ಜಿಯೋ ಬಳಕೆದಾರರಿಗೆ ಬ್ಯಾಡ್​ ನ್ಯೂಸ್​; ಇನ್ಮುಂದೆ ಬೇರೆ ನೆಟ್ವರ್ಕ್​ಗೆ ಕರೆ ಮಾಡಿದರೆ ನಿಮಿಷಕ್ಕೆ ಇಷ್ಟು ಹಣ ಕಡಿತಗೊಳ್ಳತ್ತೆ…

ಮುಂಬೈ: ರಿಲಾಯನ್ಸ್​ ಜಿಯೋ ತನ್ನ ಗ್ರಾಹಕರಿಗೆ ಸಣ್ಣದೊಂದು ಶಾಕ್​ ನೀಡಿದೆ. ಇದುವರೆಗೂ ಬೇರಾವುದೇ ನೆಟ್ವರ್ಕ್​ಗೆ ಉಚಿತವಾಗಿ ಕರೆ ಮಾಡಲು ಅವಕಾಶ ಕಲ್ಪಿಸಿದ್ದ ಜಿಯೋ, ಅನ್ಯ ನೆಟ್ವರ್ಕ್​ ಕರೆಗಳಿಗೆ ಮುಂದಿನ ದಿನಗಳಲ್ಲಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸುವುದಾಗಿ ಘೋಷಿಸಿದೆ.

ಅಂದರೆ ಏರ್​ಟೆಲ್​, ವೋಡಾಫೋನ್​-ಐಡಿಯಾ ಸೇರಿದಂತೆ ಇತರೆ ಯಾವುದೇ ನೆಟ್ವರ್ಕ್​ಗೆ ಜಿಯೋ ಬಳಕೆದಾರರು ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಕಡಿತಗೊಳ್ಳುತ್ತದೆ. ಬೇರೆ ನೆಟ್ವರ್ಕ್​ನ ಸಂಖ್ಯೆ ರಿಂಗ್ ಆಗಲು ಆರಂಭವಾದಾಗಿಂದ ಶುಲ್ಕ ಅನ್ವಯವಾಗುತ್ತದೆ.​ ಇಂದಿನಿಂದಲೇ ಜಿಯೋ ಗ್ರಾಹಕರು ಈ ಹೊಸ ನಿಯಮಕ್ಕೆ ಒಳಪಡಲಿದ್ದಾರೆ.

ಆದರೆ ಜಿಯೋದಿಂದ ಜಿಯೋ ನಂಬರ್​ಗೆ ಅಥವಾ ಜಿಯೋ ಲ್ಯಾಂಡ್​ಲೈನ್​ಗೆ ಕರೆ ಉಚಿತವಾಗಿದ್ದು, ಯಾವುದೇ ಶುಲ್ಕ ಅನ್ವಯಿಸುವುದಿಲ್ಲ. ಹಾಗೇಯೇ ಯಾವುದೇ ನೆಟ್ವರ್ಕ್​ನಿಂದ ಬರುವ ಇನ್​ಕಮಿಂಗ್​ ಕರೆಗಳಿಗೆ, ವಾಟ್ಸ್​ಆ್ಯಪ್​ ಕರೆಗಳಿಗೆ ಕೂಡ ಹಣ ತೆರಬೇಕಿಲ್ಲ.

ಜಿಯೋದಿಂದ ಬೇರೆ ನೆಟ್ವರ್ಕ್​ಗಳಿಗೆ ಉಚಿತವಾಗಿ ಕರೆ ಮಾಡಲು ಅವಕಾಶ ಕೊಟ್ಟಾಗ ಜಿಯೋ ಸಂಸ್ಥೆಯೇ ಸಂಬಂಧಪಟ್ಟ ನೆಟ್ವರ್ಕ್​ಗಳ ಸಂಸ್ಥೆಗೆ ಇಂತಿಷ್ಟು ಎಂದು ಹಣ ಪಾವತಿಸಬೇಕಿತ್ತು. ಆದರೆ ಉಳಿದ ಟೆಲಿಕಾಂ ಆಪರೇಟರ್​ಗಳು ಮೊದಲಿನಿಂದಲೂ ಐಯುಸಿ ದರ ( ಇಂಟರ್​ ಕನೆಕ್ಟ್​ ಯೂಸೇಜ್​ ಚಾರ್ಜ್​: ಬೇರೆ ನೆಟ್ವರ್ಕ್​ಗಳಿಗೆ ಮಾಡುವ ಕರೆಗಳಿಗೆ ಗ್ರಾಹಕರೇ ಪಾವತಿಸುವ ಹಣ) ವನ್ನು ತನ್ನ ಗ್ರಾಹಕರಿಂದಲೇ ಪಡೆಯುತ್ತಿವೆ. ಹಾಗಾಗಿ ಜಿಯೋ ಕೂಡ ಅದೇ ನಿಯಮ ಪಾಲಿಸಲು ಮುಂದಾಗಿದೆ.

ಜಿಯೋ 35 ಕೋಟಿ ಗ್ರಾಹಕರನ್ನು ಹೊಂದಿದ್ದು, ಐಯುಸಿ ನಿಯಮ ರದ್ದುಗೊಳಿಸಲು ಟ್ರಾಯ್ ಚಿಂತನೆ ನಡೆಸಿದೆ. ಐಯುಸಿಯನ್ನು ಟ್ರಾಯ್ ರದ್ದುಗೊಳಿಸಿದ ತಕ್ಷಣದಿಂದ ಈ ನಿಯಮ ರದ್ದಾಗುತ್ತದೆ ಎಂದು ಜಿಯೋ ಹೇಳಿದೆ.

ಜಿಯೋದ ಹೊಸ ಐಯುಸಿ ಪ್ಲಾನ್​ ಹೀಗಿದೆ…

ಬೇರೆ ನೆಟ್ವರ್ಕ್​ಗಳಿಗೆ ಕರೆ ಮಾಡಿದರೆ ಶುಲ್ಕ ವಿಧಿಸುವುದಾಗಿ ಹೇಳಿಕೊಂಡಿರುವ ಜಿಯೋ ನಾಲ್ಕು ಹೊಸ ಐಯುಸಿ ಪ್ಲಾನ್​ಗಳನ್ನು ಪ್ರಸ್ತುತಪಡಿಸಿದೆ. ಅದರ ಅನ್ವಯ ಡಾಟಾದ ಹೆಚ್ಚುವರಿ ಅನುಕೂಲವನ್ನೂ ಮಾಡಿಕೊಟ್ಟಿದೆ.

10 ರೂಪಾಯಿ ರಿಚಾರ್ಜ್​ ಮಾಡಿಸಿದರೆ ಉಚಿತವಾಗಿ ಹೆಚ್ಚುವರಿ 1 ಜಿಬಿ ಡಾಟಾ ನೀಡುವ ಜತೆ ಬೇರೆ ನೆಟ್ವರ್ಕ್​ಗಳಿಗೆ ಕರೆ ಮಾಡಿ 124 ನಿಮಿಷ ಮಾತನಾಡಬಹುದು.

20 ರೂ.ರಿಚಾರ್ಜ್​ಗೆ ಉಚಿತ 2 ಜಿಬಿ ಹೆಚ್ಚುವರಿ ಡಾಟಾ- ಐಯುಸಿ 249 ನಿಮಿಷ, 50 ರೂ.ರಿಚಾರ್ಜ್​ಗೆ 5 ಜಿಬಿ ಡಾಟಾ ಹಾಗೂ ಇತರೆ ನೆಟ್ವರ್ಕ್​ಗಳಿಗೆ ಕರೆ ಮಾಡಲು ನೀಡುವ ಉಚಿತ ಅವಧಿ 656 ನಿಮಿಷ ಮತ್ತು 100 ರೂ.ರಿಚಾರ್ಜ್​ಗೆ 10 ಜಿಬಿ ಡಾಟಾ ಮತ್ತು 1362 ಐಯುಸಿ ನಿಮಿಷವನ್ನು ನೀಡಲಿದೆ.

Leave a Reply

Your email address will not be published. Required fields are marked *