ಗಿಫ್ಟ್ ಗಿಟ್ಟಿಸಿದ್ದ ಪೇದೆ ಅರೆಸ್ಟ್

ಬೆಂಗಳೂರು: ಕುಖ್ಯಾತ ಕಳ್ಳನ ಬೆನ್ನತ್ತಿ ಹಿಡಿದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚೆನ್ನಣ್ಣವರ್​ರಿಂದ ಶಹಬ್ಬಾಷ್​ಗಿರಿ ಪಡೆಯುವ ಜತೆಗೆ ಪಲ್ಸರ್ ಬೈಕ್, 6 ತಿಂಗಳು ವೇತನಸಹಿತ ರಜೆಯ ಬಹುಮಾನ ಹಾಗೂ ದಕ್ಷಿಣ ಭಾರತ ಪ್ರವಾಸಕ್ಕೆ ಅವಕಾಶ ಗಿಟ್ಟಿಸಿದ್ದ ಜ್ಞಾನಭಾರತಿ ಠಾಣೆ ಮುಖ್ಯಪೇದೆ ಚಂದ್ರಕುಮಾರ್ ಈಗ ಅತ್ಯಾಚಾರ ಪ್ರಕರಣದಲ್ಲಿ ನಂದಿನಿ ಲೇಔಟ್ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.

ವಿಜಯಾನಂದನಗರದ 27 ವರ್ಷದ ಹೋಂ ಗಾರ್ಡ್ ಕೊಟ್ಟ ದೂರಿನ ಮೇರೆಗೆ ಸೋಮವಾರ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ನಂದಿನಿ ಲೇಔಟ್ ಪೊಲೀಸರು ತಿಳಿಸಿದ್ದಾರೆ

ಜ್ಞಾನಭಾರತಿ ವಿಶ್ವವಿದ್ಯಾಲಯದ ಆವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೋಂ ಗಾರ್ಡ್​ಗೆ ನ.2ರಂದು ಚಂದ್ರಕುಮಾರ್ ಮನೆಯವರೆಗೂ ಡ್ರಾಪ್ ಮಾಡುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದರು. ಆ ನಂತರ ಆಕೆಯನ್ನು ಭೇಟಿ ಮಾಡಿ ಜ್ಯೂಸ್ ಕೊಡಿಸುವುದು, ಮಾತನಾಡುವುದು ಮಾಡುತ್ತಿದ್ದರು. ನ.16ರ ರಾತ್ರಿ 8.15ರಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಹೋಂ ಗಾರ್ಡ್​ಗೆ ಚಂದ್ರಕುಮಾರ್ ಮೈ ಮುಟ್ಟಿ ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದರು. ನೊಂದ ಆಕೆ, ಜ್ಞಾನಭಾರತಿ ಠಾಣೆ ಇನ್​ಸ್ಪೆಕ್ಟರ್​ಗೆ ದೂರು ನೀಡಿದ್ದರು. ಇಬ್ಬರನ್ನೂ ಕೂರಿಸಿ ಇನ್​ಸ್ಪೆಕ್ಟರ್ ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಅಂದು ರಾತ್ರಿ 9.30ಕ್ಕೆ ಮನೆಗೆ ತೆರಳಿ ಸಮವಸ್ತ್ರ ಬದಲಾಯಿಸುತ್ತಿರುವಾಗ ಕಾಲಿಂಗ್ ಬೆಲ್ ಶಬ್ದವಾಯಿತು. ಗಂಡ ಬಂದಿರಬೇಕೆಂದು ಡೋರ್ ತೆಗೆದಾಗ ಚಂದ್ರಕುಮಾರ್, ಏಕಾಏಕಿ ಒಳನುಗ್ಗಿ ಮೇಲೆ ಬಿದ್ದು ಅತ್ಯಾಚಾರ ಎಸಗಿದ್ದಾರೆ. ಬಳಿಕ ಮೈ ಮೇಲೆ ನೀರು ಎರಚಿ

ಅಲ್ಲಿಂದ ಪರಾರಿಯಾದರು ಎಂದು ದೂರಿನಲ್ಲಿ ಹೋಂ ಗಾರ್ಡ್ ಆರೋಪಿಸಿದ್ದಾರೆ. ಈ ಮೇರೆಗೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.