ಶ್ರೀನಗರ: ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಮೊದಲ ಬಾರಿಗೆ ಅಲ್ಲಿನ ಹೈಕೋರ್ಟ್ 33 ಪತ್ರಾಂಕಿತವಲ್ಲದ ಹುದ್ದೆಗಳಿಗೆ ದೇಶಾದ್ಯಂತದ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ. ಇದೇ ಮೊದಲ ಬಾರಿ ಜಮ್ಮು- ಕಾಶ್ಮೀರದಲ್ಲಿನ ಸರ್ಕಾರಿ ಹುದ್ದೆಗಳಿಗೆ ಅಲ್ಲಿನ ಮೂಲ ನಿವಾಸಿಗಳು ಮಾತ್ರ ಅರ್ಹರಾಗಿರಬೇಕು ಎಂಬ ನಿಯಮ ತೆಗೆದುಹಾಕಿ ದೇಶದ ಎಲ್ಲ ಅಭ್ಯರ್ಥಿಗೆ ಅವಕಾಶ ನೀಡಲಾಗಿದೆ.
ಜಮ್ಮು-ಕಾಶ್ಮೀರ ಹೈಕೋರ್ಟ್ನಲ್ಲಿ ಖಾಲಿ ಇರುವ ಸ್ಟೆನೋಗ್ರಾಫರ್ಗಳು, ಟೈಪಿಸ್ಟ್ಗಳು ಹಾಗೂ ಡ್ರೖೆವರ್ಗಳ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬೇಕು ಎಂಬ ನಿಯಮವನ್ನು ಸಹ ತೆಗೆದುಹಾಕಲಾಗಿದೆ. ಕಾಯ್ದಿರಿಸಿದ ವಿಭಾಗಗಳಲ್ಲಿನ ಹುದ್ದೆಗಳಿಗೆ ಜಮ್ಮು- ಕಾಶ್ಮೀರ ಮೀಸಲಾತಿ ನಿಯಮ 2005ರ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ. ಈ ವಿಭಾಗದಲ್ಲಿ ಲಭ್ಯವಿರುವ ಹುದ್ದೆಗಳು ಜಮ್ಮು- ಕಾಶ್ಮೀರದ ಶಾಶ್ವತ ನಿವಾಸಿಗಳಿಗೆ ಮಾತ್ರ ಮೀಸಲಾಗಿರುತ್ತವೆ. 33 ನಾನ್-ಗೆಜೆಟೆಡ್ ಹುದ್ದೆಗಳಲ್ಲಿ 17ನ್ನು ಓಪನ್ ಮೆರಿಟ್ ವರ್ಗಕ್ಕೆ ಸೇರಿಸಲಾಗಿದ್ದು, ಈ ಹುದ್ದೆಗಳಿಗೆ ದೇಶಾದ್ಯಂತ ಇರುವ ಯಾವುದೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜಮ್ಮು- ಕಾಶ್ಮೀರ ಹಾಗೂ ಲಡಾಖ್ನ ಅಭ್ಯರ್ಥಿಗಳು ಅರ್ಜಿಗಳನ್ನು ಅಲ್ಲಿನ ಸ್ಥಳೀಯ ಜಿಲ್ಲಾ ನ್ಯಾಯಾಧೀಶರಿಗೆ ಸಲ್ಲಿಸಬೇಕು. ದೇಶದ ಇತರ ಭಾಗದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಕಾಶ್ಮೀರಕ್ಕೆ ಹೊಸ ಕಾನೂನು?: ಉದ್ಯೋಗದಲ್ಲಿ ಸ್ಥಳೀಯ ನಿವಾಸಿಗಳಿಗೆ ಮೀಸಲಾತಿ ನೀಡಬೇಕು ಎಂದು ಜಮ್ಮು-ಕಾಶ್ಮೀರದ ಪ್ರಾದೇಶಿಕ ಬಿಜೆಪಿ ಘಟಕಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು. ಭಾರತೀಯರು ಜಮ್ಮು- ಕಾಶ್ಮೀರಕ್ಕೆ ಹೋಗಿ ಅಲ್ಲಿನ ನಾಗರಿಕತ್ವ ಪಡೆಯಬೇಕಾದರೆ ಕನಿಷ್ಠ 15-20 ವರ್ಷ ಅಲ್ಲಿ ವಾಸವಾಗಿರಬೇಕು ಎಂಬ ನಿಬಂಧನೆ ಹಾಕಲು ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶೀಘ್ರವೇ ಕಾಶ್ಮೀರಕ್ಕೆ ನೂತನ ನಿವಾಸಿ ಕಾನೂನು ಅಳವಡಿಸುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ. ಕಳೆದ ಆ. 5ರಂದು ಕೇಂದ್ರ ಸರ್ಕಾರ ಸಂವಿಧಾನದ ಅನುಚ್ಛೇದ 370ರ ಅಡಿ ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಜಮ್ಮು- ಕಾಶ್ಮೀರ ಹಾಗೂ ಲಡಾಖ್ನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿತ್ತು.
ಈ ಹಿಂದಿನ ನಿಯಮ
ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿಗೂ ಮೊದಲು ಅಲ್ಲಿನ ಯಾವುದೇ ಸರ್ಕಾರಿ ಹುದ್ದೆಗಳು ಅಲ್ಲಿನ ಮೂಲ ನಿವಾಸಿಗಳಿಗೆ ಮಾತ್ರ ಸೀಮಿತವಾಗಿದ್ದವು. ದೇಶದ ಯಾವುದೇ ಭಾಗದ ಅಭ್ಯರ್ಥಿಗಳು ಈ ಪ್ರದೇಶದಲ್ಲಿನ ಹುದ್ದೆಗಳಿಗೆ ಅರ್ಹರಾಗುತ್ತಿರಲಿಲ್ಲ. ವಿಶೇಷ ಸ್ಥಾನಮಾನದಿಂದಾಗಿ ಅನ್ಯ ಪ್ರದೇಶಗಳ ಜನರು ಜಮ್ಮು- ಕಾಶ್ಮೀರಕ್ಕೆ ಹೋಗಿ ವಾಸಿಸಲು ಹಾಗೂ ಅಲ್ಲಿ ಭೂಮಿ, ಆಸ್ತಿ ಖರೀದಿಸುವಂತಿರಲಿಲ್ಲ.