ಮೀಸಲಾತಿ ಶಿಕ್ಷಣ, ಉದ್ಯೋಗಕ್ಕೆ ಸೀಮಿತ

ಮೈಸೂರು: ಸಮಾನತೆ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಜೋಡಣೆ ಮಾಡಿದ ಮೀಸಲಾತಿ ಈಗ ಉದ್ಯೋಗ, ಶಿಕ್ಷಣಕ್ಕೆ ಮಾತ್ರ ಸೀಮಿತಗೊಂಡಿದ್ದು, ಯಾವುದೇ ಸಾಮಾಜಿಕ ಬದಲಾವಣೆ ಆಗುತ್ತಿಲ್ಲ ಎಂದು ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಅಭಿಪ್ರಾಯಪಟ್ಟರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ರಾಕೇಶ್ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಸಂಸ್ಥೆಯಿಂದ ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ಸೋಮವಾರ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯದ ಸೋಲು, ಗೆಲುವುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಸಮಾಜದಲ್ಲಿದ್ದ ಅಸಮಾನತೆ, ಜಾತಿ ವ್ಯವಸ್ಥೆ ಹೋಗಲಾಡಿಸುವ ಉದ್ದೇಶದಿಂದ ಮೀಸಲಾತಿಯನ್ನು ಸಂವಿಧಾನದಲ್ಲಿ ಸೇರಿಸಲಾಯಿತು. ಇದರಿಂದ ಸಾಮಾಜಿಕ ಬದಲಾವಣೆಯಾಗಿ ಜಾತಿ ವ್ಯವಸ್ಥೆ ಹೋಗುತ್ತದೆ ಎನ್ನುವ ಆಶಾಭಾವನೆ ಎಲ್ಲರಲ್ಲಿಯೂ ಮೂಡಿತ್ತು. ಆದರೆ, ಮೀಸಲಾತಿ ಉದ್ಯೋಗ, ಶಿಕ್ಷಣ, ರಾಜಕೀಯಕ್ಕೆ ಮಾತ್ರ ಸೀಮಿತಗೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಶಿಕ್ಷಣದಿಂದ ಎಲ್ಲರಲ್ಲೂ ಅರಿವು ಮೂಡಿ ಜಾತಿ ವ್ಯವಸ್ಥೆ ಹೋಗಿ ಸಾಮಾಜಿಕ ಸುಧಾರಣೆಯಾಗುತ್ತದೆ ಎನ್ನುವ ಭಾವನೆ ಇತ್ತು. ಆದರೆ, ಜನರು ವಿದ್ಯಾವಂತರಾದಷ್ಟು ಜಾತಿ ವ್ಯವಸ್ಥೆ ಮತ್ತಷ್ಟು ಬಲಗೊಳ್ಳ್ಳುತ್ತಿರುವುದು ವ್ಯವಸ್ಥೆಯ ದುರಂತ. ಜಾತಿಗಳು ಒಂದುಗೂಡಲು ಬಿಡದ ಮನಸ್ಥಿತಿಗಳು ತಮ್ಮ ರಾಜಕೀಯ ಉದ್ದೇಶಕ್ಕೆ ಒಡೆದಾಳುವ ನೀತಿ ಅನುಸರಿಸುತ್ತಿವೆೆ. ಮನುವಾದಿಗಳು ಮತ್ತೆ ಗುಲಾಮಿ ಸಂಸ್ಕೃತಿ ವ್ಯವಸ್ಥೆಗೆ ತಳ್ಳುವ ಅಪಾಯವಿದೆ ಎಂದರು.

ಡಿ.ದೇವರಾಜ ಅರಸು ಬಳಿಕ ಸಾಮಾಜಿಕ ಪರಿಕಲ್ಪನೆಯಲ್ಲಿ ಅಡಳಿತ ನಡೆಸಿದ ಸಿದ್ದರಾಮಯ್ಯ ಅವರು ಜಾರಿಗೆ ತಂದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಂಘ, ಸಂಸ್ಥೆಗಳು ಮುಂದಾಗಲಿಲ್ಲ. ಜತೆಗೆ ಅವರ ಪಕ್ಷದವರೂ ಈ ಕಾರ್ಯ ಮಾಡದಿರುವುದರಿಂದ ದಲಿತರು, ಹಿಂದುಳಿದವರು ಅವರ ವಿರುದ್ಧ ಮತಹಾಕಿ ಸೋಲುವಂತೆ ಮಾಡಿದರು ಎಂದರು.

ಜನರು ಎಚ್ಚರಗೊಳ್ಳಬೇಕು:  ಹಿರಿಯ ಪತ್ರಕರ್ತ ಡಿ.ಉಮಾಪತಿ ಮಾತನಾಡಿ, ಸ್ವಾತಂತ್ರೃ ಬಂದಾಗಿನಿಂದ ಮೀಸಲಾತಿ ನೀಡುತ್ತಾ ಬಂದಿದ್ದರೂ ಅರ್ಹರಿಗೆ ಇನ್ನೂ ಸರಿಯಾದ ಹುದ್ದೆ ಸಿಗುತ್ತಿಲ್ಲ. ತಮ್ಮ ಆಡಳಿತ, ರಾಜಕೀಯ ವ್ಯವಸ್ಥೆಯಲ್ಲಿ ಯಾವ ಜಾತಿಯವರಿಗೆ ಎಷ್ಟು ಸ್ಥಾನ, ಹುದ್ದೆಗಳು ಸಿಕ್ಕಿವೆ ಎನ್ನುವ ಮಾಹಿತಿಯನ್ನು ಸರ್ಕಾರ ಸಾರ್ವಜನಿಕರ ಮುಂದೆ ಇಡಬೇಕಿದೆ ಎಂದು ಒತ್ತಾಯಿಸಿದರು.

ಪಟ್ಟಭದ್ರ ಹಿತಾಸಕ್ತಿಗಳು ಜಾತಿಯನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆಯೇ ವಿನಾ, ಸಾಮಾಜಿಕ ಕಾಳಜಿ ಕಡಿಮೆಯಾಗಿದೆ. ಜಾತಿ, ಧರ್ಮಗಳಲ್ಲಿಯೇ ಒಡಕುಂಟು ಮಾಡಿ ತಮ್ಮ ಅಧಿಕಾರ ಭದ್ರಪಡಿಸಿಕೊಳ್ಳುವ ವ್ಯವಸ್ಥೆ ನಡೆಯುತ್ತಿದೆ. ಈ ಬಗ್ಗೆ ಜನರು ಎಚ್ಚರ ವಹಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.

ಹಿಂದೆ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದವರೇ ಈಗ ಅವರನ್ನ ಆರಾಧಿಸುವಂತೆ ನಟಿಸುತ್ತಿದ್ದಾರೆ. ರಾಮ, ಕೃಷ್ಣರನ್ನು ಟೀಕಿಸಿದ್ದರು ಎನ್ನುವ ಕಾರಣ ಮುಂದಿಟ್ಟುಕೊಂಡು ಅಂಬೇಡ್ಕರ್ ಅವರ ಹೆಸರಿನ ಮುಂದೆ ಅವರ ತಂದೆ ರಾಮ್ ಜೀ ಹೆಸರು ಸೇರಿಸುವ ಕಾರ್ಯವನ್ನು ಸಂಘ ಪರಿವಾರದವರು ಮಾಡುತ್ತಿದಾರೆ ಎಂದು ಟೀಕಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಹಾಗೂ ಬುಡಕಟ್ಟು ಮೂಲ ನಿವಾಸಿಗಳ ಒಕ್ಕೂಟವನ್ನು ಮುಖ್ಯಮಂತ್ರಿಗಳ ನಿವೃತ್ತ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ ಉದ್ಘಾಟಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳೇಗೌಡ ನಾಗವಾರ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರಗುರು ಇತರರು ಮಾತನಾಡಿದರು. ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಕನ್ನಡ ಸಾಹಿತ್ಯ ಕಲಾಕೂಟದ ಎಂ.ಚಂದ್ರಶೇಖರ್ ಇತರರು ಹಾಜರಿದ್ದರು.