ಪತ್ರಕರ್ತ ಯತಿರಾಜ್ ನಿರ್ದೇಶನದ ಸಿನಿಮಾ ‘ಸಂಜು‘. ಪ್ರೇಮ ಕಥೆಗಳಿಗೆ ಕೊನೆಯಿಲ್ಲ, ಭಾವನಾತ್ಮಕ ಸಂಬಂಧಗಳಿಗೆ ಸಾವಿಲ್ಲ, ಪ್ರಕೃತಿಗೆ ಸೋಲದ ಮನಸ್ಸಿಲ್ಲ ಎಂಬುದನ್ನ ಚೆನ್ನಾಗಿ ಅರ್ಥೈಸಿಕೊಂಡಿರುವ ನಟ- ನಿರ್ದೇಶಕ ಯತಿರಾಜ್, ಮೇಲಿನ ಮೂರೂ ಅಂಶಗಳನ್ನು ಒಂದೇ ಫ್ರೇಮಿನಲ್ಲಿ ಸೆರೆ ಹಿಡಿದು, ‘ಸಂಜು‘ ಮೂಲಕ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಬಗ್ಗೆ ಯತಿರಾಜ್, ‘ವಿಶೇಷವಾಗಿ ಟೀನೇಜಿನಲ್ಲಿ ಬಹಳಷ್ಟು ಏರಿಳಿತಗಳು, ಸೋಲುಗಳು, ಹತಾಶೆಗಳು ಅವಮಾನಗಳು ಘಟಿಸುತ್ತವೆ. ಕೆಲವರು ಅದನ್ನು ಸುಲಭವಾಗಿ ಮೆಟ್ಟಿ ಮುಂದೆ ಸಾಗುತ್ತಾರೆ. ಇನ್ನೂ ಕೆಲವರು ತಮಗೆ ಎದುರಾಗುವ ಘಟನೆಗಳಿಗೆ ಅಂಜಿ ಎದೆಗುಂದುತ್ತಾರೆ. ಅಂತಹ ಎರಡು ಪ್ರಸಂಗವನ್ನು ಪ್ರೀತಿಯ ಚೌಕಟ್ಟಿನಲ್ಲಿ ಹೇಳಿದ್ದೇನೆ. ನನ್ನ ಚಿತ್ರವನ್ನು ಎಲ್ಲರೂ ಮೆಚ್ಚುತ್ತಾರೆ ಎಂದು ನಾನು ಹೇಳಲಾರೆ. ಆದರೆ, ಬದುಕನ್ನು ಮತ್ತು ಸಂಬಂಧಗಳನ್ನು ಆಳದ ದೃಷ್ಟಿಯಿಂದ ನೋಡುವ ಮಂದಿ ಅಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ ‘ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಚಿತ್ರದ ಹೈಲೈಟ್ಗಳಲ್ಲಿ ಲೊಕೇಷನ್ ಕೂಡ ಒಂದು ಎನ್ನುವ ಯತಿರಾಜ್, ‘ಮಡಿಕೇರಿಯ ಮೂರ್ನಾಡುವಿನಲ್ಲಿ ಹಾಕಲಾಗಿದ್ದ ಬಸ್ ಸ್ಟಾಪ್ ಸೆಟ್, ನಾಯಕಿಯ ಮನೆ, ನಾಯಕನ ಮನೆ ಮತ್ತು ಅಲ್ಲಿನ ಪರಿಸರ ಚಿತ್ರಕ್ಕೆ ಮೆರುಗು ತಂದುಕೊಟ್ಟಿದೆ. ಅದರ ತೂಕ ಹೆಚ್ಚುವಂತೆ ಮಾಡಿದ್ದು ಚಿತ್ರದಲ್ಲಿ ನಟಿಸಿದ ಕಲಾವಿದರು. ಸುಂದರಶ್ರೀ, ಸಂಗೀತ, ಬಲರಾಜುವಾಡಿ, ಅಪೂರ್ವ, ಬೌ ಬೌ ಜಯರಾಮ್, ಮಹಂತೇಶ್, ಪ್ರಕಾಶ್ ಶೆಣೈ ಮತ್ತು ಕಾತ್ಯಾಯಿನಿ ಅವರುಗಳ ಅಭಿನಯವಂತೂ ತೆರೆಯ ಮೇಲೇ ಸವಿಯಬೇಕು‘ ಎನ್ನುತ್ತಾರೆ.
‘ಸಂಜು‘ ಚಿತ್ರಕ್ಕೆ ಮನ್ವಿತ್ ನಾಯಕನಾಗಿದ್ದು, ಅವರಿಗೆ ನಿರ್ದೇಶಕ ಓಂಪ್ರಕಾಶ್ ರಾವ್, ನಟಿ ರೇಖಾ ದಾಸ್ ಪುತ್ರಿ ಸಾತ್ವಿಕಾ ಜೋಡಿಯಾಗಿದ್ದಾರೆ.
ವಿದ್ಯಾ ನಾಗೇಶ್ ಛಾಯಾಗ್ರಹಣ, ವಿಜಯ್ ಹರಿತ್ಸ ಹಿನ್ನೆಲೆ ಸಂಗೀತ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮದನ್- ಹರಿಣಿ ನೃತ್ಯ ಸಂಯೋಜನೆಯಯಿರುವ ಸಂಜು ನಾಳೆ ರಾಜ್ಯಾದ್ಯಂತ ತೆರೆಗೆ ಬರಲಿದೆ.