ತಗ್ಗಿದ ವರುಣನ ಆರ್ಭಟ

ಕಾರವಾರ  ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಬುಧವಾರ ಬೆಳಗ್ಗೆಯಿಂದ ಮೋಡದ ವಾತಾವರಣವಿತ್ತು. ಮಳೆ ಸುರಿಯದೇ ಸ್ವಾತಂತ್ರ್ಯೊತ್ಸವಕ್ಕೆ ಅನುಕೂಲವಾಯಿತು. ಸಂಜೆಯ ಹೊತ್ತಿಗೆ ಮತ್ತೆ ಮಳೆ ಪ್ರಾರಂಭವಾಗಿದೆ.

ಗಾಳಿ ಮುಂದುವರಿದಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ.  ಶರಾವತಿ, ಗಂಗಾವಳಿ, ಅಘನಾಶಿನಿ ನದಿಗಳು ಉಕ್ಕಿ ಹರಿಯುತ್ತಿವೆ. ಮಂಗಳವಾರ ಪ್ರವಾಹ ಪರಿಸ್ಥಿತಿ ಉಂಟಾಗಿ ಗದ್ದೆ ಹಾಗೂ ಮನೆಗಳಿಗೆ ತುಂಬಿದ ನೀರು ಬುಧವಾರ ಕೊಂಚ ಇಳಿಮುಖವಾಗಿದೆ. ಬೆಳೆ ಹಾನಿ, ಮನೆಗಳಿಗೆ ಆದ ತೊಂದರೆ ಗೋಚರಿಸುತ್ತಿದೆ. ಅಂಕೋಲಾ ಮಾಸ್ತಿಕಟ್ಟಾದಲ್ಲಿ ಕುಮಾರ ಗಾಂವಕರ್, ಮೊಗಟಾ ಬೆಳಲೆಯ ಶಾಂತಾ ಹೊಸಬಣ್ಣ ನಾಯ್ಕ ಅವರ ಮನೆಗಳ ಮೇಲೆ ಮರ ಬಿದ್ದಿದೆ. ಹಾರವಾಡದ ಗೋಪಿ ಬೀರಾ ಗೌಡ ಅವರ ಮನೆಯ ಗೋಡೆ ಕುಸಿದಿದೆ. ದಾಂಡೇಲಿಯ ಗಾಂಧಿ ನಗರದ ಸದಾಬಿ ಮುದ್ಗುಂ ಸಾಬ ಅವರ ಮನೆಯಲ್ಲಿ ಭಾಡಿಗೆಗೆ ಇದ್ದ ಮೂವರ ಮೇಲೆ ಗೋಡೆಯ ಇಟ್ಟಂಗಿ ಕುಸಿದು ಸಣ್ಣಪುಟ್ಟ ಗಾಯಗಳಾಗಿವೆ.

ಮಳೆ ಪ್ರಮಾಣ: ಅಂಕೋಲಾದಲ್ಲಿ 9, ಭಟ್ಕಳದಲ್ಲಿ 22, ಹಳಿಯಾಳದಲ್ಲಿ 2.4, ಹೊನ್ನಾವರದಲ್ಲಿ 4.9, ಕಾರವಾರದಲ್ಲಿ 8.6, ಕುಮಟಾದಲ್ಲಿ 26.6, ಮುಂಡಗೋಡಿನಲ್ಲಿ 6.8, ಸಿದ್ದಾಪುರದಲ್ಲಿ 24.6, ಶಿರಸಿಯಲ್ಲಿ 21.5, ಜೊಯಿಡಾದಲ್ಲಿ 18, ಯಲ್ಲಾಪುರದಲ್ಲಿ 17 ಮಿಮೀ ಮಳೆಯಾಗಿದೆ.

ಮೀನುಗಾರರಿಗೆ ಮುನ್ನೆಚ್ಚರಿಕೆ: ಅರಬ್ಬಿ ಸಮುದ್ರದಲ್ಲಿ ಆ.16ರಂದು ಗಂಟೆಗೆ 55 ರಿಂದ 60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. 3.5 ರಿಂದ 4.6 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಇದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ನಿರಂತರ ಮಳೆಯಿಂದ ಭತ್ತದ ನಾಟಿಗೆ ಹಿನ್ನಡೆ: ಪ್ರಸಕ್ತ ವರ್ಷ ಮಳೆ ಉತ್ತಮವಾಗಿದ್ದರೂ ಅಡಕೆ ಬೆಳೆಗಾರರಿಗೆ ಮಾರಕವಾಗಿದೆ. ಮಳೆಗಾಲದ ಆರಂಭದದಿಂದ ಇಂದಿನವರೆಗೂ ಹಸಿ ಅಡಕೆ ಉದುರುತ್ತಿವೆ. ಅಲ್ಲದೆ, ಗಾಳಿಯ ರಭಸಕ್ಕೆ ಒಂದಕ್ಕೊಂದು ಮರ ತಾಗಿ ಅಡಕೆ ಮಿಳ್ಳೆ ಬಿದ್ದು ರಾಶಿಯಾಗಿದೆ. ಜತೆಗೆ ಅಡಕೆ ಮರಗಳು ಧರೆಗುರುಳಿವೆ. ಅಡಕೆಗೆ ಕೊಳೆ ರೋಗ ಹರಡಿರುವುದರಿಂದ ಬೆಳೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಚಿಂತೆ ಬೆಳೆಗಾರರನ್ನು ಕಾಡುತ್ತಿದೆ.

ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಭತ್ತದ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ನಾಟಿ ಮಾಡಿದ ಹಾಗೂ ನಾಟಿಗೆ ಸಿದ್ದಪಡಿಸಿದ ಭತ್ತದ ಗದ್ದೆಗಳೆಲ್ಲ ಜಲಾವೃತಗೊಂಡಿವೆ. ಗದ್ದೆಯಲ್ಲಿನ ನೀರು ಕಡಿಮೆಯಾಗಲು ಮೂರ್ನಾಲ್ಕು ದಿನಗಳು ಬೇಕು ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.

ಅಸ್ಥವ್ಯಸ್ತಗೊಂಡ ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಹೆಸ್ಕಾಂ ಸಿಬ್ಬಂದಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಮಳೆ- ಗಾಳಿ ಅಡ್ಡಿಯಾಗಿದೆ. ತಾಲೂಕಿನ ಮಾನಿಹೊಳೆ, ಬಿಳಗಿ ಹೊಳೆ ತುಂಬಿ ಹರಿಯುತ್ತಿವೆ. ತಾಲೂಕಿನಲ್ಲಿ ಈವರೆಗೆ ಒಟ್ಟು 2473.6 ಮಿ.ಮೀ. ಮಳೆ ಬಿದ್ದು ದಾಖಲಾಗಿದೆ.

ನಿಟ್ಟುಸಿರು ಬಿಟ್ಟ ನದಿಯಂಚಿನ ಜನ: ಲಿಂಗನಮಕ್ಕಿ ಜಲಾಶಯದಿಂದ ಮಂಗಳವಾರ ಹರಿಬಿಡಲಾದ ನೀರಿನ ಪ್ರಮಾಣದಲ್ಲಿ ಬುಧವಾರ ಇಳಿಕೆ ಕಂಡು ಬಂದಿದ್ದು, ನೆರೆಯಿಂದ ಕಂಗಾಲಾಗಿದ್ದ ತಾಲೂಕಿನ ಗೇರುಸೊಪ್ಪಾ ಹಾಗೂ ಶರಾವತಿ ನದಿಯಂಚಿನ ಎಡ ಮತ್ತು ಬಲ ದಂಡೆಯಲ್ಲಿ ವಾಸಿಸುವ ಕುಟುಂಬಗಳ ಜನಜೀವನ ಯಥಾಸ್ಥಿತಿಗೆ ಬಂದಿದೆ.

ತಾಲೂಕಿನಲ್ಲಿ 4.9 ಮಿ.ಮೀ ಮಳೆಯಾಗಿದೆ. ಸಿದ್ದಾಪುರ, ಗೇರುಸೊಪ್ಪಾ ಘಟ್ಟ ಪ್ರದೇಶಗಳಲ್ಲಿ ಅತಿ ಕಡಿಮೆ ಮಳೆಯಾಗಿರುವ ಬಗೆಗೆ ವರದಿಯಗಿದೆ. ಹೀಗಾಗಿ ಲಿಂಗನಮಕ್ಕಿ ಆಣೆಕಟ್ಟಿನಲ್ಲಿ ಮತ್ತೆ ನೀರಿನ ಸಂಗ್ರಹಕ್ಕೆ ಅವಕಾಶ ಸಿಕ್ಕಿದೆ. ಮಂಗಳವಾರ ಹರಿಬಿಡಲಾದ ನೀರಿನ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದ್ದು, ಶರಾವತಿ ನದಿ ಪಾತ್ರದಲ್ಲಿ ನೀರಿನ ಸಾಂದ್ರತೆ ಕಡಿಮೆಯಾಗಿದೆ. ಕೃಷಿ ಜಮೀನು, ಮನೆಗಳು ಜಲಾವೃತಗೊಂಡು ಜನ ಸಂಕಷ್ಟ ಎದುರಿಸುತ್ತಿದ್ದರು. ಕೆಲ ಭಾಗಗಳಲ್ಲಿ ಗಂಜಿ ಕೇಂದ್ರ ತೆರೆದು ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಬುಧವಾರ ಅತ್ಯಲ್ಪ ಮಳೆಯಾಗಿದ್ದರಿಂದ ಹೊಲಗಳಲ್ಲಿ ಜಮಾವಣೆಗೊಂಡ ನೀರಿನ ಪ್ರಮಾಣದಲ್ಲಿ ಕೂಡ ಇಳಿಕೆಯಾಗಿದೆ. ಹಾನಿ: ಮಂಗಳವಾರ ತಡರಾತ್ರಿ ಸುರಿದ ಮಳೆಗೆ ತಾಲೂಕಿನ ವಿವಿಧ ಬಾಗಗಳಲ್ಲಿ ಹಾನಿಯಾಗಿದೆ. ಗುಂಡಬಾಳದ ಮರ್ತ ಗಣಪತಿ ಆಚಾರಿ ಅವರ ಮನೆ ಮೇಲೆ ತೆಂಗು ಮತ್ತು ಅಡಕೆ ಮರ ಬಿದ್ದು, 15 ಸಾವಿರ ರೂ. ಹಾನಿಯಾಗಿದೆ. ಕಡ್ಲೆಯಲ್ಲಿ ಈರು ಗೋಯಿದು ಗೌಡ ಅವರ ಮನೆ ಕುಸಿದು 18 ಸಾವಿರ ರೂ. ಹಾನಿಯಾಗಿದೆ. ಕಡತೋಕಾದ ಗಣಪತಿ ಕೃಷ್ಣ ಸಿದ್ಧನ ಅವರ ಮನೆ ಮೇಲೆ ಮರ ಬಿದ್ದು 25 ಸಾವಿರ ರೂ. ಹಾನಿಯಾಗಿದೆ.

ಸೂಪಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಚಿವ ದೇಶಪಾಂಡೆ:  ಕಾಳಿ ಜಲವಿದ್ಯುತ್ ಯೋಜನೆಯ ಪ್ರಮುಖ ಜಲಾಶಯ ಸೂಪಾ ತುಂಬುತ್ತಿದೆ. ಸಂಪೂರ್ಣ ಭರ್ತಿಗೂ ಮುಂಚೆ ಸಚಿವ ಆರ್.ವಿ.ದೇಶಪಾಂಡೆ ಬುಧವಾರ ಬಾಗಿನ ಅರ್ಪಿಸಿದ್ದಾರೆ.

564 ಮೀಟರ್ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ ಹೊಂದಿದ ಜಲಾಶಯದಲ್ಲಿ 557 ಮೀಟರ್ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ ಇನ್ನೂ 7 ಮೀಟರ್ ಬಾಕಿ ಇದೆ. ಮಳೆ ಮುಂದುವರಿದಲ್ಲಿ ಮಾತ್ರ ಸಂಪೂರ್ಣ ತುಂಬುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ ಜಲಾಶಯದ ಮೂರು ಗೇಟ್​ಗಳನ್ನು 10 ನಿಮಿಷಗಳ ಕಾಲ ಪ್ರಾಯೋಗಿಕವಾಗಿ ತೆರೆದು ಪರಿಶೀಲಿಸಲಾಯಿತು. ಕೆಲವೇ ನಿಮಿಷ ನೀರು ಹೊರ ಬಿಟ್ಟು ಮತ್ತೆ ಬಂದ್ ಮಾಡಲಾಯಿತು.

ಸದ್ಯ ಸಂಗ್ರಹವಾಗಿರುವ ನೀರಿನಲ್ಲಿ 3100 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಬಹುದು. ದಿನಕ್ಕೆ 10 ಮಿಲಿಯನ್ ಯುನಿಟ್​ನಂತೆ 300 ದಿನ ನಿರಂತರ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. 1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದರು. 1987ರಲ್ಲಿ ಜಲಾಶಯ ಲೋಕಾರ್ಪಣೆಗೊಂಡಿತ್ತು. ಇದುವರೆಗೆ ಜಲಾಶಯ ನಾಲ್ಕು ಬಾರಿ ಮಾತ್ರ ಭರ್ತಿಯಾಗಿದೆ. ಎರಡು ಬಾರಿ ಮಾತ್ರ ಜಲಾಶಯದಿಂದ ನೀರು ಹೊರ ಬಿಡಲಾಗಿದೆ.