ಅಲ್​ಖೈದಾಗೆ ತರಬೇತಿ ನೀಡಿದ್ದೇ ಪಾಕ್: ಉಗ್ರರ ವಿರುದ್ಧದ ಹೋರಾಟಕ್ಕೆ ಅಮೆರಿಕ ಜತೆಗೆ ಕೈಜೋಡಿಸಿದ್ದು ಮಹಾಪ್ರಮಾದವೆಂದ ಖಾನ್!

ನ್ಯೂಯಾರ್ಕ್: 9/11ರ ದಾಳಿಯ ಬಳಿಕ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಇಳಿದ ಅಮೆರಿಕದ ಜತೆ ಕೈಜೋಡಿಸಿ ಪಾಕಿಸ್ತಾನ ಬಹುದೊಡ್ಡ ಪ್ರಮಾದವೆಸಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದರು. ಇದೇ ವೇಳೆ ಅಫ್ಘಾನಿ ಸ್ತಾನದಲ್ಲಿ ಹೋರಾಟ ಮಾಡಲು ಅಲ್​ಖೆೈದಾ ಮತ್ತಿತರ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಇಲಾಖೆ ಐಎಸ್​ಐ ತರಬೇತಿ ನೀಡಿತ್ತು ಎನ್ನುವುದನ್ನೂ ಒಪ್ಪಿಕೊಂಡರು. ನ್ಯೂಯಾರ್ಕ್​ನ ವಿದೇಶಿ ಬಾಂಧವ್ಯ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಇಮ್ರಾನ್, 9/11ರ ದಾಳಿಯ ಬಳಿಕ ಜನರಲ್ ಪರ್ವೆಜ್ ಮುಷರಫ್​ರ ಆಡಳಿತ ಅಮೆರಿಕದೊಂದಿಗೆ ಕೈಜೋಡಿ ಸಲು ಒಪ್ಪಿಕೊಂಡಿತ್ತು. ಇದು ಪಾಕ್​ನಿಂದಾದ ಬಹುದೊಡ್ಡ ಪ್ರಮಾದ ಎಂದರು. 2001ರಲ್ಲಿ ಅಫ್ಘಾನಿಸ್ತಾನದ ಮೇಲೆ ಅಮೆರಿಕ ಸೇನೆ ನಿಯೋಜಿಸುವುದಕ್ಕೂ ಮೊದಲೇ ಅಲ್ಲಿ ತಾಲಿಬಾನ್ ಆಡಳಿತ ಅಸ್ತಿತ್ವದಲ್ಲಿದೆ ಎಂದು ತಿಳಿದಿದ್ದ ರಾಷ್ಟ್ರಗಳ ಪೈಕಿ ಪಾಕಿಸ್ತಾನವೂ ಒಂದು. 1980ರ ದಶಕದಲ್ಲಿ ಅಫ್ಘಾನಿಸ್ತಾನವನ್ನು ಸೋವಿಯತ್ ರಷ್ಯಾ ಆಕ್ರಮಣ ಮಾಡಿಕೊಂಡಾಗ ಪಾಕ್ ಅಮೆರಿಕದ ನೆರವಿಗೆ ನಿಂತಿತು. ಸೋವಿಯತ್ ರಷ್ಯಾ ವಿರುದ್ಧದ ಜಿಹಾದ್​ಗಾಗಿ ಜಗತ್ತಿನಾದ್ಯಂತದ ಮುಸ್ಲಿಂ ರಾಷ್ಟ್ರಗಳಿಂದ ತರಬೇತಿ ಪಡೆದಿರುವ ಉಗ್ರರನ್ನು ಕರೆಸಿಕೊಳ್ಳಲಾಗಿತ್ತು. ಜಿಹಾದಿಗಳನ್ನು ಆಗ ಹೀರೋಗಳ ರೀತಿಯಲ್ಲಿ ಕಾಣಲಾಯಿತು. ಅವರ ಹೋರಾಟದ ಫಲವಾಗಿ 1989ರಲ್ಲಿ ಅಫ್ಘಾನಿಸ್ತಾನವನ್ನು ಸೋವಿಯತ್ ರಷ್ಯಾ ಬಿಟ್ಟು ಹೋಯಿತು. ಆದರೆ, 2001ರಲ್ಲಿ ಯಾವಾಗ ಅಮೆರಿಕ ಇಲ್ಲಿಗೆ ಆಗಮಿಸಿತೋ ಆಗ ಜಿಹಾದಿಗಳನ್ನೇ ಉಗ್ರರೆಂದು ಗುರುತಿಸಲಾಯಿತು ಎಂದರು.

ಕಾಂಗ್ರೆಸ್​ಗೆ ಮುಜುಗರ

ಹೌಡಿ ಮೋದಿ ಕಾರ್ಯಕ್ರಮದ ಬಗ್ಗೆ ಮುಂಬೈ ಕಾಂಗ್ರೆಸ್​ನ ಮುಖಂಡ ಮಿಲಿಂದ್ ದೇವ್ರಾ ಮಾಡಿದ ಟ್ವೀಟ್​ನಿಂದ ಕಾಂಗ್ರೆಸ್​ಗೆ ಮುಜುಗರವಾಗಿದೆ. ಇದರಲ್ಲಿ ಮೋದಿ ಅಮೆರಿಕದಲ್ಲಿ ಮಾಡಿದ ಭಾಷಣ ರಾಜ ಕಾರಣದಲ್ಲಿ ಮಹತ್ವದ್ದು, ಭಾರತ-ಅಮೆರಿಕ ಸಂಬಂಧ ವೃದ್ಧಿಗೆ ಪೂರಕವಾಗಿರುವಂತದ್ದು, ಕಾರ್ಯಕ್ರಮದ ಆಯೋಜನೆಯೂ ಅದ್ಭುತವಾಗಿತ್ತು ಎಂದು ಹೇಳಿದ್ದರು.

ಉಗ್ರರಿಗೆ ಸೇನೆಯ ಟ್ರೖೆನಿಂಗ್

ಅಫ್ಘಾನಿಸ್ತಾನವನ್ನು ಸೋವಿಯತ್ ರಷ್ಯಾ ತೊರೆದ ನಂತರ ಅಂದರೆ 1988ರಲ್ಲಿ ಅಲ್​ಖೆೈದಾ ಒಸಾಮಾ ಬಿನ್ ಲಾಡೆನ್ ನೇತೃತ್ವದಲ್ಲಿ ಪೇಶಾವರದಲ್ಲಿ ಹುಟ್ಟಿಕೊಂಡಿತು. ಪಾಕಿಸ್ತಾನ ಸರ್ಕಾರ ಮತ್ತು ಅಲ್​ಖೆೈದಾ ನಡುವೆ ನಿರಂತರ ಸಂಬಂಧವಿತ್ತು. ಅವರಿಗೆ ತರಬೇತಿ ನೀಡಿದ್ದು ನಮ್ಮ ಸೇನೆ ಮತ್ತು ಐಎಸ್​ಐ ಎಂದು ಇಮ್ರಾನ್ ಹೇಳಿದ್ದಾರೆ. ಪಾಕ್​ನ ಅಬೋಟಾಬಾದ್​ದಲ್ಲಿ 2011ರ ಮೇ 2ರಂದು ಅಮೆರಿಕ ನಡೆಸಿದ ಕಾರ್ಯಾಚರಣೆಯಲ್ಲಿ ಒಸಾಮಾ ಹತನಾದ. ಒಸಾಮಾ ಬಿನ್ ಲಾಡೆನ್​ಗೆ ಅಮೆರಿಕ ಜಾಗತಿಕವಾಗಿ ತೀವ್ರ ಶೋಧ ನಡೆಸುತ್ತಿದ್ದರೂ, ಪಾಕ್ ಆತ ತನ್ನ ನೆಲದಲ್ಲಿ ಇಲ್ಲವೆಂದೇ ಹೇಳುತ್ತಿತ್ತು.

ಯುವತಿ ಅಪಹಾಸ್ಯ

ಪರಿಸರ ನಾಶದ ಬಗ್ಗೆ ವಿಶ್ವಸಂಸ್ಥೆ ಹವಾಮಾನ ಕುರಿತ ಶೃಂಗಸಭೆಯಲ್ಲಿ ಭಾಷಣ ಮಾಡಿ ಭಾರಿ ಸುದ್ದಿಯಾಗಿರುವ 16 ವರ್ಷದ ಸ್ವೀಡನ್​ನ ಸಾಮಾಜಿಕ ಕಾರ್ಯಕರ್ತೆ ಗ್ರೆಟಾ ಐಲ್​ಬರ್ಗ್​ಳನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಅಪಹಾಸ್ಯ ಮಾಡಿದ್ದಾರೆ. ‘ಇವಳನ್ನು ನೋಡಿದರೆ ಖುಷಿಯಾಗಿರುವ ಯುವತಿ ಅನಿಸುತ್ತದೆ. ಆಕೆಯ ಉಜ್ವಲ ಭವಿಷ್ಯ ಎದುರು ನೋಡುತ್ತಿದ್ದೇನೆ. ಆಕೆಯನ್ನು ನೋಡಿ ಸಂತೋಷವಾಯಿತು’ ಎಂದು ಟ್ರಂಪ್ ವ್ಯಂಗ್ಯವಾಡಿದ್ದಾರೆ. ಭಾಷಣ ಮಾಡಿದ್ದ ಯುವತಿ ಪರಿಸರ ಸರ್ವನಾಶದ ಅಂಚಿನಲ್ಲಿದ್ದರೆ ಹಣ, ಆರ್ಥಿಕತೆ ಬಗ್ಗೆ ಮಾತನಾಡುವ ಜಾಗತಿಕ ನಾಯಕರನ್ನು ನೋಡಿದರೆ ಕೋಪ ಉಕ್ಕಿಬರುತ್ತದೆ ಎಂದಳು.

ಪಾಕ್ ಪತ್ರಕರ್ತರು ತರಾಟೆಗೆ

ಸೋಮವಾರ ದ್ವಿಪಕ್ಷೀಯ ಮಾತುಕತೆ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಮ್ರಾನ್ ಖಾನ್ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ್ದು, ಈ ವೇಳೆ ಪಾಕ್ ಪತ್ರಕರ್ತರನ್ನು ಟ್ರಂಪ್ ತರಾಟೆಗೆ ತೆಗೆದುಕೊಂಡರು. ಪತ್ರಕರ್ತನೋರ್ವ ಕಾಶ್ಮೀರ ವಿಚಾರದಲ್ಲಿ ಪ್ರಶ್ನಿಸುವಾಗ ಕುಪಿತಗೊಂಡ ಟ್ರಂಪ್, ‘ನೀವು ಇಮ್ರಾನ್ ತಂಡದವರೇ’ ಎಂದು ಪ್ರಶ್ನಿಸಿದರು. ಆತ ಇಲ್ಲ ಎಂದು ಹೇಳಿ, ಪ್ರಶ್ನೆ ಮುಂದುವರಿಸಿದ್ದರಿಂದ ಸಿಟ್ಟುಗೊಂಡ ಟ್ರಂಪ್, ‘ಇಂತಹ ಪತ್ರಕರ್ತರನ್ನು ಎಲ್ಲಿಂದ ಕರೆದುತಂದಿರಿ’ ಎಂದು ಇಮ್ರಾನ್​ರನ್ನೇ ಪ್ರಶ್ನಿಸಿದರು. ಇದಕ್ಕೆ ಇಮ್ರಾನ್ ಪ್ರತಿಕ್ರಿಯೆಯನ್ನೇ ನೀಡಲಿಲ್ಲ. ಇನ್ನೋರ್ವ ಪತ್ರಕರ್ತ ಕಾಶ್ಮೀರ ವಿಚಾರವನ್ನು ಬಗೆಹರಿಸಿದಲ್ಲಿ ಟ್ರಂಪ್​ಗೆ ನೊಬೆಲ್ ಪ್ರಶಸ್ತಿ ಸಿಗುವ ಸಾಧ್ಯತೆಯಿದೆ ಎಂದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್, ‘ಪಾರದರ್ಶಕವಾಗಿ ನೊಬೆಲ್ ನೀಡುವುದಾದರೆ ನನಗೆ ಇನ್ನೂ ಎಷ್ಟೋ ವಿಚಾರಗಳಿಗೆ ನೊಬೆಲ್ ನೀಡಬೇಕು. ಅಮೆರಿಕ ಅಧ್ಯಕ್ಷರಾಗುತ್ತಿದ್ದಂತೆಯೇ ನೊಬೆಲ್ ನೀಡಲಾಗುತ್ತದೆ. ಆದರೆ, ನನಗೆ ಮಾತ್ರ ನೀಡಿಲ್ಲ. ಬರಾಕ್ ಒಬಾಮಗೆ ನೊಬೆಲ್ ನೀಡಿದ್ದು ಯಾಕೆ ಎನ್ನುವುದು ಇಂದಿಗೂ ತಿಳಿದಿಲ್ಲ’ ಎಂದರು.

ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಚೀನಾಕ್ಕೆ ಕುಟುಕಿದ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ವಿಶ್ವಸಂಸ್ಥೆ 74ನೇ ಮಹಾ ಅಧಿವೇಶನದಲ್ಲಿ ಮಾತನಾಡಿದ್ದು, ಚೀನಾದೊಂದಿಗಿನ ವ್ಯಾಪಾರ ಮುಗ್ಗಟ್ಟು, ಬ್ರಿಟನ್​ನೊಂದಿಗೆ ವ್ಯಾಪಾರ ಒಪ್ಪಂದ, ಇರಾನ್ ಮತ್ತು ಉತ್ತರ ಕೊರಿಯಾದ ಬಗ್ಗೆಯೂ ಪ್ರಸ್ತಾಪ ಮಾಡಿದರು. ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸೇನೆಗಾಗಿ -ಠಿ;1.77 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. ಇದರ ಶಕ್ತಿ ಪ್ರದರ್ಶಿಸುವ ಅವಕಾಶ ಸಿಗದಿರಲೆಂಬ ಆಶಾವಾದವಿದೆ ಎಂದರು. ಬ್ರೆಕ್ಸಿಟ್ ನಂತರ ಅಮೆರಿಕ ಮತ್ತು ಬ್ರಿಟನ್ ನಡುವೆ ನಡೆಯಲಿರುವ ವ್ಯಾಪಾರ ಒಪ್ಪಂದದ ಬಗ್ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜತೆಗೆ ರ್ಚಚಿಸಿರುವುದಾಗಿ ತಿಳಿಸಿದರು. ವ್ಯಾಪಾರ ಕ್ಷೇತ್ರದ ಕೆಲ ಸುಧಾರಣೆಗಳನ್ನು ಚೀನಾ ಕಾರ್ಯಾಚರಣೆಗೆ ತರದೆ ಮಾತುತಪ್ಪಿದೆ ಎಂದು ಕಿಡಿಕಾರಿದರು.

ಉ. ಕೊರಿಯಾ, ಇರಾನ್ ಬಗ್ಗೆ ಅಸಮಾಧಾನ: ಇರಾನ್​ನ ರಕ್ತದಾಹವನ್ನು ತಡೆಯಬೇಕಿದೆ. ಇದಕ್ಕೆ ನೀಡುವ ಆರ್ಥಿಕ ಅನುದಾನಗಳ ಕಡಿತ ಮಾಡಬೇಕು. ಜತೆಗೆ ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ್ರ ಸಂಗ್ರಹಣೆ ನಿಲ್ಲಿಸಬೇಕೆಂದು ಆಗ್ರಹಿಸಿದರು. ವೆನುಜುವೆಲಾದ ಅಧ್ಯಕ್ಷ ನಿಕೋಲಸ್ ಮದುರೋವನ್ನು ಸರ್ವಾಧಿಕಾರಿ ಮತ್ತು ಕ್ಯೂಬದ ಕೈಗೊಂಬೆಯೆಂದು ಹೇಳಿ ವಿವಾದವನ್ನೂ ಮೈಗೆಳೆದುಕೊಂಡರು.

Leave a Reply

Your email address will not be published. Required fields are marked *