ನೀರಿಗಾಗಿ ರಸ್ತೆಗಿಳಿದ ನೂರಾರು ರೈತರು

ಜೇವರ್ಗಿ: ತಾಲೂಕಿನ ಮಲ್ಲಾಬಾದ್ ಏತ ನೀರಾವರಿ ಅಡಿಯ ಕಾಲುವೆ ಹಾಗೂ ಜೆಬಿಸಿ, ಎಂಬಿಸಿ, ಐಬಿಸಿ ಕೆನಾಲ್ಗಳಿಗೂ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತಪರ ಸಂಘಟನೆಗಳಿಂದ ಬುಧವಾರ ಚಿಗರಳ್ಳಿ ಕ್ರಾಸ್ನಲ್ಲಿ ಬೀದರ್- ಶ್ರೀರಂಗಪಟ್ಟಣ ರಾಷ್ಟ್ರಿಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಲಾಯಿತು. ಬಿಜೆಪಿ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿತು.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹೇಳಿಕೊಳ್ಳುವಂತಹ ಮಳೆಯಾಗದಿರುವುದರಿಂದ ತಾಲೂಕಿನ ರೈತ ಸಮುದಾಯ ಮುಂಗಾರಿನ ಜತೆಗೆ ಹಿಂಗಾರು ಬೆಳೆಗಳು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ಅಭಾವದಿಂದ ಪ್ರಮುಖ ವಾಣಿಜ್ಯ ಬೆಳೆಗಳಾದ ತೊಗರಿ, ಹತ್ತಿ ಬೆಳವಣಿಗೆಯಲ್ಲಿ ಕುಂಠಿತಗೊಂಡಿದೆ. ಇದು ಇಡೀ ರೈತ ಸಮುದಾಯವನ್ನು ಕಂಗಾಲು ಮಾಡಿದೆ.

ಹೀಗಿರುವಾಗ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬಂತೆ ಕಳೆದೊಂದು ತಿಂಗಳಿಂದ ಬಹುತೇಕ ಕಾಲುವೆಗಳಿಗೆ ನೀರು ಹರಿದಿಲ್ಲ. ಇದು ಅನ್ನದಾತರನ್ನು ಇನ್ನಷ್ಟು ಕುಸಿಯುವಂತೆ ಮಾಡಿದೆ. ನೀರಿನ ಸಮಸ್ಯೆಯಿಂದ ಕೆರಳಿದ ರೈತಾಪಿ ವರ್ಗ ಬುಧುವಾರ ಭೀಮರಾಯನ ಗುಡಿಯಲ್ಲಿರುವ ಕೆಬಿಜೆಎನ್ಎಲ್ ಕಚೇರಿ ಮುಂದೆ ಹಾಗೂ ಚಿಗರಳ್ಳಿ ಕ್ರಾಸ್ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಮುಖ ರೈತ ಮುಖಂಡರು ಮಾತನಾಡಿ, ಕೂಡಲೇ ರೈತರ ಜಮೀನುಗಳಿಗೆ ಕಾಲುವೆ ನೀರು ಹರಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತಪರ ಸಂಘಟನೆಗಳ ಮುಖಂಡರು ಕರೆ ನೀಡಿದ ಪ್ರತಿಭಟನೆಗೆ ಬಿಜೆಪಿ ಸಾಥ್ ನೀಡಿದ್ದು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಚಿಗರಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ದ ಕಿಡಿಕಾರಿದರು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಶಾಸಕ ಡಾ.ಅಜಯಸಿಂಗ್, ತ್ವರಿತಗತಿಯಲ್ಲಿ ಕಾಲುವೆಗಳಿಗೆ ನೀರು ಹರಿಸುವಂತೆ ಈಗಾಗಲೇ ಕೆಬಿಜೆಎನ್ಎಲ್ ಅಧಿಕಾರಿಗಳೊಂದಿಗೆ ಚಚರ್ಿಸಿದ್ದೇನೆ. ಅದಾಗ್ಯೂ ಮತ್ತೇ ಭೀಮರಾಯನಗುಡಿಗೆ ತೆರಳಿ ಹಿರಿಯ ಅಧಿಕಾರಿಗಳೊಂದಿಗೆ ಚಚರ್ಿಸಿ ನೀರು ಬಿಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ ನಂತರ ರಸ್ತೆ ತಡೆ ಹಿಂಪಡೆಯಲಾಯಿತು.