ಸೋದರಳಿಯನ ಜತೆಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಮಹಿಳೆಯನ್ನು ನಗ್ನ ಮಾಡಿದ ಪಂಚಾಯಿತಿ, ಮುಂದೇನಾಯ್ತು?

ರಾಂಚಿ: ಮಹಿಳೆಯೊಬ್ಬಳು ತನ್ನ ಸೋದರಳಿಯನ ಜತೆಗೆ ಅನೈತಿಕ ಸಂಬಂಧ ಹೊಂದಿರುವ ಶಂಕೆ ಮೇರೆಗೆ ಆಕೆಯನ್ನು ನಗ್ನಗೊಳಿಸಿ ಮತ್ತು ತಲೆ ಕೂದಲು ಕತ್ತರಿಸಿರುವ ಘಟನೆ ಜಾರ್ಖಂಡ್‌ನ ಕೊಡೆರ್ಮಾದಲ್ಲಿ ನಡೆದಿದೆ.

ಮಹಿಳೆಯು ಚಾರಿತ್ರ್ಯಹೀನ ಮತ್ತು ಪತಿಯ ಅನುಪಸ್ಥಿತಿಯಲ್ಲಿ ತನ್ನ ಸೋದರಳಿಯನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಡೆಂಗೋಡಿಹ್ ಗ್ರಾಮದ ಸ್ಥಳೀಯರು ಆರೋಪಿಸಿದ ನಂತರ ಕೋಡೆರ್ಮಾದಲ್ಲಿ ಪಂಚಾಯಿತಿ ನಿರ್ಧಾರದ ಮೇರೆಗೆ ಈ ಕೃತ್ಯ ಮಾಡಲಾಗಿದೆ.

ಈ ಕುರಿತು ಮಹಿಳೆಯು ಪತಿಯ ಅನುಪಸ್ಥಿತಿಯಲ್ಲಿ ತನ್ನ ಸೋದರಳಿಯ ಲಾಭ ಪಡೆದುಕೊಳ್ಳುತ್ತಿದ್ದಾನೆ ಎಂದು ಆರೋಪಿಸಿ ಆತನ ವಿರುದ್ಧ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆತನನ್ನು ಸಂದೀಪ್‌ ಸಾವ್‌ ಎಂದು ಗುರುತಿಸಲಾಗಿದೆ. 22 ವರ್ಷದ ಸೋದರಳಿಯ ತನ್ನೊಂದಿಗೆ ಸಂಬಂಧವನ್ನು ಮುಂದುವರಿಸುವಂತೆ ಬೆದರಿಕೆವೊಡ್ಡುತ್ತಿದ್ದಾನೆ ಎಂದು ದೂರಿದ್ದಾಳೆ.

ಈ ವಿಚಾರವು ಗ್ರಾಮಸ್ಥರ ಮುಂದೆ ಬಂದಾಗ ಉಲ್ಟಾ ಹೊಡೆದ ಆರೋಪಿ ಮಹಿಳೆಯನ್ನೇ ದೂರಿ ಆಕೆಯೇ ತನ್ನೊಂದಿಗೆ ಸಂಬಂಧ ಹೊಂದಲು ತನಗೆ ಆಮಿಷವೊಡ್ಡಿದಳು ಎಂದು ಆರೋಪಿಸಿದ್ದಾನೆ.

ಇದರಿಂದಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಮಹಿಳೆಯನ್ನು ಮನೆಯಿಂದ ಹೊರ ಕರೆದುತಂದು ಪಂಚಾಯಿತಿ ಎದುರಿಗೆ ನಿಲ್ಲಿಸಿದ್ದಾರೆ. ಬಳಿಕ ಪಂಚಾಯಿತಿಯು ಮಹಿಳೆಯನ್ನು ನಗ್ನಗೊಳಿಸುವಂತೆ ಆದೇಶಿಸಿದೆ.

ಸದ್ಯ 11 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯಾರನ್ನು ಬಂಧಿಸಿಲ್ಲ. ಆದರೆ ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *