮಿಕೊಳ್ಳಲಾಗುತ್ತದೆ.

ಭಾನುವಾರ ಬೆಳಗ್ಗೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜ್ಯೋತಿಬಾ ಪಲ್ಲಕ್ಕಿಗಳು, ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಹಯೋಗದಲ್ಲಿ ಗಾರುಡಿಗೊಂಬೆ ಕುಣಿತ, ನಂದಿಧ್ವಜ, ವೀರವೇಷ, ಮಹಿಳಾ ಡೊಳ್ಳು ಕುಣಿತ, ಪೂಜಾ ಕುಣಿತ, ರಾಮಲೀಲಾ, ಹಗಲುವೇಷ, ಗ್ರಾಮೀಣ ಭಾಗದ ಕಲಾವಿದರಿಂದ ಲೇಜಿಮ್, ಟಿಪರಿ, ಝಾಂಜ್ ಪಥಕ, ಕರಬಲ್, ಕುದುರೆ ಕುಣಿತ ಸೇರಿ ಸಕಲ ವಾದ್ಯಮೇಳದೊಂದಿಗೆ ಕಲಾ ತಂಡಗಳನ್ನು ಒಳಗೊಂಡಿರುವ ಮೆರವಣಿಗೆ ಶಿವಶಂಕರ ಜೊಲ್ಲೆ ಶಾಲೆಯಿಂದ ಹಾಗೂ ಸಾಮೂಹಿಕ ಗುಗ್ಗಳೋತ್ಸವ ಪಟ್ಟಣದ ವಿಠ್ಠಲ ಮಂದಿರದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜ್ಯೋತಿಬಾಚ್ ನಾವಾನ್ ಚಾಂಗಭಲ್ ಎಂಬ ಜಯಘೋಷದೊಂದಿಗೆ ಸಂಚರಿಸುತ್ತಾ 3 ಗಂಟೆಗಳ ವರೆಗೆ ಸಾಗಿ ಪಟ್ಟಣದ ಜನರ ಮನ ಸೆಳೆಯಿತು. ಬಳಿಕ ನಣದಿಯ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆ ಆವರಣಕ್ಕೆ ಮೆರವಣಿಗೆ ತಲುಪಿ ಮುಕ್ತಾಯಗೊಂಡಿತು.

ಜೊಲ್ಲೆ ಉದ್ಯೋಗ ಸಮೂಹದ 7ನೇ ಪ್ರೇರಣಾ ಉತ್ಸವ, ವಿವಿಧ ವ್ಯಾಪಾರ ಮಳಿಗೆ, ಅಮೃತಾ ಸ್ವಸಹಾಯ ಸಂಘಗಳ ಸ್ಟಾಲ್, ಹಳೇ ವಸ್ತುಗಳ ಪ್ರದರ್ಶನ, ಚಿತ್ರಕಲಾ ಮತ್ತು ಕ್ರಾಫ್ಟ ವಸ್ತುಗಳ ಪ್ರದರ್ಶನ ಮತ್ತು ವಿಜ್ಞಾನ ಪ್ರದರ್ಶನಗಳ ಉದ್ಘಾಟನೆಯನ್ನು ಚಿಕ್ಕೋಡಿ, ನಿಪ್ಪಾಣಿ ಶ್ರೀಗಳು ಹಾಗೂ ಜೊಲ್ಲೆ ಊದ್ಯೋಗ ಸಮೂಹದ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ ಹಾಗೂ ಬಸವಜ್ಯೋತಿ ಯೂತ್ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ನೆರವೇರಿಸಿದರು.