ಕ್ಯಾಂಪ್​ಬೆಲ್-ಹೋಪ್ ವಿಶ್ವದಾಖಲೆ: ಏಕದಿನ ಪಂದ್ಯದಲ್ಲಿ ದಾಖಲೆಯ ಜತೆಯಾಟ

ಡಬ್ಲಿನ್: ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳಿರುವಾಗಲೇ ವೆಸ್ಟ್ ಇಂಡೀಸ್ ತಂಡದ ಇಬ್ಬರು ಯುವ ಆರಂಭಿಕರು ವಿಶ್ವದಾಖಲೆಯ ನಿರ್ವಹಣೆಯ ಮೂಲಕ ಜಗದ ಗಮನಸೆಳೆದಿದ್ದಾರೆ. ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ವಿಂಡೀಸ್​ನ ಆರಂಭಿಕರಾದ ಜಾನ್ ಕ್ಯಾಂಪ್​ಬೆಲ್ ಹಾಗೂ ಶೈ ಹೋಪ್ ಜೋಡಿ ಮೊದಲ ವಿಕೆಟ್​ಗೆ 365 ರನ್ ಜತೆಯಾಟವಾಡುವ ಮೂಲಕ ನೂತನ ವಿಶ್ವದಾಖಲೆ ನಿರ್ವಿುಸಿದ್ದಾರೆ.

ಭಾನುವಾರ ಆರಂಭಗೊಂಡ ತ್ರಿಕೋನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಇವರಿಬ್ಬರ ಸಾಹಸಿಕ ಇನಿಂಗ್ಸ್​ನಿಂದಾಗಿ 3 ವಿಕೆಟ್​ಗೆ 381 ರನ್ ಪೇರಿಸಿದೆ. ಜಾನ್ ಕ್ಯಾಂಪ್​ಬೆಲ್ (179ರನ್, 137 ಎಸೆತ, 15 ಬೌಂಡರಿ, 6 ಸಿಕ್ಸರ್) ಚೊಚ್ಚಲ ಏಕದಿನ ಶತಕ ಸಿಡಿಸಿದರೆ, ಶೈ ಹೋಪ್ (170ರನ್, 152 ಎಸೆತ, 22 ಬೌಂಡರಿ, 2 ಸಿಕ್ಸರ್) 5ನೇ ಏಕದಿನ ಶತಕ ಬಾರಿಸಿದರು. ಇದು ಮೊದಲ ವಿಕೆಟ್​ಗೆ

ಏಕದಿನದಲ್ಲಿ ವಿಶ್ವದಾಖಲೆಯ ಜತೆಯಾಟವಾಗಿದ್ದರೆ, ಏಕದಿನ ಕ್ರಿಕೆಟ್​ನಲ್ಲಿ ಯಾವುದೇ ವಿಕೆಟ್​ಗೆ 2ನೇ ಅತಿದೊಡ್ಡ ಜತೆಯಾಟ ಎನಿಸಿದೆ. 2018ರಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ಫಖರ್ ಜಮಾನ್ ಹಾಗೂ ಇಮಾಮ್ ಉಲ್ ಹಕ್ ಆಡಿದ್ದ 304 ರನ್ ಜತೆಯಾಟ, ಮೊದಲ ವಿಕೆಟ್​ಗೆ ಹಿಂದಿನ ವಿಶ್ವದಾಖಲೆ ಎನಿಸಿತ್ತು.

ಒಟ್ಟಾರೆ ಏಕದಿನದಲ್ಲಿ 2ನೇ ಅತ್ಯುತ್ತಮ ಜತೆಯಾಟ ಇದಾಗಿದ್ದು, 2015ರ ವಿಶ್ವಕಪ್​ನಲ್ಲಿ ಗೇಲ್ ಹಾಗೂ ಸ್ಯಾಮ್ಯು ಯೆಲ್ಸ್ ಜೋಡಿ 2ನೇ ವಿಕೆಟ್​ಗೆ 372 ರನ್ ಜತೆಯಾಟವಾಡಿದ್ದು ಮೊದಲ ಸ್ಥಾನದಲ್ಲಿದೆ. ಅದಲ್ಲದೆ, 3 ವಿಕೆಟ್​ಗೆ 381 ರನ್ ಏಕದಿನದಲ್ಲಿ ವಿಂಡೀಸ್​ನ 2ನೇ ಗರಿಷ್ಠ ಮೊತ್ತ ಎನಿಸಿದೆ.

ವೆಸ್ಟ್ ಇಂಡೀಸ್: 50 ಓವರ್​ಗಳಲ್ಲಿ 3 ವಿಕೆಟ್​ಗೆ 381 (ಕ್ಯಾಂಪ್​ಬೆಲ್ 179, ಶೈ ಹೋಪ್ 170, ಡರೇನ್ ಬ್ರಾವೊ 9*, ಹೋಲ್ಡರ್ 1, ಮೆಕ್​ಕಾರ್ಥಿ 76ಕ್ಕೆ 2).

One Reply to “ಕ್ಯಾಂಪ್​ಬೆಲ್-ಹೋಪ್ ವಿಶ್ವದಾಖಲೆ: ಏಕದಿನ ಪಂದ್ಯದಲ್ಲಿ ದಾಖಲೆಯ ಜತೆಯಾಟ”

Comments are closed.