ಶ್ರೀನಗರ: ಇಬ್ಬರು ಭಯೋತ್ಪಾದಕರೊಂದಿಗೆ ಪ್ರಯಾಣಿಸುತ್ತಿದ್ದಾಗ ಅವರ ಜತೆಗಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಯನ್ನೂ “ಭಯೋತ್ಪಾದಕ” ಎಂದು ಪರಿಗಣಿಸಲಾಗುವುದು ಎಂದು ರಾಜ್ಯ ಕಾನೂನು ಜಾರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಶ್ರೀನಗರ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ ದವೀಂದರ್ ಸಿಂಗ್ ಅವರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ನವೀದ್ ಬಾಬು ಜತೆ ಪ್ರಯಾಣಿಸುವಾಗ ಕುಲ್ಗಂ ಜಿಲ್ಲೆಯ ವಾನ್ಪೋದಲ್ಲಿ ಶನಿವಾರ ವಶಕ್ಕೆ ಪಡೆಯಲಾಗಿತ್ತು.
ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ 15 ವಿದೇಶಿ ರಾಷ್ಟ್ರಗಳ ದೂತರ ರಕ್ಷಣೆಗಿದ್ದ ಹಾಗೂ ರಾಷ್ಟ್ರಪತಿ ಪದಕ ಪಡೆದಂತಹ ಅಧಿಕಾರಿ ದವೀಂದರ್ ಸಿಂಗ್ ಏಕೆ ಸಶಸ್ತ್ರ ಭಯೋತ್ಪಾದಕರೊಂದಿಗೆ ಪ್ರಯಾಣಿಸುತ್ತಿದ್ದರು ಎಂಬ ಪ್ರಶ್ನೆ ಪೊಲೀಸ್ ವಲಯದಲ್ಲಿ ಕಾಡುತ್ತಿದೆ.
“ಶೋಪಿಯಾನ್‌ನಲ್ಲಿ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯನ್ನು ಹಿಜ್ಬುಲ್ ಮುಜಾಹಿದ್ದೀನ್ ಇಬ್ಬರು ಉಗ್ರರೊಂದಿಗೆ ಬಂಧಿಸಲಾಗಿತ್ತು. ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದರು” ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ತಿಳಿಸಿದ್ದಾರೆ.
“ದವೀಂದರ್ ಸಿಂಗ್ ಹಲವಾರು ಉಗ್ರ ವಿರೋಧಿ ಕಾರ್ಯಾಚರಣೆಗಳನ್ನು ಕೆಲಸ ಮಾಡಿದ್ದಾರೆ. ಆದರೆ ಅವರನ್ನು ಬಂಧಿಸಿದ ಸಂದರ್ಭವೇ ಹಾಗಿದೆ. ಅದಕ್ಕಾಗಿಯೇ ಅವರನ್ನು ಉಗ್ರರಿಗೆ ಸಮಾನವಾಗಿ ಪರಿಗಣಿಸಲಾಗುತ್ತಿದೆ” ಎಂದ ವಿಜಯಕುಮಾರ್, ಈ ಬಗ್ಗೆ ವಿಚಾರಣೆ ಮತ್ತು ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಬಂಧಿತ ಭಯೋತ್ಪಾದಕರ ಮಾಹಿತಿಯ ಆಧಾರದ ಮೇಲೆ ಇಂದು ಅನೇಕ ದಾಳಿಗಳನ್ನು ನಡೆಸಲಾಗಿದ್ದು, ಶೋಪಿಯಾನ್ ಜಿಲ್ಲೆಯಲ್ಲಿ ಅಡಗುತಾಣ ಪತ್ತೆಯಾಗಿದೆ. ಅಲ್ಲದೆ ದವೀಂದರ್ ಸಿಂಗ್ ಅವರ ಮನೆ ಸೇರಿ ಸುತ್ತಲಿನ ಕೆಲ ಸ್ಥಳಗಳಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಅಧಿಕಾರಿ ಮತ್ತು ಇಬ್ಬರು ಭಯೋತ್ಪಾದಕರು ದೆಹಲಿಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)