ಸಂಚಾರ ನಿಯಮ ಉಲ್ಲಂಘಿಸಿ ದಂಡ ತೆತ್ತ ಸಾರಿಗೆ ಸಚಿವ! ತಾವೇ ಉದ್ಘಾಟಿಸಿದ್ದ ವ್ಯವಸ್ಥೆ ಇವರಿಗೆ ನೀಡಿತ್ತು ನೋಟಿಸ್​!

ರಾಂಚಿ: ಜಾರ್ಖಂಡ್​ನಲ್ಲಿ ಹೆಚ್ಚಿನ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದೆ. ಇದನ್ನು ತಡೆಗಟ್ಟಲು ಒಂದು ಸ್ವಯಂಚಾಲಿತ ವ್ಯವಸ್ಥೆ ತರುವ ಅವಶ್ಯಕತೆ ಇದೆ ಎಂಬ ಅಧಿಕಾರಿಗಳ ಸಲಹೆ ಮೇರೆಗೆ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರು/ಚಾಲಕರಿಗೆ ಸ್ವಯಂಚಾಲಿತವಾಗಿ ನೋಟಿಸ್​ ರವಾನಿಸಿ, ದಂಡ ವಸೂಲಿ ಮಾಡುವ ವ್ಯವಸ್ಥೆಯನ್ನು ಉದ್ಘಾಟಿಸಿದ್ದರು ಆ ಸಾರಿಗೆ ಸಚಿವರು. ಈಗ ಆ ವ್ಯವಸ್ಥೆಯೇ ತಮಗೆ ನೀಡಿದ ನೋಟಿಸ್​ ಅನ್ನು ಆಧರಿಸಿ 100 ರೂ. ದಂಡ ತೆತ್ತು ಎಲ್ಲರಿಗೂ ಮಾದರಿಯಾಗಿದ್ದಾರೆ.

ಅವರೇ ಜಾರ್ಖಂಡ್​ನ ಸಾರಿಗೆ ಸಚಿವ ಸಿ.ಪಿ. ಸಿಂಗ್​. ಜೂ.23ರಂದು ಇವರು ಟ್ರಾಫಿಕ್​ ಸಿಗ್ನಲ್​ ಉಲ್ಲಂಘಿಸಿದ್ದರು. ಇದಕ್ಕಾಗಿ ಅವರಿಗೆ ನೋಟಿಸ್​ ಜಾರಿಯಾಗಿ ದಂಡ ಪಾವತಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಅದೇನಾಯಿತು ಎಂದರೆ, ಜೂ.23ರ ಭಾನುವಾರ ಯಾವುದೋ ಕಾರ್ಯಕ್ರಮಕ್ಕೆ ತೆರಳುವ ತರಾತುರಿಯಲ್ಲಿದ್ದರು ಸಿ.ಪಿ ಸಿಂಗ್​. ಜತೆಗೆ ಟ್ರಾಫಿಕ್​ ಅಷ್ಟಾಗಿ ಇರಲಿಲ್ಲ. ಹಾಗಾಗಿ ರಾಂಚಿಯ ಸರ್ಜನ ಚೌಕ್​ ಎಂಬಲ್ಲಿ ಹೋಗುವಾಗ ಸಿಗ್ನಲ್​ ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ಗಮನಿಸಿರಲಿಲ್ಲ. ಹಾಗಾಗಿ ಸಿಗ್ನಲ್​ ಜಂಪ್​ ಮಾಡಿದ ಸಾರಿಗೆ ಸಚಿವರು ಕಾರ್ಯಕ್ರಮಕ್ಕೆ ತೆರಳಿದ್ದರು.

ಆ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸ್​ ಗಮನಕ್ಕೆ ಇದು ಬಂದಿತ್ತು. ಆದರೆ, ಸಚಿವರು ಎಂಬ ಕಾರಣಕ್ಕೆ ಅವರು ಸುಮ್ಮನಾಗಿದ್ದರು. ಹಾಗೆಂದು ಟ್ರಾಫಿಕ್​ ಸಿಗ್ನಲ್​ ಉಲ್ಲಂಘಿಸುವವರನ್ನು ಗಮನಿಸಿ ಸ್ವಯಂಚಾಲಿತವಾಗಿ ನೋಟಿಸ್​ ಜಾರಿ ಮಾಡುವ ವ್ಯವಸ್ಥೆಗೆ ಸುಮ್ಮನಿರಲಿಲ್ಲ. ನೀನು ಯಾರಾದರೆ ನನಗೇನು, ಮಾಡಿದ ತಪ್ಪಿಗೆ ದಂಡ ತೆರು ಎಂದು ಹೇಳಿ ಸಾರಿಗೆ ಸಚಿವರ ವಿಳಾಸಕ್ಕೆ ನೋಟಿಸ್​ ರವಾನಿಸಿತ್ತು. ಅದನ್ನು ನೋಡಿದ ಸಾರಿಗೆ ಸಚಿವರು ದಂಡ ಪಾವತಿಸಿ, ಎಲ್ಲರಿಗೂ ಮಾದರಿಯಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಪಿ. ಸಿಂಗ್​, ನಾನು ಶಾಸಕನಾಗಿದ್ದಾಗ ಸಾಕಷ್ಟು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದೇನೆ. ಆಗಲೂ ಕೂಡ ದಂಡವನ್ನು ಪಾವತಿಸಿದ್ದೇನೆ. ಈಗ ಸಚಿವನಾದ ಬಳಿಕವೂ ಮಾಡಿದ ತಪ್ಪಿಗೆ ಜುಲ್ಮಾನೆ ಪಾವತಿಸಿದ್ದೇನೆ. ಅದರಲ್ಲಿ ಹೊಸತೇನೂ ಇಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *