ಯಮಕನಮರಡಿಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕೈಜೋಡಿಸಿ

ಬೆಳಗಾವಿ: ಯಮಕನಮರಡಿಯಲ್ಲಿ 200 ಕೊಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕಿದ್ದು, ಇದಕ್ಕಾಗಿ ಎಲ್ಲರೂ ಕೈ ಜೋಡಿಸಿ ಈ ಮಹಾನ್ ಕಾರ್ಯವನ್ನು ಸಾಕಾರಗೊಳಿಸಬೇಕು ಎಂದು ಯಮಕನಮರಡಿ ಹುಣಸಿಕೊಳ್ಳಮಠದ ಶ್ರೀ ರಾಚೋಟೇಶ್ವರ ಮಹಾಸ್ವಾಮೀಜಿ ಕರೆ ನೀಡಿದರು.

ಯಮಕನಮರಡಿ ಹುಣಸಿಕೊಳ್ಳಮಠದ ಬಳಿ ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ಭವ್ಯವಾಗಿ ನಿರ್ಮಿಸಿದ ಲಿಂ.ಶ್ರೀ ಗುರುಸಿದ್ದ ಮಹಾಸ್ವಾಮಿಗಳ ಸಭಾಭವನ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೋಮವಾರ ಆಶೀರ್ವಚನ ನೀಡಿದರು. ಯಮಕನಮರಡಿಯಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಜತೆಗೆ ನರ್ಸಿಂಗ್ ಕಾಲೇಜ್, ಹೈಟೆಕ್ ವೃದ್ಧಾಶ್ರಮ ಅಗತ್ಯವಾಗಿವೆ. ಜನಪ್ರತಿನಿಧಿಗಳು ಹಾಗೂ ದಾನಿಗಳು ಮತ್ತು ಶ್ರೀಮಠದ ಭಕ್ತರು ಮನಸ್ಸು ಮಾಡಿ ಸಹಯೋಗದ ಮೂಲಕ ಈ ಸೌಲಭ್ಯಗಳ್ನು ಕಲ್ಪಿಸಬೇಕು. ಗುರುವಿನ ನಾಮಬಲದಿಂದ ಸಾಧನೆ ಸಾಧ್ಯ ಎಂದು ನಂಬಿದ್ದೇವೆ ಎಂದರು.

ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ದರಾಮ ಮಹಾಸ್ವಾಮೀಜಿ, ಈ ಸಭಾಭವನದಲ್ಲಿ ಬಾಲ್ಯ ವಿವಾಹಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.ಹತ್ತರಗಿ ಕಾರಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ, ಕಾರಂಜಿಮಠದ ಶ್ರೀ ಗುರುಸಿದ್ದ ಮಹಾಸ್ವಾಮೀಜಿ ಆಶೀರ್ವಚನವಿತ್ತರು.
ನಾಮಫಲಕ ಅನಾವರಣಗೊಳಿಸಿದ ಶಾಸಕ ಸತೀಶ ಜಾರಕಿಹೊಳಿ, ಮಾಜಿ ಸಂಸದ ರಮೇಶ ಕತ್ತಿ, ಉದ್ಯಮಿ ವಿಜಯ ಸಂಕೇಶ್ವರ ಮತ್ತಿತರ ಹಲವು ಮಹನೀಯರ ಸಹಕಾರ, ಪ್ರಯತ್ನದಿಂದ ಈ ಕಲ್ಯಾಣ ಮಂಟಪ ನಿರ್ಮಾಣವಾಗಿದೆ. ಊಟದ ಮನೆಯನ್ನು ಆದಷ್ಟು ಶೀಘ್ರ ನಿರ್ಮಿಸಲಾಗುವುದು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹುಬ್ಬಳ್ಳಿಯ ನರ ರೋಗ ತಜ್ಞ ಡಾ. ಸುರೇಶ ದುಗ್ಗಾಣಿ ಅವರು, ಯಮಕನಮರಡಿ ನನ್ನ ಹುಟ್ಟೂರು. ಶ್ರೀಗಳ ಆಶಯದಂತೆ ಎಲ್ಲರೂ ಸೇರಿ ಈ ಊರಿನಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಿಸೋಣ. ಎಲ್ಲ ಸೌಲಭ್ಯ ಕಲ್ಪಿಸಲು ಪ್ರಯತ್ನಿಸೋಣ. ನಾನು ಇದಕ್ಕೆಲ್ಲ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ ಸಂಕೇಶ್ವರ ಹಾಗೂ ಅವರ ಧರ್ಮ ಪತ್ನಿ ಲಲಿತಾ ಸಂಕೇಶ್ವರ ಸಹಿತ ಸಭಾಭವನ ನಿರ್ಮಾಣಕ್ಕೆ ಸಹಯೋಗ ನೀಡಿದ ಎಲ್ಲರನ್ನೂ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ದಿಗ್ವಿಜಯ ಸಂಕೇಶ್ವರ; ಶ್ರೀಗಳ ಶ್ಲಾಘನೆ

ಮೂಲ ಯಮಕನಮರಡಿ ಗ್ರಾಮದ ಉದ್ಯಮಿ ವಿಜಯ ಸಂಕೇಶ್ವರ ಅವರು ದೇಶದಾದ್ಯಂತ ತಮ್ಮ ಉದ್ಯಮ ವಿಸ್ತರಿಸಿ ಪ್ರಸಿದ್ಧಿ ಪಡೆದಿದ್ದಾರೆ. ಅವರು ಈಗ ವಿಜಯ ಸಂಕೇಶ್ವರ ಅಷ್ಟೇ ಅಲ್ಲ, ದಿಗ್ವಿಜಯ ಸಂಕೇಶ್ವರ ಆಗಿದ್ದಾರೆ. ಸಂಕೇಶ್ವರ ಅವರ ಸಾಧನೆ ಎಲ್ಲರಿಗೂ ಹೆಮ್ಮೆ ಮೂಡಿಸುವಂಥದು ಎಂದು ಹರ್ಷ ವ್ಯಕ್ತಪಡಿಸಿದರು. ಸಭಾಭವನ ನಿರ್ಮಿಸಲು ಕೊಡುಗೆ ನೀಡಿದ ಎಲ್ಲ ದಾನಿಗಳನ್ನು ಸ್ಮರಿಸಿ, ಅಭಿನಂದಿಸಿದರು.
ಉದ್ಯಮಿ ವಿಜಯ ಸಂಕೇಶ್ವರ ಅವರು, ಈ ಹಿಂದೆ ಸಹ ಕಲ್ಯಾಣ ಕೆಲಸಗಳಿಗೆ ಉದಾರ ಹೃದಯದಿಂದ ಕೊಡುಗೆ ನೀಡಿದ್ದು ಮರೆಯದಂಥದ್ದು ಎಂದು ಶಾಸಕ ಸತೀಶ ಜಾರಕಿಹೊಳಿ ಪ್ರಶಂಸಿಸಿದರು.

ನೆನಪಿನ ಬುತ್ತಿ ಬಿಚ್ಚಿದ ವಿಜಯ ಸಂಕೇಶ್ವರ

ಸಭಾಭವನ ಉದ್ಘಾಟಿಸಿದ ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಚೇರ್ಮನ್ ವಿಜಯ ಸಂಕೇಶ್ವರ ಅವರು, ಯಮಕನಮರಡಿ ಗ್ರಾಮದ ಜತೆ ತಮಗಿರುವ ಅನನ್ಯ ಸಂಬಂಧವನ್ನು ನೆನಪಿಸಿಕೊಂಡರು. ನಮ್ಮ ಪೂರ್ವಜರು ತುಬಚಿ ಎಂಬ ಪುಟ್ಟ ಗ್ರಾಮದಿಂದ ಬಂದು ಯಮಕನಮರಡಿಯಲ್ಲಿ ವಾಸವಾಗಿದ್ದರು. ಹೀಗಾಗಿ ನಮ್ಮ ಹೆಸರಿನಲ್ಲೂ ತುಬಚಿ ಎನ್ನುವುದು ಸೇರಿಕೊಂಡಿತು. ನಮ್ಮ ತಂದೆ ಅನಿವಾರ್ಯ ಕಾರಣಗಳಿಂದ ಯಮಕನಮರಡಿ ಬಿಟ್ಟು ಹುಬ್ಬಳ್ಳಿ -ಧಾರವಾಡ, ಆ ನಂತರ ಗದಗದಲ್ಲಿ ನೆಲೆ ನಿಂತರು. ನನ್ನ ತಂದೆ ಅನೇಕ ಬಾರಿ ಯಮಕನಮರಡಿಗೆ ಬಂದು ಹೋಗಿದ್ದಾರೆ. ನಾನು ವಿವಾಹವಾಗಿದ್ದ ಹೊಸದರಲ್ಲಿ ಇಲ್ಲಿಗೆ ಬಂದಿದ್ದೆ. 45 ವರ್ಷಗಳ ನಂತರ ಎರಡನೇ ಬಾರಿಗೆ ಇಲ್ಲಿ ಬರುತ್ತಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.