ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಕ್​ಗೆ ಸಾಕ್ಷಿ ಸಮೇತ ತಿರುಗೇಟು ನೀಡಿದ ಭೂ, ವಾಯು, ನೌಕಾಪಡೆಯ ಸೇನಾ ಮುಖ್ಯಸ್ಥರು

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಉಗ್ರರ ವಿರುದ್ಧ ಭಾರತ ನಡೆಸಿದ ವೈಮಾನಿಕ ದಾಳಿಯ ನಂತರ ಪಾಕಿಸ್ತಾನ ಮತ್ತು ಭಾರತ ಗಡಿಯಲ್ಲಿ ಉಂಟಾಗಿರುವ ಯುದ್ಧದ ವಾತವಾರಣ ಹಿನ್ನೆಲೆಯಲ್ಲಿ ಮೂರು ವಿಭಾಗದ ಭಾರತೀಯ ಸೇನಾ ಮುಖ್ಯಸ್ಥರು ಇದೇ ಮೊದಲ ಬಾರಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ವಾಯುಪಡೆಯ ಉಪ ಮುಖ್ಯಸ್ಥ ಆರ್​ಜಿಕೆ ಕಪೂರ್​, ನೌಕಾಪಡೆಯ ರೀರ್​ ಅಡ್ಮಿರಲ್​ ಡಿ.ಎಸ್​.ಗುಜ್ರಾಲ್​ ಹಾಗೂ ಭೂಸೇನೆಯ ಮೇಜರ್​ ಜನರಲ್​ ಸುರಿಂದರ್​ ಸಿಂಗ್​ ಮಹಲ್ ಅವರು ಗುರುವಾರ ಸಂಜೆ​ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಮೊದಲಿಗೆ ಪಾಕ್​ ವಶದಲ್ಲಿರುವ ವಿಂಗ್​ ಕಮಾಂಡರ್​ ಅಭಿನಂದನ್ ವರ್ಧಮಾನ್​​ ನಾಳೆ ಸ್ವದೇಶಕ್ಕೆ ಮರಳುತ್ತಿರುವುದನ್ನು ಸಂತೋಷದಿಂದ ಎದುರು ನೋಡುತ್ತಿದ್ದೇವೆ ಎಂದು ವಾಯುಪಡೆಯ ಉಪಮುಖ್ಯಸ್ಥ ಆರ್​ಜಿಕೆ ಕಪೂರ್​ ತಿಳಿಸಿದರು.

ದೇಶದ ಒಳನುಸುಳುವ ಪಾಕ್​ ವಿಮಾನಗಳನ್ನು ಹಿಮ್ಮೆಟ್ಟಿಸುವ ಕಾರ್ಯದಲ್ಲಿ ನಮ್ಮ ವಾಯುಪಡೆಯ ಯೋಧರು ನಿರತರಾಗಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಪಾಕ್​ ವಾಯುಪಡೆಯ ವಿಮಾನಗಳು ಬಾಂಬ್​ ದಾಳಿ ನಡೆಸಿದ್ದರೂ, ಅದರಿಂದ ಯಾವುದೇ ಹಾನಿಯಾಗಿಲ್ಲ. ಎಫ್​-16 ಹೆಸರಿನ ಪಾಕ್​ನ ಯುದ್ಧ ವಿಮಾನವನ್ನು ನಮ್ಮ ದೇಶದ ಮಿಗ್​ 21 ಬೈಸನ್​ ವಿಮಾನವು ಹೊಡೆದುರುಳಿಸಿದೆ ಎಂದು ಹೇಳಿದರು.

ಉಗ್ರರ ಮೇಲಿನ ದಾಳಿ ನಿಲ್ಲಿಸುವುದಿಲ್ಲ
ಇದೇ ವೇಳೆ ಮಾತನಾಡಿದ ಭೂಸೇನೆಯ ಮೇಜರ್​ ಜನರಲ್​ ಸುರಿಂದರ್​ ಸಿಂಗ್​ ಮಹಲ್​ ಅವರು ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ನಮ್ಮ ಸೇನೆ ಬದ್ಧವಾಗಿದೆ. ನಮ್ಮ ಹೋರಾಟ ಉಗ್ರರ ವಿರುದ್ಧವಷ್ಟೇ, ಪಾಕ್​ ವಿರುದ್ಧವಲ್ಲ. ಆದರೆ, ಇಲ್ಲಿಯವರೆಗೂ ಪಾಕಿಸ್ತಾನ ಉಗ್ರರರಿಗೆ ಸುರಕ್ಷತೆ ನೀಡುತ್ತಿರುವುದನ್ನು ಬಿಟ್ಟುಕೊಡುತ್ತಿಲ್ಲ. ಹಾಗಂತ ನಾವು ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುವುದಿಲ್ಲ. ಬದಲಾಗಿ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪಾಕ್​ಗೆ ಸಾಕ್ಷಿ ಸಮೇತ ತಿರುಗೇಟು
ಪಾಕ್​ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂಬುದಕ್ಕೆ ಸಾಕ್ಷಿ ತೋರಿಸಿದ ವಾಯುಪಡೆಯ ಉಪ ಮುಖ್ಯಸ್ಥ ಕಪೂರ್​ ಅವರು ಪಾಕ್​ ಯುದ್ಧ ವಿಮಾನ ಎಫ್​ 16 ಹೊತ್ತೊಯ್ಯುವ ಆ್ಯಮರಾಮ್(AMRAAM)​ ಕ್ಷಿಪ್ಪಣಿಯ ಒಂದು ಭಾಗವು ಪೂರ್ವ ರಜೌರಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿಸಿದರು. ಭಾರತದ ಭೂಪ್ರದೇಶದಲ್ಲೇ ಇದು ಕಂಡುಬಂದಿದೆ ಎಂದು ಸಾಕ್ಷಿ ಸಮೇತ ಪಾಕ್​ಗೆ ತಿರುಗೇಟು ನೀಡಿದರು.

ನಮ್ಮ ಮಿಗ್​-21 ಬೈಸನ್​ ವಿಮಾನದ ಮೇಲೆ ನೆರೆ ರಾಷ್ಟ್ರ ಪಾಕ್​, ಎಫ್​-16 ವಿಮಾನದಿಂದ ದಾಳಿ ಮಾಡಿ, ನಮ್ಮ ಇಬ್ಬರು ಪೈಲಟ್​ಗಳನ್ನು ಹೊರಗೆಳೆದಿದ್ದಾರೆ. ಆದರೆ, ಪಾಕ್ ತನ್ನ​ ಕಾರ್ಯಾಚರಣೆಯಲ್ಲಿ ಎಫ್​-16 ವಿಮಾನವನ್ನು ಬಳಸಿಲ್ಲ ಎಂದು ಸುಳ್ಳು ಹೇಳುತ್ತಿದೆ. ಆದರೆ, ರಜೌರಿಯಲ್ಲಿ ಸಿಕ್ಕಿರುವ ಪಾಕ್​ ಸಹಿ ಇರುವ ಆ್ಯಮರಾಮ್​ ಭಾಗಗಳು ಪಾಕ್​ ಸುಳ್ಳಿಗೆ ಸಾಕ್ಷಿಯಾಗಿದೆ ಎಂದು ಕಪೂರ್​ ತಿಳಿಸಿದರು.

ತಿರಗೇಟು ನೀಡಲು ನಾವು ಸಿದ್ಧರಿದ್ದೇವೆ
ನೌಕಾಪಡೆಯ ರೀರ್​ ಅಡ್ಮಿರಲ್​ ಡಿ.ಎಸ್.ಗುಜ್ರಾಲ್​ ಅವರು ಮಾತನಾಡಿ, ಪಾಕಿಸ್ತಾನ ನಡೆಸುವ ಯಾವುದೇ ಕುತಂತ್ರಕ್ಕೂ ತಿರಗೇಟು ನೀಡಲು ನಾವು ಸಿದ್ಧರಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳಲು ನಾವು ತಯಾರಿದ್ದೇವೆ. ನಮ್ಮ ನಾಗರಿಕರ ಸುರಕ್ಷತೆ ಹಾಗೂ ಭದ್ರತೆಯನ್ನು ನಾವು ಖಚಿತಪಡಿಸಬೇಕಿದೆ ಎಂದು ಪಾಕ್​ ವಿರುದ್ಧ ತಮ್ಮ ನಿಲುವನ್ನು ವ್ಯಕ್ತಪಡಿಸಿದರು.

ಇದೇ ವೇಳೆ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್​ನ ಬಾಳಾಕೋಟ್​ನಲ್ಲಿರುವ ಜೈಶ್​ ಎ ಮಹಮ್ಮದ್​ ಉಗ್ರ ಸಂಘಟನೆಯ ಉಗ್ರರ ಅಡಗುತಾಣಗಳನ್ನು ಹೊಡೆದುರುಳಿಸಿ ಯಶಸ್ವಿ ವೈಮಾನಿಕ ಕಾರ್ಯಾಚರಣೆ ನಡೆಸಿದ್ದರ ಸಾಕ್ಷಿ ಬಿಡುಗಡೆಯನ್ನು ರಾಜಕೀಯ ನಾಯಕರು ನಿರ್ಧರಿಸುತ್ತಾರೆ ಎಂದು ವಾಯುಪಡೆಯ ಮುಖ್ಯಸ್ಥರು ತಿಳಿಸಿದರು. (ಏಜೆನ್ಸೀಸ್​)