ಅಪಾಯಕ್ಕೆ ವಿದ್ಯುತ್ ತಂತಿ ಆಹ್ವಾನ

ಯಾದಗಿರಿ: ಅಲ್ಲಿಪುರ ಗ್ರಾಮದಲ್ಲಿ ಅಳವಡಿಸಿರುವ ವಿದ್ಯುತ್ ತಂತಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಜೆಸ್ಕಾಂ ಅಧಿಕಾರಿಗಳು ಗಮನಹರಿಸುವಂತೆ ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ್ ಆಗ್ರಹಿಸಿದ್ದಾರೆ.

ದಕ್ಷ ಸೇವೆ ಸಲ್ಲಿಸಿದ ಜೆಸ್ಕಾಂ ಇಇ ರಾಘವೇಂದ್ರ ಅವರಿಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದಿಂದ ಪುರಸ್ಕಾರ ದೊರೆತ ಕಾರಣ ಸನ್ಮಾನಿಸಿ ಮನವಿಪತ್ರ ಸಲ್ಲಿಸಿದ ಅವರು, ಅಲ್ಲಿಪುರದಲ್ಲಿರುವ ವಿದ್ಯುತ್ ತಂತಿಗಳು ನೆಲದಿಂದ ಕೆಲವೇ ಅಂತರದಲ್ಲಿವೆ. ಜನಸಾಮಾನ್ಯರ ಕೈಗೆ ತಾಕುವಂತೆ ಸರ್ವಿಸ್ ವೈರ್ಗಳನ್ನು ಹಾಕಿದ್ದರಿಂದ ಯಾವ ಸಂದರ್ಭದಲ್ಲಾದರೂ ಅವಘಡ ಸಂಭವಿಸಬಹುದಾಗಿದೆ ಎಂದರು.

ಸರ್ವಿಸ್ ವೈರ್ ಹೈ ವೋಲ್ಟೇಜ್ ಇರುವುದರಿಂದ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಗ್ರಾಮದ ಮನೆಗಳ ಹಾಗೂ ಪತ್ರಾಗಳ ಮೇಲೆ ಮೇಲೆ ಹಾದು ಹೋಗಿದ್ದರಿಂದ ಬಿರುಗಾಳಿ ಬೀಸಿ ಜನತೆಗೆ ತೊಂದರೆಯಾಗುವ ಮುನ್ನ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ವೆಂಕಟೇಶ ಅಲ್ಲಿಪುರ, ದೇವು, ಅನೀಲಕುಮಾರ, ದುರ್ಗಪ್ಪ, ಕಾಶಪ್ಪ, ಶರಣು, ರೋಹಿತ್, ಭೀಮರಾಯ, ನರಸಪ್ಪ, ಶ್ರೀಶೈಲ್, ಮಲ್ಲಿಕಾರ್ಜುನ ಸೇರಿ ನಿಜಶರಣ ಅಂಬಿಗರ ಚೌಡಯ್ಯ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.