ಗಂಡಸಿ: ತಿಳಿ ಬಿಳಿ ಅಥವಾ ತಾಮ್ರ ವರ್ಣದ ಮಚ್ಚೆ ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಂಡಾಗ ಅದನ್ನು ಅದೃಷ್ಟ ಮಚ್ಚೆ ಎಂದು ನಿರ್ಲಕ್ಷೃ ಮಾಡದೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕೊಂಡೇನಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಐಶ್ವರ್ಯಾ ಹೇಳಿದರು.
ಹೋಬಳಿಯ ಗಂಡಸಿ ಹ್ಯಾಂಡ್ ಪೋಸ್ಟ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಕೊಂಡೆನಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಏರ್ಡಿಸಿದ್ದ ಸ್ಪರ್ಶ್ ಕುಷ್ಟರೋಗ ಜಾಗೃತಿ ಅಭಿಯಾನ 2025ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೈಕೋ ಬ್ಯಾಕ್ಟೀರಿಯಲಪ್ರೇ ಎಂಬ ಸೂಕ್ಷ್ಮ ರೋಗಾಣುವಿನಿಂದ ಕುಷ್ಟರೋಗ ಬರಲಿದ್ದು, ಇದು ಯಾವುದೇ ದೇವರ ಶಾಪ ಅಥವಾ ಪಾಪದ ಫಲವಲ್ಲ. ಚರ್ಮ ಮತ್ತು ನರಗಳಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಎಲ್ಲ ಕಾಯಿಲೆಯಂತೆ ಇದು ಒಂದು ಸಾಮಾನ್ಯವಾದ ಕಾಯಿಲೆಯಾಗಿದೆ. ಇದರು ಬಡವ, ಶ್ರೀಮಂತ, ಜಾತಿ, ಲಿಂಗ, ವಯಸ್ಸಿನ ಭೇದವಿಲ್ಲದೆ ಯಾರಿಗಾದರೂ ಬರಬಹುದಾದ ರೋಗವಾಗಿದೆ ಎಂದರು.
ಕುಷ್ಟರೋಗ ಮುಕ್ತ ಸಮಾಜ ನಮ್ಮ ಗುರಿಯಾಗಿದ್ದು, ಕುಷ್ಟ ರೋಗ ನಿರ್ಮೂಲನೆ ಮಾಡಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ರಾಮ ನಾಯಕ್, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಪ್ರಸನ್ನ ಇತರರಿದ್ದರು.