ಚಿಕ್ಕಮಗಳೂರು: ಲೋಕಸಭಾ ಚುನಾವಣೆ ವೇಳೆ ಹುಟ್ಟಿಕೊಂಡಂತಹ ಜೋಡೆತ್ತು, ನಿಖಿಲ್ ಎಲ್ಲಿದ್ದೀಯಪ್ಪಾ ಎನ್ನುವ ಟೈಟಲ್ಗಳ ಬಗ್ಗೆ ನಂಬಿಕೆ ಇಲ್ಲ. ಟೈಟಲ್ಗಳಿಂದ ಸಿನಿಮಾ ಓಡುತ್ತೆ ಎನ್ನುವುದು ತಪ್ಪು ಕಲ್ಪನೆ. ಯಾವಾಗಲೂ ಸಿನಿಮಾಗೆ ಕಥೆ, ನಾಯಕ ಮುಖ್ಯ ಎಂದು ನಟ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹೇಳಿದರು.
ಚಿಕ್ಕಮಗಳೂರಿನ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶ ಕುರಿತು ಜನರಲ್ಲಿ ಸಾಕಷ್ಟು ಕುತೂಹಲ ಇದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಸಹಜವಾಗಿ ಸಮಲತಾ ಅಂಬರೀಷ್ ಗೆಲುವಿನ ಬಗ್ಗೆ ಸಾಕಷ್ಟು ನಿರೀಕ್ಷೆ ಇದ್ದು, ಗೆಲುವಿನ ಬಗ್ಗೆ ಆಸೆ ಇದೆ. ಮಂಡ್ಯ ಕ್ಷೇತ್ರದ ಜನರು ಸೇರಿದಂತೆ ಇತರರೂ ಕೂಡ ಸಮಲತಾ ಜಯ ಸಾಧಿಸಲಿ ಎಂದು ಬಯಸುತ್ತಿದ್ದಾರೆ. ದೇಶದಲ್ಲಿ ಅತಂತ್ರ ಪರಿಸ್ಥಿತಿ ಎದುರಾದರೆ ಜನರ ತೀರ್ಮಾನದಂತೆ ಸುಮಲತಾ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು. (ದಿಗ್ವಿಜಯ ನ್ಯೂಸ್)