ಕಾಶ್ಮೀರ ಸಹಜ ಸ್ಥಿತಿಗೆ ಟೈಂ ಬೇಕು: ನಿರ್ಬಂಧ ಸಡಿಲಿಸುವಂತೆ ಯಾವುದೇ ಆದೇಶ ನೀಡಿಲ್ಲವೆಂದ ಸುಪ್ರೀಂ

ನವದೆಹಲಿ: ಜಮ್ಮು- ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿಷೇಧಾಜ್ಞೆ, ಇನ್ನಿತರ ನಿರ್ಬಂಧಗಳನ್ನು ರದ್ದುಪಡಿಸುವ ಬಗ್ಗೆ ಸದ್ಯ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ. ನೂತನ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಯಾಗಿ, ಜನಜೀವನ ಸಹಜಸ್ಥಿತಿಗೆ ಮರಳುವುದಕ್ಕೆ ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ. ಸಾಮಾಜಿಕ ಕಾರ್ಯಕರ್ತ ತೆಹಸೀನ್ ಪೂನಾವಾಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸವೋಚ್ಚ ನ್ಯಾಯಾಲಯ, ಶಾಂತಿ ಸ್ಥಾಪನೆಗೆ ಸರ್ಕಾರಕ್ಕೂ ಕಾಲಾವಕಾಶಬೇಕು ಎಂದು ಅಭಿಪ್ರಾಯಪಟ್ಟು ವಿಚಾರಣೆಯನ್ನು ಎರಡು ವಾರ ಮುಂದೂಡಿದೆ.

ಸರ್ಕಾರದ ಪರ ಹಾಜರಾದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, 2016ರಲ್ಲಿ ಬುರ್ಹಾನ್ ವಾನಿ ಸಾವಿನ ನಂತರ ಉಂಟಾದ ಗಲಭೆಯನ್ನು ಗಮನದಲ್ಲಿರಿಸಿಕೊಂಡು ನಿಷೇಧಾಜ್ಞೆ ಜಾರಿ ಮಾಡಲಾಯಿತು. ನಂತರ ನಾನಾ ಕಾರಣಗಳಿಂದ ಅದನ್ನು ಮುಂದುವರಿಸಲಾಯಿತು. ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮತ್ತು ಜಮ್ಮು- ಕಾಶ್ಮೀರ ಪುನರ್ ರಚನೆ ಮಸೂದೆ ಮಂಡನೆ ಬಳಿಕ ಇಲ್ಲಿಯವರೆಗೆ ಒಂದು ಹನಿ ರಕ್ತವೂ ಹರಿದಿಲ್ಲ. ಸರ್ಕಾರ ರಾಜ್ಯದ ಸ್ಥಿತಿ ಬಗ್ಗೆ ಪ್ರತಿನಿತ್ಯ ಮಾಹಿತಿ ಕಲೆ ಹಾಕುತ್ತಿದೆ ಎಂದು ತಿಳಿಸಿದರು. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಅಲ್ಲಿ ಹೇರಲಾಗಿರುವ ನಿಷೇದಾಜ್ಞೆಯನ್ನು ಪ್ರಶ್ನಿಸಿ ಪೂನಾವಾಲಾ ಈ ಅರ್ಜಿ ಸಲ್ಲಿಸಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲ, ಮೆಹಬೂಬ ಮುಫ್ತಿ, ಪ್ರತ್ಯೇಕತಾವಾದಿ ನಾಯಕ ಸಜ್ಜದ್ ಲೋನ್ ಬಂಧನವನ್ನೂ ವಿರೋಧಿಸಿದ್ದರು ಮತ್ತು ಅಲ್ಲಿ ವಿಧಿಸಲಾಗಿದ್ದ ಕರ್ಫ್ಯೂ, ಇಂಟರ್ನೆಟ್, ಫೋನ್ ಸೇವೆ ಕಡಿತ ಮುಂತಾದವುಗಳನ್ನು ಹಿಂಪಡೆಯುವಂತೆ ಸೂಚಿಸಲು ಮನವಿ ಮಾಡಿದ್ದರು.

ಅಮೆರಿಕ ಮಧ್ಯಸ್ಥಿಕೆ ಪ್ರಸ್ತಾಪ ಮಾಡಲ್ಲ: ಕಾಶ್ಮೀರ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ವಿಷಯವನ್ನು ಮುಂದೆಂದೂ ಪ್ರಸ್ತಾಪಿಸುವುದಿಲ್ಲ ಎಂದು ವಾಷಿಂಗ್ಟನ್​ನಲ್ಲಿರುವ ಭಾರತದ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ ಸ್ಪಷ್ಟಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಯಿತು. ಉಭಯ ರಾಷ್ಟ್ರಗಳು ಬಯಸಿದ್ದಲ್ಲಿ ಮಾತ್ರವೇ ಮಧ್ಯಸ್ಥಿಕೆ ವಹಿಸುವುದಾಗಿ ಟ್ರಂಪ್ ತಮ್ಮ ಹೇಳಿಕೆಯನ್ನು ತಿದ್ದಿದರು. ಪ್ರಧಾನಿ ಮೋದಿ ಇಂತಹ ಪ್ರಸ್ತಾಪವನ್ನು ಟ್ರಂಪ್ ಜತೆಗೆ ಎಂದೂ ಮಾಡಿಲ್ಲ ಎಂದು ಭಾರತ ಕೂಡ ಸ್ಪಷ್ಟನೆ ನೀಡಿತು.

ಸೀಮೆ ನಿರ್ಣಯ ಚರ್ಚೆ: ಪುನರ್ ರಚಿತ ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳ ಸೀಮೆ ನಿರ್ಣಯದ ಬಗ್ಗೆ ಅನೌಪಚಾರಿಕ ಚರ್ಚೆ ನಡೆಸಿದೆ. ಪುನರ್ ರಚನೆ ಕಾಯ್ದೆಯನ್ವಯ ಸೀಮಾ ನಿರ್ಣಯದ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಸೂಚನೆ ನೀಡಿಲ್ಲ. ಹೀಗಾಗಿ ಈ ಬಗ್ಗೆ ಅನೌಪಚಾರಿಕ ಚರ್ಚೆ ಮಾಡಲಾಗಿದೆ. ಪುನರ್ ರಚನೆ ಕಾಯ್ದೆ ಪ್ರಕಾರ ಜಮ್ಮು- ಕಾಶ್ಮೀರದಲ್ಲಿ ವಿಧಾನಸಭೆ ಇದ್ದರೆ, ಲಡಾಖ್​ನಲ್ಲಿ ವಿಧಾನಸಭೆ ಇರುವುದಿಲ್ಲ.

ವಿಮಾನ ಬೇಡ, ಮುಕ್ತ ಸಂಚಾರಕ್ಕೆ ಅವಕಾಶ ನೀಡಿ

ಕಾಶ್ಮೀರದ ಪರಿಸ್ಥಿತಿಯ ಅವಲೋಕನ ನಡೆಸುವುದಕ್ಕಾಗಿ ರಾಹುಲ್ ಗಾಂಧಿಯನ್ನು ಕಾಶ್ಮೀರಕ್ಕೆ ಆಹ್ವಾನಿಸುತ್ತೇನೆ. ಅವರಿಗಾಗಿ ವಿಶೇಷ ವಿಮಾನ ಕಳುಹಿಸಿಕೊಡುತ್ತೇನೆ ಎಂದಿದ್ದ ಜಮ್ಮು- ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್​ಗೆ ಪ್ರತಿಕ್ರಿಯಿಸಿರುವ ರಾಹುಲ್, ನನಗೆ ವಿಶೇಷ ವಿಮಾನದ ಅಗತ್ಯವಿಲ್ಲ. ಜನರನ್ನು ಭೇಟಿ ಮಾಡಲು ಮುಕ್ತ ಅವಕಾಶ ಮತ್ತು ಸ್ಥಳೀಯ ನಾಯಕರ ಭೇಟಿ ಹಾಗೂ ಯೋಧರೊಂದಿಗೆ ಸಂವಾದ ನಡೆಸಲು ಅವಕಾಶ ನೀಡಿ ಎಂದಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ವಣವಾಗಿದೆ ಎಂದು ರಾಹುಲ್ ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲ, ನಿಜವಾದ ಸ್ಥಿತಿ ತಿಳಿದುಕೊಂಡು ಟೀಕೆ ಮಾಡಬೇಕು ಎಂದಿದ್ದರು.

ಅಮೆರಿಕ ಸಂಸದ ಕ್ಷಮೆಯಾಚನೆ…

ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ತೆಗೆದುಕೊಂಡಿರುವ ಕ್ರಮ ಜನರ ನಡುವೆ ಗಲಭೆ ಹುಟ್ಟಿಸು ವಂತದ್ದು ಎಂದು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋಗೆ ಪತ್ರ ಬರೆದಿದ್ದ ಅಮೆರಿಕ ಸಂಸದ ಟಾಮ್ ಸಿವೋಝಿ, ಈ ಕುರಿತು ಕ್ಷಮೆಯಾಚಿಸಿದ್ದಾರೆ. ಟಾಮ್ ಪತ್ರಕ್ಕೆ ಅಮೆರಿಕದಲ್ಲಿ ನೆಲೆಸಿರುವ 100ಕ್ಕೂ ಹೆಚ್ಚು ಭಾರತೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಪತ್ರವನ್ನು ಹಿಂಪಡೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಟಾಮ್ ಪತ್ರ ಬರೆಯುವ ಮೊದಲು ಭಾರತೀಯ ಮೂಲದವರೊಂದಿಗೆ ಈ ವಿಚಾರವಾಗಿ ರ್ಚಚಿಸಿದ್ದರೆ, ನನ್ನ ಅಭಿಪ್ರಾಯದಲ್ಲಿ ಬದಲಾವಣೆಯಾಗಿರುತ್ತಿತ್ತು ಎಂದು ಹೇಳಿದ್ದಾರೆ.

ವಾಸ್ತವ ಅರ್ಥವಾಗುತ್ತಿದೆಯೇ?

ಜಮ್ಮು- ಕಾಶ್ಮೀರದ ವಿಷಯದಲ್ಲಿ ವಿಶ್ವಸಂಸ್ಥೆ ಪಾಕ್​ನ ಅಹವಾಲನ್ನೇನು ಹಾರ- ತುರಾಯಿ ಹಿಡಿದು ಸ್ವಾಗತಿಸುತ್ತದೆ ಎಂಬ ಮೂರ್ಖತನವನ್ನು ಬಿಡಿ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿದ್ದಾರೆ. ಭಾರತ ಸರ್ಕಾರ ಜಮ್ಮು- ಕಾಶ್ಮೀರದ ಬಗ್ಗೆ ತೆಗೆದುಕೊಂಡಿರುವ ನಿರ್ಧಾರದ ವಿಷಯದಲ್ಲಿ ವಿಶ್ವಸಂಸ್ಥೆ ಭದ್ರತಾ ಸಮಿತಿ ಮತ್ತು ಇತರ ಮುಸಿಂ ರಾಷ್ಟ್ರಗಳ ಬೆಂಬಲ ಪಡೆದುಕೊಳ್ಳುವುದು ಸರಳವಲ್ಲ. ಏನೋ ಆಗಿಬಿಡುತ್ತದೆ ಎಂಬುದು ಭ್ರಮೆ ಎಂದು ಹೇಳಿದ್ದಾರೆ.

ಪಾಕ್​ಗೆ ಸೇನಾ ಮುಖ್ಯಸ್ಥರ ಎಚ್ಚರಿಕೆ

ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು, ಭಾರತ ಎಲ್ಲ ಪರಿಸ್ಥಿತಿಯನ್ನು ಎದುರಿಸುವುದಕ್ಕೂ ಸಿದ್ಧವಾಗಿದೆ ಎಂದಿದ್ದಾರೆ. ಹಲವು ಸಂದರ್ಭಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯ. ಭಾರತವೂ ಅದೇ ರೀತಿ ನಡೆದುಕೊಂಡಿದೆ. ಆದರೆ ಪಾಕಿಸ್ತಾನ ಇದನ್ನು ವಿಕೋಪಕ್ಕೆ ತಿರುಗಿಸುತ್ತಿದ್ದು, ಗಡಿಭಾಗದಲ್ಲಿ ಯುದ್ಧ ಸಾಮಗ್ರಿಗಳನ್ನು ನಿಯೋಜಿಸುತ್ತಿದೆ. ಆದರೆ, ಇದಕ್ಕೆ ಬೆದರುವುದಿಲ್ಲ. ಎಲ್ಲ ಸಂದರ್ಭಗಳಲ್ಲೂ ಸೂಕ್ತ ತಿರುಗೇಟು ನೀಡುವುದಕ್ಕೆ ಭಾರತದ ಸೇನೆ ಸಶಕ್ತವಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *