ರಾಜ್ಯದಲ್ಲಿ ಉದ್ಯೋಗ ಪರ್ವ

ಬೆಂಗಳೂರು: ರಾಜ್ಯದಲ್ಲಿ ಉದ್ಯೋಗ ಪರ್ವ ಆರಂಭಗೊಂಡಿದ್ದು, 10 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ನೇರ ನೇಮಕ ಮೂಲಕ ಭರ್ತಿ ಮಾಡಲು ಸರ್ಕಾರ ಮುಂದಾಗಿದೆ.

ವಿವಿಧ ಇಲಾಖೆಗಳಲ್ಲಿ ನೌಕರರ ಹುದ್ದೆಗಳು ಖಾಲಿ ಇರುವುದರಿಂದ ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿರುವುದನ್ನು ಮನಗಂಡಿರುವ ಸರ್ಕಾರ ತುರ್ತಾಗಿ ನೇಮಕ ಕಾರ್ಯ ನಡೆಸಲು ತೀರ್ವನಿಸಿದ್ದು, ಸಂವಿಧಾನದ ಅನುಚ್ಛೇದ 371ಜೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಥಳೀಯ ವೃಂದ ರಚಿಸಿ, ಅಧಿಸೂಚಿಸಿ, ಖಾಲಿ ಹುದ್ದೆಗಳನ್ನು ತುಂಬುವ ಕುರಿತಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.

ವಿವಿಧ ಇಲಾಖೆಗಳಲ್ಲಿ ಅನುಚ್ಛೇದ 371(ಜೆ) ಅಡಿಯಲ್ಲಿ ರಚಿಸಲಾದ ಪ್ರಾದೇಶಿಕ ಮಟ್ಟದ, ರಾಜ್ಯಮಟ್ಟದ ಹಾಗೂ ರಾಜ್ಯವ್ಯಾಪಿ ಸ್ಥಳೀಯ ವೃಂದಗಳಲ್ಲಿ ಅಪಾರ ಪ್ರಮಾಣದ ಹುದ್ದೆಗಳು ಖಾಲಿ ಇದ್ದು, ವಿವಿಧ ಇಲಾಖೆ ಹಾಗೂ ನೇಮಕಾತಿ ಪ್ರಾಧಿಕಾರಗಳಲ್ಲಿ ತುಂಬಬೇಕಾದ ನೇರ ನೇಮಕಾತಿ ಹುದ್ದೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆಯಲ್ಲಿ ನೇಮಕಾತಿಗೆ ನಿರ್ದೇಶನ ನೀಡಲಾಗಿದೆ.

ಸುಗಮ ಆಡಳಿತಕ್ಕೆ ತೊಂದರೆಯಾಗುತ್ತಿರುವುದರಿಂದ ಆಡಳಿತ ಇಲಾಖೆಗಳ ಎಲ್ಲ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಕ್ಷೇತ್ರ, ಇಲಾಖೆ, ನಿಗಮ, ಮಂಡಳಿ ಹಾಗೂ ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರುಗಳು ಅದಷ್ಟು ಬೇಗನೆ ಸ್ಥಳೀಯ ವೃಂದದ ನೇರ ನೇಮಕಾತಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶದಂತೆ ಹಾಗೂ ಜಾರಿಯಲ್ಲಿರುವ ನೇರ ನೇಮಕಾತಿ ನಿಯಮಗಳ ಪ್ರಕಾರ ಭರ್ತಿ ಮಾಡಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.

ಈಗಾಗಲೇ ನೇಮಕಾತಿ ಪ್ರಕ್ರಿಯೆಯು ಜಾರಿಯಲ್ಲಿರುವ ಪ್ರಕರಣಗಳನ್ನು ಆದಷ್ಟು ಶೀಘ್ರವೇ ಪೂರ್ಣಗೊಳಿಸಬೇಕು, ಅನುಚ್ಛೇದ 371(ಜೆ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಥಳೀಯ ವೃಂದ ರಚಿಸಿ, ಅಧಿಸೂಚಿಸಿ, ಖಾಲಿ ಹುದ್ದೆಗಳನ್ನು ತುಂಬುವಲ್ಲಿ ಅನುಸರಿಸಬೇಕಾದ ವಿಧಾನಗಳನ್ನು ಪಾಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಗ್ರೂಪ್ ಡಿ ಹಾಗೂ ವಾಹನ ಚಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ನಿಟ್ಟಿನಲ್ಲಿ 2008ರ ಆದೇಶದಲ್ಲಿ ನೀಡಲಾದ ಸೂಚನೆಗಳನ್ನು ಪಾಲಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.