ನ್ಯಾಕ್ ಮಾನ್ಯತೆ ಪಡೆಯದಿದ್ದರೆ ಅನುದಾನ ಅಲಭ್ಯ

ಮೈಸೂರು: ನ್ಯಾಕ್‌ನಿಂದ ಹೆಚ್ಚಿನ ಶ್ರೇಣಿ ಪಡೆಯದಿದ್ದರೆ ಅಂತಹ ಕಾಲೇಜುಗಳಿಗೆ ಯುಜಿಸಿಯಿಂದ ಯಾವುದೇ ಅನುದಾನ ದೊರೆಯುವುದಿಲ್ಲ. ಹಾಗಾಗಿ ಎಲ್ಲ ಕಾಲೇಜುಗಳು ನ್ಯಾಕ್‌ನಿಂದ ಶ್ರೇಣೀಕೃತ ಮಾನ್ಯತೆ ಪಡೆದುಕೊಳ್ಳುವುದು ಅಗತ್ಯ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಆರ್.ಮುಗೇಶಪ್ಪ ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆಯಿಂದ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಸರ್ಕಾರಿ ಕಾಲೇಜು ಪ್ರಾಂಶುಪಾಲರು, ಐಕ್ಯೂಎಸಿ, ನ್ಯಾಕ್ ಸಂಯೋಜಕರಿಗಾಗಿ ನ್ಯಾಕ್‌ಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮೈಸೂರು ವಲಯಕ್ಕೆ 75 ಕಾಲೇಜುಗಳು ಒಳಪಟ್ಟಿದ್ದು, 53 ಕಾಲೇಜುಗಳು ನ್ಯಾಕ್ ಶ್ರೇಣಿಗೆ ಒಳಪಟ್ಟಿವೆ. ವಿವಿಧ ಕಾರಣಗಳಿಗೆ 22 ಕಾಲೇಜುಗಳು ಇನ್ನೂ ಮಾನ್ಯತೆಗೆ ಒಳಪಟ್ಟಿಲ್ಲ. ಕಾಲೇಜಿಗೆ ಯುಜಿಸಿಯಿಂದ ಸೌಲಭ್ಯ ಪಡೆಯಲು ನ್ಯಾಕ್ ಶ್ರೇಣಿ ಪಡೆದುಕೊಳ್ಳುವುದು ಅಗತ್ಯವಾಗಿದ್ದು, ಇತ್ತ ಎಲ್ಲ ಕಾಲೇಜುಗಳು ಗಮನಹರಿಸಬೇಕು ಎಂದು ಹೇಳಿದರು.

ಎಲ್ಲ ಕಾಲೇಜುಗಳು ನ್ಯಾಕ್ ಶ್ರೇಣಿ ಪಡೆಯುವುದು ಕಡ್ಡಾಯವಾಗಿದೆ. ಕಾಲೇಜುಗಳ ಪ್ರಾಂಶುಪಾಲರು, ನ್ಯಾಕ್ ಸಂಯೋಜಕರು ಚಾಕಚಕ್ಯತೆಯಿಂದ ಕರ್ತವ್ಯ ನಿರ್ವಹಿಸಬೇಕು. ಅಲ್ಲದೇ ಬಹಳಷ್ಟು ಕಾಲೇಜುಗಳಲ್ಲಿ ನೆಪಮಾತ್ರಕ್ಕೆ ಕಾರ್ಯಕ್ರಮ ಮಾಡಿ ಆಂತರಿಕ ಗುಣಮಟ್ಟ ಭರವಸೆ ವಿಭಾಗ (ಐಕ್ಯೂಎಸಿ)ದಿಂದ ನೀಡುವ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಣವನ್ನು ಖರ್ಚು ಮಾಡುವುದಕ್ಕಾಗಿ ಕಾರ್ಯಕ್ರಮ ಮಾಡಬಾರದು. ಯಾವುದೇ ಕಾರ್ಯಕ್ರಮಗಳನ್ನು ಮಾಡಿದಾಗ ಅದು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬೇಕು. ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಯಿಂದ ಸುಲಭವಾಗಿ ನ್ಯಾಕ್ ಪ್ರಕ್ರಿಯೆಗೆ ಒಳಪಡಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆ ಗುಣಮಟ್ಟ ನಿಯಂತ್ರಣ ವಿಭಾಗದ (ಎಸ್‌ಕ್ಯೂಎಸಿ) ಸಂಚಾಲಕ ಡಾ.ಸಿದ್ದಲಿಂಗಸ್ವಾಮಿ ಮಾತನಾಡಿ, ವೇತನ ಆಯೋಗದಡಿ ವೇತನ ಜಾರಿಯೂ ನ್ಯಾಕ್‌ನ ಶ್ರೇಣಿ, ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಕಾಲೇಜಿನ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಗಮನ ಕೇಂದ್ರೀಕರಿಸಬೇಕು ಎಂದರು.

ನ್ಯಾಕ್‌ನಲ್ಲಿ ಹೊಸ ನಿಯಮ ಬಂದ ಮೇಲೆ 30ರಲ್ಲಿ 28 ಕಾಲೇಜುಗಳಿಗೆ ಶ್ರೇಣಿ ಕೈತಪ್ಪಿದೆ. ‘ಎ’ ಮಾನ್ಯತೆ ಇದ್ದ ಕಾಲೇಜುಗಳು ‘ಬಿ’ಗೆ ಬಂದಿವೆ. ಐಕ್ಯೂಎಸಿಯವರ ಬೇಜವಾಬ್ದಾರಿಯೇ ಇದಕ್ಕೆ ಮುಖ್ಯ ಕಾರಣ ಎಂದು ದೂರಿದರು.

ಗುಣಮಟ್ಟದ ಶಿಕ್ಷಣ ದೃಷ್ಟಿಯಿಂದ ಈಗಲೂ ಶೇ.90ರಷ್ಟು ಕೆಳಸ್ತರದ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಗೆ ಸೇರುತ್ತಾರೆ. ಯುಜಿಸಿ ಅನುದಾನ ಪಡೆಯದಿದ್ದರೆ ಆ ವಿದ್ಯಾರ್ಥಿಗಳಿಗೆ ಸೌಲಭ್ಯ ತಪ್ಪಿಸಿದಂತಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲರೂ ಕಾರ್ಯ ನಿರ್ವಹಿಸಬೇಕು ಎಂದರು. ಐಕ್ಯೂಎಸಿ ಸಂಯೋಜಕಿ ಜಿ.ಸವಿತಾ, ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಾಂತಪ್ಪ ಇತರರು ಹಾಜರಿದ್ದರು.