ಕಾಶ್ಮೀರಿ ವಿದ್ಯಾರ್ಥಿನಿಯರ ಕುರಿತು ಟ್ವೀಟ್​ ಮಾಡಿದ್ದ ಜೆಎನ್​ಯು ಸಂಶೋಧಕಿ ವಿರುದ್ಧ ಎಫ್​ಐಆರ್ ದಾಖಲು

ಲಖನೌ: ಟ್ವೀಟ್​ ಮೂಲಕ ವದಂತಿ ಹಬ್ಬಿಸುವುದರೊಂದಿಗೆ ಅಲ್ಪಸಂಖ್ಯಾತರಲ್ಲಿ ಭಯ ಉಂಟು ಮಾಡಿದ ಆರೋಪದ ಮೇಲೆ ಜವಾಹರ್​ಲಾಲ್​ ನೆಹರೂ ವಿಶ್ವವಿದ್ಯಾಲಯದ(ಜೆಎನ್​ಯು) ವಿದ್ಯಾರ್ಥಿ ಕಾರ್ಯಕರ್ತೆ ಹಾಗೂ ಸಂಶೋಧಕಿ ಶೆಹ್ಲಾ ರಶೀದ್ ವಿರುದ್ಧ ಡೆಹ್ರಾಡೂನ್​ ಪೊಲೀಸರು ಸೋಮವಾರ ಎಫ್​ಐಆರ್​ ದಾಖಲಿಸಿದ್ದಾರೆ.

15 ರಿಂದ 20 ಕಾಶ್ಮೀರಿ ವಿದ್ಯಾರ್ಥಿನಿಯರು ಡೆಹ್ರಾಡೂನ್​ ಹಾಸ್ಟೆಲ್​ನಲ್ಲಿ ಸಿಲುಕಿಕೊಂಡಿದ್ದು ಉದ್ರಿಕ್ತ ಗುಂಪೊಂದು ಹಾಸ್ಟೆಲ್​ ಸುತ್ತುವರಿದಿದೆ. ವಿದ್ಯಾರ್ಥಿಯರನ್ನು ಹೊರದಬ್ಬಿ ಎಂದು ಒತ್ತಾಯ ಮಾಡುತ್ತಿದ್ದು, ಇಲ್ಲಿ ಪೊಲೀಸರಿದ್ದರೂ ಗುಂಪನ್ನು ಚದುರಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಯೋಧರ ಮೇಲೆ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಫೆ. 16 ರಂದು ರಶೀದ್​ ಟ್ವೀಟ್ ಮಾಡಿದ್ದರು.​

ಟ್ವೀಟ್​ ಅನ್ನು ಆಧಾರವಾಗಿ ಇಟ್ಟುಕೊಂಡು ಸ್ಥಳೀಯರೊಬ್ಬರು ಡೆಹ್ರಾಡೂನ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಭಾರತೀಯ ದಂಡ ಸಂಹಿತೆ 504(ಉದ್ದೇಶಪೂರ್ವಕವಾಗಿ ಶಾಂತಿಗೆ ಭಂಗ ತರುವುದು) 501(1) (b) (ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವುದು) ಮತ್ತು 153b (ಪೂರ್ವಾಗ್ರಹವಾಗಿ ರಾಷ್ಟ್ರೀಯ ಏಕತೆಗೆ ಧಕ್ಕೆ ತರುವುದು) ಸೆಕ್ಷನ್​ ಅಡಿಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ.

ಪೊಲೀಸ್​ ಇಲಾಖೆ ಸ್ವೀಕರಿಸಿದ ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಡೆಹ್ರಾಡೂನ್​ನ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ನಿವೇದಿತಾ ಕುಕ್ರೆತಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)