Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಜೋಗ ಜಲಪಾತ ನೋಡಲು ಜನಸಾಗರ

Thursday, 14.06.2018, 5:30 PM       No Comments

ಸಾಗರ: ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ. ಅದರಲ್ಲಿಯೂ ಶರಾವತಿ ಕಣಿವೆಯಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು ಲಿಂಗನಮಕ್ಕಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಜೋಗ ಜಲಪಾತ ಮೈದುಂಬಿ ನಲಿಯುತ್ತಿದೆ. ಹೀಗಾಗಿ ಪ್ರವಾಸಿಗರ ಸಂಖ್ಯೆ ದಿನವೂ ಹೆಚ್ಚುತ್ತಿದೆ.

ರಜಾದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುತ್ತಿದೆ. ಜಲಪಾತವನ್ನು ಹತ್ತಿರದಿಂದ ನೋಡಲು ನೀರಿನಾಳದವರೆಗೆ ಮೆಟ್ಟಿಲುಗಳನ್ನು ಮಾಡಲಾಗಿದೆ. ಅಲ್ಲಲ್ಲಿ ನಿಂತು ನೋಡಲು ಪ್ಯಾರಾಬೋಲಾಗಳನ್ನು ನಿರ್ವಿುಸಲಾಗಿದೆ. ದಟ್ಟ ಮಳೆಯ ಕಾರಣ ಜಲಪಾತ ಒಮ್ಮೊಮ್ಮೆ ಮೋಡಗಳ ಮಧ್ಯೆ ಮಾಯವಾಗಿಬಿಡುತ್ತದೆ. ಎಲ್ಲೋ ಒಂದು ಬಾರಿ ಮೋಡ ಸರಿದಾಗ ಭೋರ್ಗರೆಯುವ ಜಲಪಾತ ಜನರ ಕಣ್ಣಿಗೆ ಕಾಣುತ್ತದೆ. ಪ್ರವಾಸಿಗರು ಈ ಪ್ರಕೃತಿಯ ರಮ್ಯತೆ ನೋಡಿ ಖುಷಿಪಡುತ್ತಿದ್ದಾರೆ.

ಬೆನ್ನಿನ ಹಿಂದೆ ಜಲಪಾತ ಕಾಣುವಂತೆ ಪ್ರವಾಸಿಗರು ಫೋಟೋ ಕ್ಲಿಕ್ಕಿಸಿಕೊಳ್ಳುವ ದೃಶ್ಯ ಎಲ್ಲೆಡೆ ಕಾಣುತ್ತಿದೆ. ಇನ್ನು ಸೆಲ್ಪಿ ತೆಗೆದುಕೊಳ್ಳುವವರ ಲೆಕ್ಕವೇ ಇಲ್ಲ. ರಜಾ ದಿನಗಳಲ್ಲಿ ಪ್ರವಾಸಿ ವಾಹನಗಳು ನಿಲ್ಲಲು ಜಾಗವಿಲ್ಲದಷ್ಟು ವಾಹನಗಳ ದಟ್ಟಣೆ ಇರುತ್ತದೆ. ವಾಹನ ದಟ್ಟಣೆ ನಿಯಂತ್ರಿಸಲು ಜನ ಹರಸಾಹಸ ಪಡಬೇಕಾಗಿದೆ.

ಇನ್ನಷ್ಟು ಆಗಬೇಕು: ಜೋಗದಲ್ಲಿ ಜನರನ್ನು ಆಕರ್ಷಿಸಲು ಸಂಗೀತ ಕಾರಂಜಿ ನಿರ್ವಿುಸಲಾಗಿದೆ. ಆದರೆ, ಕಳೆದ ಆರು ತಿಂಗಳಿಂದ ಲೇಸರ್ ಶೋ ನಿಂತಿದೆ. ಅದನ್ನು ತಕ್ಷಣ ಆರಂಭಿಸಬೇಕು, ರಜಾ ದಿನಗಳು ಬಂತೆಂದರೆ ಪ್ರವಾಸಿಗರಿಗೆ ಉಳಿಯಲು ಲಾಡ್ಜಿಂಗ್ ವ್ಯವಸ್ಥೆ ಗುಣಮಟ್ಟದಲ್ಲಿಲ್ಲ. ಎಲ್ಲರೂ ಖಾಸಗಿ ಲಾಡ್ಜ್​ಗಳ ಮೊರೆ ಹೋಗಬೇಕಾಗಿದೆ. ಗುಣಮಟ್ಟದ ಆಹಾರವನ್ನು ನೀಡುವ ಫುಡ್​ಕೋರ್ಟ್ ಯೋಜನೆ ಕೂಡಲೆ ರೂಪುಗೊಳ್ಳಬೇಕು. ಅಲ್ಲದೆ ಲಿಂಗನಮಕ್ಕಿ ಜಲಾಶಯ ಸಮೀಪ 60 ಎಕರೆ ಜಾಗದಲ್ಲಿ ಪ್ರಾಧಿಕಾರದ ಒಡೆತನದಲ್ಲಿರುವ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣ ಇನ್ನೂ ನನೆಗುದಿಗೆ ಬಿದ್ದಿದೆ. ಪ್ರವಾಸಿಗರಿಗೆ ಮಾಹಿತಿ ನೀಡುವ ಅತ್ಯಾಧುನಿಕ ತಂತ್ರಜ್ಞಾನ ಕೇಂದ್ರಕ್ಕೂ ಇಲ್ಲಿಯವರೆಗೂ ಚಾಲನೆ ದೊರೆತಿಲ್ಲ. ಮಳೆ ಬಂತೆಂದರೆ ಜೋಗ ಸುತ್ತಮುತ್ತ ಧರೆ ಕುಸಿದು ರಸ್ತೆಗಳ ಮೇಲೆ ಮರ ಮತ್ತು ದೀಪದ ಕಂಬಗಳು ಬೀಳುತ್ತವೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಪ್ರವಾಸಿಗರ ಆಗ್ರಹವಾಗಿದೆ.

ಹತ್ತಿರದಿಂದ ನೋಡಲು ವ್ಯವಸ್ಥೆ: ಜೋಗ ಅಭಿವೃದ್ಧಿ ಪ್ರಾಧಿಕಾರ ಇಲ್ಲಿ ಕೆಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ತಳಮಟ್ಟದವರೆಗೆ ಹೋಗಿ ಜಲಪಾತ ನೋಡುವ ಸಲುವಾಗಿ ಮೆಟ್ಟಿಲುಗಳ ವ್ಯವಸ್ಥೆ ರೂಪಿಸಿದೆ. ಜಲಪಾತವನ್ನು ತಳದಲ್ಲಿ ನಿಂತು ನೋಡುವ ವೀಕ್ಷಣಾ ಸ್ಥಳವೊಂದನ್ನು ನಿರ್ವಿುಸಿ ಅದಕ್ಕೆ ಭದ್ರತೆಯನ್ನು ಸಹ ರೂಪಿಸಲಾಗಿದೆ. 500 ಪ್ರವಾಸಿಗರು ಒಟ್ಟಿಗೇ ಈ ಸ್ಥಳದಲ್ಲಿ ನಿಂತು ಜಲಪಾತದ ಸೌಂದರ್ಯ ಸವಿಯಬಹುದಾಗಿದೆ. 18 ಸಿಸಿ ಕ್ಯಾಮರಾಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಶೌಚಗೃಹ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಲಾಗಿದೆ. ಬರುವ ದಿನಗಳಲ್ಲಿ ಜಲಪಾತದ ಅಪಾಯದ ಸ್ಥಳಗಳ ಕುರಿತು ಸೈರನ್ ಅಳವಡಿಸಲಾಗುತ್ತದೆ. ಅಭಿವೃದ್ಧಿಗೆ ಸಂಬಂಧಪಟ್ಟಂತೆ ಯೋಜನೆಗಳನ್ನು ರೂಪಿಸಲಾಗುತ್ತಿದ್ದು ಇನ್ನೂ ಹತ್ತಿರದಿಂದ ಜಲಪಾತ ವೀಕ್ಷಿಸಲು ಕೇಬಲ್ ಕಾರ್ ಒಳಗೊಂಡಂತೆ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಲು ಚಿಂತನೆ ನಡೆಸಲಾಗುತ್ತಿದೆ ಎನ್ನುತ್ತಾರೆ ಉಪವಿಭಾಗಾಧಿಕಾರಿ ನಾಗರಾಜ್ ಆರ್. ಸಿಂಗ್ರೇರ್.

Leave a Reply

Your email address will not be published. Required fields are marked *

Back To Top