Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ನೌಕರಿ ಹೆಸರಲ್ಲಿ ಟೋಪಿ!

Saturday, 11.08.2018, 3:06 AM       No Comments

| ವರುಣ ಹೆಗಡೆ ಬೆಂಗಳೂರು

ಉದ್ಯೋಗಭಾಗ್ಯ ಕರುಣಿಸುವ ಭರವಸೆ ನೀಡಿ ತರಬೇತಿ ಹೆಸರಲ್ಲಿ ಲಕ್ಷಾಂತರ ರೂ. ಶುಲ್ಕ ಪಡೆದಿದ್ದ ಸರ್ಕಾರವೇ 1.10 ಲಕ್ಷ ನಿರುದ್ಯೋಗಿಗಳಿಗೆ ಟೋಪಿ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರದ ಭರವಸೆ ನಂಬಿ ಹಗಲು ರಾತ್ರಿ, ನೌಕರಿಯ ಜಪ ಮಾಡುತ್ತಿದ್ದ ಯುವಕ-ಯುವತಿಯರ ಕನಸು ಛಿದ್ರವಾಗಿದೆ.

ಯುವ ಯುಗ ಯೋಜನೆಯಡಿ ಉಚಿತವಾಗಿ ಕೌಶಲ್ಯವೃದ್ಧಿ ತರಬೇತಿ ಕೊಡುವುದರ ಜತೆಯಲ್ಲೇ ಉದ್ಯೋಗ ಕೊಡಿಸುವುದಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ಬಳಿಕ ‘ಉಚಿತ’ ಎಂಬ ಮಾತು ಹಿಂಪಡೆದು ಪ್ರವೇಶ ಶುಲ್ಕದ ಹೆಸರಲ್ಲಿ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಲಾಗಿತ್ತು. ಹೀಗೆ ಶುಲ್ಕ ಕಟ್ಟಿ ತರಬೇತಿ ಪಡೆದು 1 ವರ್ಷ ಕಳೆದರೂ ಒಬ್ಬ ಅಭ್ಯರ್ಥಿಗೂ ಕೆಲಸ ಸಿಕ್ಕಿಲ್ಲ.

ಮಾತು ತಪ್ಪಿದ ಸರ್ಕಾರ: ಯುವ ಯುಗ ಯೋಜನೆಯಡಿ 1.10 ಲಕ್ಷ ನಿರುದ್ಯೋಗಿಗಳ ಪೈಕಿ 50 ಸಾವಿರ ಅಭ್ಯರ್ಥಿಗಳಿಗೆ ಕಿಯೋನಿಕ್ಸ್ ಹಾಗೂ 60 ಸಾವಿರ ಅಭ್ಯರ್ಥಿಗಳಿಗೆ ಕೆಲಸ ಕೊಡಿಸುವ ಜವಾಬ್ದಾರಿಯನ್ನು ಐಸಿಟಿ ಕೌಶಲ ಅಭಿವೃದ್ಧಿ ನಿಗಮಕ್ಕೆ ಹಂಚಿಕೆ ಮಾಡಲಾಗಿತ್ತು. ಮೊದಲು ಉಚಿತ ತರಬೇತಿ ಎಂದವರು ಬಳಿಕ ಆಯಾ ಕೋರ್ಸ್​ಗಳಿಗೆ ಅನುಗುಣವಾಗಿ ಪ್ರವೇಶ ಶುಲ್ಕ ಸಂಗ್ರಹಿಸಿದ್ದರು. ಪ್ರವೇಶ ಶುಲ್ಕ ಪಾವತಿಸುವ ಸಾಮರ್ಥ್ಯವಿಲ್ಲದೆ ಬಹುತೇಕರು ತರಬೇತಿಗೆ ಹೋಗಲು ಹಿಂದೇಟು ಹಾಕಿದ್ದಾರೆ. 1.10 ಲಕ್ಷದ ಗುರಿಯಲ್ಲಿ 2018ರ ಮಾರ್ಚ್ ಅಂತ್ಯಕ್ಕೆ ಕಿಯೋನಿಕ್ಸ್​ನಲ್ಲಿ 35,711 ಹಾಗೂ ಐಸಿಟಿಯಲ್ಲಿ 1323 ಅಭ್ಯರ್ಥಿಗಳಷ್ಟೇ ತರಬೇತಿ ಪಡೆದಿರುವುದು ಸರ್ಕಾರದ ಯೋಜನೆಗೆ ಹಿಡಿದ ಕೈಗನ್ನಡಿ.

ಕಡಿಮೆ ವೇತನ ಕೆಲಸ ಬೇಡವಂತೆ

ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗಕ್ಕಾಗಿ ಕಂಪನಿಗಳಿಗೆ ಕಳುಹಿಸಲಾಗುತ್ತಿದೆ. ಆದರೆ, ಅಭ್ಯರ್ಥಿಗಳು ಕಡಿಮೆ ವೇತನ, ಕಂಪನಿ, ಇಚ್ಛೆಗೆ ತಕ್ಕ ಸೌಲಭ್ಯ ಇಲ್ಲ ಎಂಬ ಕಾರಣವೊಡ್ಡಿ ನಾವು ತೋರಿಸಿದ ಕೆಲಸಕ್ಕೆ ಹೋಗುತ್ತಿಲ್ಲ. ಈ ಯೋಜನೆಯಡಿ ಕೆಲಸ ಸಿಗದಿರಲು ಇದೂ ಒಂದು ಕಾರಣ ಎಂದು ಕಿಯೋನಿಕ್ಸ್ ಅಧಿಕಾರಿಗಳು ಸಮಜಾಯಿಷಿ ಕೊಡುತ್ತಾರೆ.

ಪ್ರತಿ ವರ್ಷದಂತೆಯೇ ಕಿಯೋನಿಕ್ಸ್ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿದ್ದೇವೆ. ಯುವ ಯುಗ ಯೋಜನೆಯಡಿ ವಿವಿಧ ವಿಷಯದಲ್ಲಿ ತರಬೇತಿ ಪಡೆದಿರುವ ಅಭ್ಯರ್ಥಿಗಳ ಪೈಕಿ ಎಷ್ಟು ಮಂದಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿಲ್ಲ.

|ರುದ್ರಪ್ಪ, ಕಿಯೋನಿಕ್ಸ್ ನಿರ್ದೇಶಕ

ಯಾವ ಕೆಲಸದ ಆಮಿಷ?

ತರಬೇತಿ ಪಡೆದವರಿಗೆ ಎಲೆಕ್ಟ್ರಾನಿಕ್ ಸೆಕ್ಟರ್, ಲೈಫ್ ಸೈನ್ಸ್, ಬ್ಯಾಂಕಿಂಗ್, ಫೈನಾನ್ಷಿಯಲ್ ಉದ್ಯಮ, ಹೂಡಿಕೆ ಕ್ಷೇತ್ರ, ಟೆಲಿಕಾಂ ಕ್ಷೇತ್ರ, ಮಾಧ್ಯಮ ಮತ್ತು ಮನರಂಜನಾ ಕೌಶಲ್ಯ ವಲಯದಲ್ಲಿ ಬಾಷ್, ಐಬಿಎಂ, ಒರಾಕಲ್ ಅಕಾಡೆಮಿ, ಎಸ್​ಎಪಿ ಲ್ಯಾಬ್, ಆರ್ಚಿಬಸ್ ಸೇರಿ ವಿವಿಧ ಸಂಸ್ಥೆ ಹಾಗೂ ಕಂಪನಿಯಲ್ಲಿ ಕೆಲಸ ಕೊಡಿಸುವ ಭರವಸೆ ನೀಡಲಾಗಿತ್ತು.

ಸರ್ಕಾರ ಹೇಳಿದ್ದೇನು?

ಉದ್ಯೋಗಕ್ಕೆ ಬೇಕಾದ ಶೈಕ್ಷಣಿಕ ಅರ್ಹತೆಯಿದ್ದರೂ ಕೌಶಲ್ಯದ ಅಭಾವದಿಂದಾಗಿ ಉದ್ಯೋಗ ವಂಚಿತರಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವ ಮೂಲಕ ಕೌಶಲ್ಯ ವೃದ್ಧಿಸಿ, ಉದ್ಯೋಗ ನೀಡುವುದಾಗಿ ಯುವ ಯುಗ ಯೋಜನೆಯನ್ನು ಸರ್ಕಾರ ಘೋಷಿಸಿ 2017ರ ಏಪ್ರಿಲ್​ನಲ್ಲಿ ಜಾರಿಗೆ ತಂದಿತ್ತು. 2018ರ ಮಾರ್ಚ್ ಒಳಗೆ 1.10 ಲಕ್ಷ ಅರ್ಹ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಕಲ್ಪಿಸುವುದಾಗಿ ಘೋಷಣೆ ಮಾಡಿತ್ತು.

ಲಕ್ಷ ಲಕ್ಷ ರೂ. ವಸೂಲಿ

ಉದ್ಯೋಗ ಸಿಗುತ್ತದೆ ಎಂಬ ಆಸೆಯಿಂದ ಸಾವಿರಾರು ಅಭ್ಯರ್ಥಿಗಳು ಪ್ರವೇಶ ಶುಲ್ಕ ಪಾವತಿಸಿ (1500 ರೂ.ನಿಂದ 1 ಲಕ್ಷ ರೂ.) ವಿವಿಧ ಕೋರ್ಸ್​ಗಳಿಗೆ ಸೇರಿದ್ದರು. ಯುವ ಯುಗ ಯೋಜನೆಯಡಿ ಈಗ 38,034 ಅಭ್ಯರ್ಥಿಗಳು ತರಬೇತಿ ಪಡೆದಿದ್ದಾರೆ. ಇದರಲ್ಲಿ 36,711 ಅಭ್ಯರ್ಥಿಗಳು ಕಿಯೋನಿಕ್ಸ್ ನಲ್ಲೇ ತರಬೇತಿ ಪಡೆದಿದ್ದಾರೆ. ಆದರೆ, ಸರ್ಕಾರ ಭರವಸೆ ನೀಡಿದ್ದಂತೆ ತರಬೇತಿ ಪಡೆದವರಿಗೆ ಉದ್ಯೋಗ ಕೊಡಿಸದೆ ವಂಚಿಸಿದೆ.

86 ಉದ್ಯೋಗ ಲಭ್ಯ!

ಯುವ ಯುಗ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಐಸಿಟಿ ಕೌಶಲ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ತರಬೇತಿ ಕೇಂದ್ರಗಳ ಸ್ಥಾಪನೆ ವಿಳಂಬವಾದ ಹಿನ್ನೆಲೆಯಲ್ಲಿ ಬರೀ 1323 ಅಭ್ಯರ್ಥಿಗಳಿಗೆ ತರಬೇತಿ ನೀಡಿದೆ. ಪ್ರಸ್ತುತ ಐಸಿಟಿ ಹಾಗೂ ಕಿಯೋನಿಕ್ಸ್​ನಲ್ಲಿ ಯುವ ಯುಗ ಯೋಜನೆಯಡಿ 9 ಸಾವಿರ ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಆದರೆ, ಉದ್ಯೋಗ ನೀಡುವ ವಿಚಾರ ವಾಗಿ ಒಪ್ಪಂದ ಮಾಡಿಕೊಂಡಿರುವ ಕಂಪನಿಗಳು ಕೇವಲ 86 ಹುದ್ದೆಗಳ ಆಫರ್ ನೀಡಿವೆ.

50 ಲಕ್ಷ ಉದ್ಯೋಗ ಸೃಷ್ಟಿ ಎಂಬ ಸುಳ್ಳು

ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಸರ್ಕಾರ ಕಳೆದ 5 ವರ್ಷದಲ್ಲಿ ಬರೋಬ್ಬರಿ 50 ಲಕ್ಷ ಉದ್ಯೋಗ ಸೃಷ್ಟಿಸಿರುವುದಾಗಿ ಬಿಂಬಿಸಿಕೊಂಡಿತ್ತು. 1996ರಿಂದಲೇ ಕಿಯೋನಿಕ್ಸ್ ರಾಜ್ಯದ ವಿವಿಧೆಡೆ 209 ಕೇಂದ್ರದಲ್ಲಿ ತರಬೇತಿ ನೀಡುತ್ತಿದೆ. ಆದರೆ, ಸರ್ಕಾರ ಕಿಯೋನಿಕ್ಸ್ ಕೇಂದ್ರದಲ್ಲಿ ನಡೆದ ತರಬೇತಿಯನ್ನೇ ಯುವ ಯುಗ ಯೋಜನೆಯಡಿ ನಿರುದ್ಯೋಗ ಪದವಿ ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದೇವೆ ಎಂದು ಬಿಂಬಿಸಿಕೊಂಡಿದೆ. ಎಸ್​ಸಿಪಿ ಮತ್ತು ಟಿಎಸ್​ಪಿ ಯೋಜನೆಯಡಿ ತರಬೇತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ 3 ಸಾವಿರ ಅಭ್ಯರ್ಥಿಗಳಿಗೆ ಉದ್ಯೋಗ ಕೊಟ್ಟಿದ್ದು, ಯುವ ಯುಗ ಯೋಜನೆಯಡಿಯಲ್ಲೇ ಉದ್ಯೋಗ ನೀಡಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ವಾಸ್ತವದಲ್ಲಿ ಯಾರೊಬ್ಬರಿಗೂ ಸರ್ಕಾರ ಉಚಿತ ತರಬೇತಿಯನ್ನೂ ಕೊಟ್ಟಿಲ್ಲ, ಉದ್ಯೋಗವನ್ನೂ ಕೊಡಿಸಿಲ್ಲ.

ಯುವ ಯುಗ ಯೋಜನೆಯಡಿ ತರಬೇತಿ ಪಡೆದಿರುವ ಅಭ್ಯರ್ಥಿಗಳು ಉದ್ಯೋಗ ಪಡೆದಿರುವ ಬಗ್ಗೆ ಸೂಕ್ತ ಮಾಹಿತಿಯಿಲ್ಲ. ಈ ಬಗ್ಗೆ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

| ಗೌರವ್ ಗುಪ್ತಾ ಪ್ರಧಾನ ಕಾರ್ಯದರ್ಶಿ (ಐಟಿ ಬಿಟಿ)

Leave a Reply

Your email address will not be published. Required fields are marked *

Back To Top