ಬೆಳಗಾವಿ: ಸಂಸದ ಜಗದೀಶ ಶೆಟ್ಟರ ಹಾಗೂ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಜತೆಗೂಡಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ನವದೆಹಲಿಯ ಅವರ ಕಚೇರಿಯಲ್ಲಿ ಗುರುವಾರ ಭೇಟಿ ಮಾಡಿ ಬೆಳಗಾವಿ ಲೋಕಸಭಾ ಕ್ಷೇತ್ರದ ವಿವಿಧ ಬೇಡಿಕೆ ಅನುಷ್ಠಾನದ ಕುರಿತು ಚರ್ಚಿಸಿದರು.
ಲೋಕಾಪುರ-ರಾಮದುರ್ಗ-ಸವದತ್ತಿ-ಧಾರವಾಡ ನಡುವೆ ನೂತನ ರೈಲು ಮಾರ್ಗ ಅಂಗವಾಗಿ ಅವಶ್ಯವಿರುವ ಮಾರ್ಗ ಸಮೀಕ್ಷೆ ನಡೆಸುವ ಬಗ್ಗೆ ಪ್ರಸ್ತಾಪಿಸಲಾಯಿತು. ಸವದತ್ತಿಯ ರೇಣುಕಾದೇವಿಯ ಭಕ್ತಾದಿಗಳ ಅನುಕೂಲಕ್ಕಾಗಿ ಈ ಮಾರ್ಗ ರಚನೆ ಅವಶ್ಯ ಕುರಿತು ಮನವರಿಕೆ ಮಾಡಲಾಯಿತು. ಸಮೀಕ್ಷೆ ಕಾರ್ಯ ಕೈಗೊಳ್ಳುವ ಬಗ್ಗೆ ಶೀಘ್ರ ಆದೇಶಕ್ಕಾಗಿ ಒತ್ತಾಯಿಸಲಾಯಿತು. ಬೆಂಗಳೂರು-ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ ರೈಲು ಸೇವೆಯನ್ನು ಬೆಳಗಾವಿವರೆಗೆ ವಿಸ್ತರಿಸಲು ಕೋರಲಾಯಿತು. ಬೆಳಗಾವಿ-ಮಿರಜ್ ನಡುವೆ ದಿನನಿತ್ಯ ಸಂಚರಿಸುವ ಪ್ಯಾಸೆಂಜರ್ ರೈಲು ಸೇವೆಯನ್ನು ಕಾಯಂ ಆಗಿ ಸಂಚರಿಸುವ ನಿಟ್ಟಿನಲ್ಲಿ ಆದೇಶಿಸುವಂತೆ ವಿನಂತಿಸಲಾಯಿತು.
ರೈಲ್ವೆ ಸಚಿವರು ನಮ್ಮ ಬೇಡಿಕೆಗಳ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಬೇಡಿಕೆ ಈಡೇರಿಸುವ ಬಗ್ಗೆ ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು ಎಂದು ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.