ಪಾಕ್​ ಆಕ್ರಮಿತ ಕಾಶ್ಮೀರ ವಶಕ್ಕೆ ತೆಗೆದುಕೊಳ್ಳುವುದು ನಮ್ಮ ಮುಂದಿನ ಗುರಿ: ಕೇಂದ್ರ ಸಚಿವ ಜಿತೇಂದ್ರ ಸಿಂಗ್​

ನವದೆಹಲಿ: ಪಾಕ್​ ಆಕ್ರಮಿತ ಕಾಶ್ಮೀರವನ್ನು ಮರುವಶಪಡಿಸಿಕೊಂಡು ಭಾರತದ ಭಾಗವಾಗಿಸುವುದು ಕೇಂದ್ರ ಸರ್ಕಾರದ ಮುಂದಿನ ಗುರಿ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ತಿಳಿಸಿದ್ದಾರೆ.

ಪಾಕ್​ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಸೇರಿಸಬೇಕೆನ್ನುವುದು ಕೇವಲ ನಮ್ಮ ಪಕ್ಷದ ಬೇಡಿಕೆಯಲ್ಲ. ಈ ಪ್ರಸ್ತಾವನೆವನ್ನು 1994ರಲ್ಲಿ ಪ್ರಧಾನ ಮಂತ್ರಿ ನರಸಿಂಹ ರಾವ್​ ನೇತೃತ್ವದ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿತ್ತು. ಇದಕ್ಕೆ ಸರ್ವಾನುಮತದಿಂದ ಅಂಗೀಕಾರ ದೊರೆತಿತ್ತು ಎಂದು ಜಿತೇಂದ್ರ ಸಿಂಗ್​ ತಿಳಿಸಿದ್ದಾರೆ.

ಆ. 5 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಮೂಲಕ ಕಣಿವೆ ರಾಜ್ಯವನ್ನು ಭಾರತದ ಅವಿಭಾಜ್ಯ ಅಂಗವಾಗಿ ಸೇರಿಸಲಾಗಿತ್ತು. ಆ ನಂತರ ಕೇಂದ್ರ ಸರ್ಕಾರ ಪಾಕ್​ ಆಕ್ರಮಿತ ಕಾಶ್ಮೀರವನ್ನು ಪುನಃ ವಶಕ್ಕೆ ಪಡೆಯುವ ಕುರಿತು ಚಿಂತಿಸುತ್ತಿರುವ ಕುರುಹನ್ನು ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ನೀಡಿದ್ದರು. ಇದೇ ವಿಷಯವನ್ನು ಈಗ ಜಿತೇಂದ್ರ ಸಿಂಗ್​ ಅವರೂ ಪುನರುಚ್ಚರಿಸಿದ್ದಾರೆ.

ಇತ್ತೀಚೆಗೆ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ್ದ ರಾಜನಾಥ್​ ಸಿಂಗ್​ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಾದರೆ ಅದು ಪಾಕ್​ ಆಕ್ರಮಿತ ಕಾಶ್ಮೀರದ ಕುರಿತು ಮಾತ್ರ ಎಂದು ತಿಳಿಸಿದ್ದರು. ಜತೆಗೆ ಲಡಾಖ್​ನ ಲೇಹ್​ನಲ್ಲಿ ನಡೆದಿದ್ದ ಸಮಾರಂಭದಲ್ಲಿ ಪಾಕಿಸ್ತಾನ ಪಿಒಕೆಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ಪೂರಕವಾಗಿ ಪಾಕ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನ ಪೀಪಲ್ಸ್​ ಪಾರ್ಟಿಯ ನಾಯಕ ಬಿಲಾವಲ್​ ಭುಟ್ಟೋ ‘ಈ ಮೊದಲು ಕಾಶ್ಮೀರದ ಕುರಿತು ಪಾಕಿಸ್ತಾನದ ನೀತಿ ಏನಿತ್ತು? ಶ್ರೀನಗರವನ್ನು ವಶಕ್ಕೆ ಪಡೆದು ಕಾಶ್ಮೀರವನ್ನು ಪಾಕಿಸ್ತಾನದೊಂದಿಗೆ ವಿಲೀನ ಮಾಡಿಕೊಳ್ಳುವುದು ನಮ್ಮ ನೀತಿ ಆಗಿತ್ತು. ಆದರೆ, ಇಮ್ರಾನ್​ ಖಾನ್​ ನೇತೃತ್ವದ ಸರ್ಕಾರದಲ್ಲಿ ನಾವು ಮುಜಾಫರನಗರ (ಪಾಕ್​ ಆಕ್ರಮಿತ ಕಾಶ್ಮೀರದ ರಾಜಧಾನಿ)ವನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂದು ಚಿಂತಿಸುವ ಪರಿಸ್ಥಿತಿ ಬಂದೊದಗಿದೆ ಎಂದು ವಾಗ್ದಾಳಿ ನಡೆಸಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *