More

    ಫೆಡರರ್ ಪತನ, ಫೈನಲ್​ಗೆ ಜೋಕೊವಿಕ್: ಮಹಿಳಾ ಸಿಂಗಲ್ಸ್ ಪ್ರಶಸ್ತಿ ಸುತ್ತಿಗೇರಿದ ಮುಗುರುಜಾ, ಕೆನಿನ್ 

    ಮೆಲ್ಬೋರ್ನ್: ಒಟ್ಟಾರೆ 12 ಗಂಟೆ 44 ನಿಮಿಷಗಳ ಕಾಲ ಬೆವರು ಸುರಿಸಿ ಉಪಾಂತ್ಯಕ್ಕೇರಿದ್ದ ಸ್ವಿಸ್ ದಿಗ್ಗಜ ರೋಜರ್ ಫೆಡರರ್, ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಕ್ ವಿರುದ್ಧ 2 ಗಂಟೆ 18 ನಿಮಿಷಗಳಲ್ಲೇ ನೇರಸೆಟ್​ಗಳಿಂದ ಸೋತು, 2020ರ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೇಲಿಯನ್ ಓಪನ್​ನಿಂದ ಹೊರಬಿದ್ದಿದ್ದಾರೆ.

    ಸೆರ್ಬಿಯಾ ತಾರೆ ಜೋಕೊವಿಕ್ ಅವರೀಗ ಮೆಲ್ಬೋರ್ನ್​ನಲ್ಲಿ 8ನೇ ಬಾರಿ ಪ್ರಶಸ್ತಿ ಜಯಿಸಲು ಯುವ ಆಟಗಾರರಾದ ಅಲೆಕ್ಸಾಂಡರ್ ಜ್ವೆರೇವ್ ಅಥವಾ ಡೊಮಿನಿಕ್ ಥೀಮ್ ಸವಾಲು ಎದುರಿಸಲಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಫೇವರಿಟ್​ಗಳಾದ ಅಗ್ರ ಶ್ರೇಯಾಂಕಿತೆ ಆಶ್ಲೆಗ್ ಬಾರ್ಟಿ ಮತ್ತು 4ನೇ ಶ್ರೇಯಾಂಕಿತೆ ಸಿಮೋನಾ ಹಲೆಪ್ ಅವರನ್ನು ಹೊರಗಟ್ಟಿರುವ ಸೋಫಿಯಾ ಕೆನಿನ್ ಮತ್ತು ಗಾರ್ಬಿನ್ ಮುಗುರುಜಾ ಫೈನಲ್ ಪ್ರವೇಶಿಸಿದ್ದಾರೆ.

    ರಾಡ್ ಲೆವರ್ ಅರೆನಾದಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕಿತ ಜೋಕೊವಿಕ್, 7-6 (7-1), 6-4, 6-3ರಿಂದ 3ನೇ ಶ್ರೇಯಾಂಕಿತ ಫೆಡರರ್​ಗೆ ಸೋಲುಣಿಸಿದರು. ಉಭಯ ಆಟಗಾರರ 50ನೇ ಮುಖಾಮುಖಿಯಲ್ಲಿ ಜೋಕೋ 27ನೇ ಜಯದೊಂದಿಗೆ ಮೇಲುಗೈ ಉಳಿಸಿಕೊಂಡರು. 32 ವರ್ಷದ ಜೋಕೋ ಮೆಲ್ಬೋರ್ನ್​ನಲ್ಲಿ ಈ ಹಿಂದೆ ಫೈನಲ್​ಗೇರಿರುವ 7 ಬಾರಿಯೂ ಪ್ರಶಸ್ತಿ ಗೆದ್ದಿರುವುದು ವಿಶೇಷ.

    ಭಾನುವಾರದ ಫೈನಲ್​ನಲ್ಲಿ ಗೆದ್ದರೆ ಜೋಕೋ, ರಾಫೆಲ್ ನಡಾಲ್​ರನ್ನು ಹಿಂದಿಕ್ಕಿ ಮತ್ತೊಮ್ಮೆ ವಿಶ್ವ ನಂ. 1 ಪಟ್ಟಕ್ಕೂ ಏರಲಿದ್ದಾರೆ. 38 ವರ್ಷದ ಫೆಡ್ ಕ್ವಾರ್ಟರ್​ಫೈನಲ್ ಪಂದ್ಯದ 5 ಸೆಟ್​ಗಳ ಹೋರಾಟದಿಂದಾಗಿ ತೊಡೆಸಂದು ಗಾಯದಿಂದಲೂ ಬಳಲುತ್ತಿದ್ದರು. 1991ರ ಬಳಿಕ ಗ್ರಾಂಡ್ ಸ್ಲಾಂ ಗೆದ್ದ ಅತಿ ಹಿರಿಯ ಆಟಗಾರ ಎನಿಸುವ ಅವಕಾಶವನ್ನೂ ಫೆಡ್ ಕೈಚೆಲ್ಲಿದರು.

    ನಿವೃತ್ತಿ ಯೋಜನೆ ಇಲ್ಲ: 2018ರಲ್ಲಿ ಕೊನೆಯದಾಗಿ ಮೆಲ್ಬೋರ್ನ್ನಲ್ಲೇ ಕೊನೆಯ ಹಾಗೂ 20ನೇ ಗ್ರಾಂಡ್ ಸ್ಲಾಂ ಗೆದ್ದಿರುವ ಫೆಡರರ್, ತಾನೀಗಲೂ ಗ್ರಾಂಡ್ ಸ್ಲಾಂ ಗೆಲ್ಲಬಲ್ಲೆ ಎಂದಿದ್ದಾರೆ. ಈ ಮೂಲಕ ಸದ್ಯಕ್ಕೆ ನಿವೃತ್ತಿ ಯೋಜನೆ ತಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಭಾರತದ ಸವಾಲು ಅಂತ್ಯ

    ಕನ್ನಡಿಗ ರೋಹನ್ ಬೋಪಣ್ಣ ಮತ್ತು ಉಕ್ರೇನ್​ನ ನಾಡಿಯಾ ಕಿಚೆನಾಕ್ ಜೋಡಿ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್​ಫೈನಲ್​ನಲ್ಲಿ ಸೋಲು ಕಂಡಿದೆ. ಇದರಿಂದ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಬೋಪಣ್ಣ-ಕಿಚೆನಾಕ್ ಜೋಡಿ 0-6, 2-6 ನೇರಸೆಟ್​ಗಳಿಂದ 5ನೇ ಶ್ರೇಯಾಂಕಿತ ನಿಕೋಲಾ ಮೆಕ್​ಟಿಕ್ ಮತ್ತು ಬಾರ್ಬೆರಾ ಕ್ರೆಸಿಕೋವಾ ಜೋಡಿಗೆ ಶರಣಾಯಿತು.

    ನಾಳೆ ಮುಗುರುಜಾ-ಕೆನಿನ್ ಪ್ರಶಸ್ತಿ ಹಣಾಹಣಿ

    ಸ್ಪೇನ್ ತಾರೆ ಗಾರ್ಬಿನ್ ಮುಗುರುಜಾ ಮತ್ತು ಅಮೆರಿಕದ ಯುವ ಆಟಗಾರ್ತಿ ಸೋಫಿಯಾ ಕೆನಿನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಶನಿವಾರ ಪ್ರಶಸ್ತಿ ಹೋರಾಟ ನಡೆಸಲಿದ್ದಾರೆ. ಕಳೆದೆರಡು ವರ್ಷಗಳ ನೀರಸ ಆಟದಿಂದ ಶ್ರೇಯಾಂಕರಹಿತೆಯಾಗಿ ಕಣಕ್ಕಿಳಿದಿರುವ 2 ಗ್ರಾಂಡ್ ಸ್ಲಾಂಗಳ (ಫ್ರೆಂಚ್ ಓಪನ್, ವಿಂಬಲ್ಡನ್) ಒಡತಿ ಮುಗುರುಜಾ ಮೆಲ್ಬೋರ್ನ್​ನಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದಾರೆ.

    ರೊಮೆನಿಯಾದ ಸಿಮೋನಾ ಹಲೆಪ್ ವಿರುದ್ಧದ ಸೆಮಿಫೈನಲ್​ನಲ್ಲಿ 26 ವರ್ಷದ ಮುಗುರುಜಾ 7-6 (10-8), 7-5 ನೇರಸೆಟ್​ಗಳಿಂದ ಗೆಲುವು ದಾಖಲಿಸಿದರು. ಮಾಜಿ ನಂ. 1 ಮುಗುರುಜಾ ಈಗ ವಿಶ್ವ ನಂ. 32 ಆಟಗಾರ್ತಿಯಾಗಿದ್ದಾರೆ. 2 ಗ್ರಾಂಡ್ ಸ್ಲಾಂಗಳ ಒಡತಿ ಹಲೆಪ್ ಸೋಲಿನ ಬಳಿಕ ಮೆಲ್ಬೋರ್ನ್​ನ ಬಿಸಿಲನ್ನು ದೂರಿದ್ದು, ‘ಈ ಬಿಸಿಲು ನನ್ನನ್ನು ಕೊಂದಿತು’ ಎಂದು ಉದ್ಘರಿಸಿದರು.

    ಸೆಮಿಫೈನಲ್ ಹಾದಿಯಲ್ಲಿ ಅವರು ಒಂದೂ ಸೆಟ್ ಸೋತಿರಲಿಲ್ಲ. ಮೆಲ್ಬೋರ್ನ್​ನಲ್ಲಿ ಗುರುವಾರ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಸೋಲಿನ ನಡುವೆ 28 ವರ್ಷದ ಹಲೆಪ್ ಮುಂದಿನ ವಾರ ವಿಶ್ವ ರ್ಯಾಂಕಿಂಗ್​ನಲ್ಲಿ 2ನೇ ಸ್ಥಾನಕ್ಕೇರಲಿದ್ದಾರೆ. ಮುಗುರುಜಾ 2014 ಬಳಿಕ ಮೊದಲ ಬಾರಿ ಗ್ರಾಂಡ್ ಸ್ಲಾಂನಲ್ಲಿ ಶ್ರೇಯಾಂಕರಹಿತೆಯಾಗಿ ಆಡುತ್ತಿದ್ದಾರೆ.

    ಬಾರ್ಟಿಗೆ ಕೆನಿನ್ ಶಾಕ್

    14ನೇ ಶ್ರೇಯಾಂಕಿತೆ ಕೆನಿನ್ ಅಚ್ಚರಿಯ ನಿರ್ವಹಣೆ ಯೊಂದಿಗೆ ಆತಿಥೇಯರಿಗೆ ನಿರಾಸೆಯುಣಿಸಿದರು. ಕಳೆದ 42 ವರ್ಷಗಳಲ್ಲಿ ತವರಿನಲ್ಲಿ ಗ್ರಾಂಡ್ ಸ್ಲಾಂ ಗೆದ್ದ ಮೊದಲ ಆಸ್ಟ್ರೇಲಿಯಾ ಆಟಗಾರ್ತಿಯಾಗುವ ಹಂಬಲದಲ್ಲಿದ್ದ ಆಶ್ಲೆಗ್ ಬಾರ್ಟಿ ವಿರುದ್ಧ 21 ವರ್ಷದ ಕೆನಿನ್ 7-6 (8-6), 7-5 ನೇರಸೆಟ್​ಗಳಿಂದ ಗೆಲುವು ದಾಖಲಿಸಿ ಚೊಚ್ಚಲ ಗ್ರಾಂಡ್ ಸ್ಲಾಂ ಫೈನಲ್ ಪ್ರವೇಶಿಸಿದರು.

    ಕಳೆದ ವರ್ಷ 3 ಡಬ್ಲ್ಯುಟಿಎ ಪ್ರಶಸ್ತಿ ಜಯಿಸಿ ಮಿಂಚಿದ್ದ ಕೆನಿನ್, ತಮ್ಮ ಆದರ್ಶ ಆಟಗಾರ್ತಿ ಸೆರೇನಾ ವಿಲಿಯಮ್ಸ್​ಗೆ ಆಘಾತ ನೀಡುವ ಮೂಲಕವೂ ಸುದ್ದಿಯಾಗಿದ್ದರು. ಆ ಗೆಲುವು ತಮಗೆ ಸಾಕಷ್ಟು ಆತ್ಮವಿಶ್ವಾಸ ತುಂಬಿತ್ತು ಎಂದೂ ಕೆನಿನ್ ಹೇಳಿಕೊಂಡಿದ್ದರು. ಬಾರ್ಟಿ ವಿರುದ್ಧದ ಹಿಂದಿನ 5 ಪಂದ್ಯಗಳಲ್ಲಿ ಮಾಸ್ಕೋ ಮೂಲದ ಕೆನಿನ್ 4ರಲ್ಲಿ ಸೋತಿದ್ದರು. ಗೆಲುವಿನ ಬಳಿಕ ಕೆನಿನ್ ಆಸೀಸ್ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts