ಫಲ್ಗುಣಿ ನದಿಯಲ್ಲಿ ಜೆಲ್ಲಿಫಿಶ್!

<ರಾಶಿ ರಾಶಿಯಾಗಿ ಪತ್ತೆ, ಉಪ್ಪು ನೀರು ಹೆಚ್ಚಳದಿಂದ ಸಾಧ್ಯತೆ * ಇತರ ಮೀನುಗಳಿಗೆ ಮಾರಕ>

ವೇಣುವಿನೋದ್ ಕೆ.ಎಸ್ ಮಂಗಳೂರು
ಕಳೆದ ಒಂದು ತಿಂಗಳಿಂದ ಮಂಗಳೂರಿನ ಫಲ್ಗುಣಿ ನದಿ ತೀರದಲ್ಲಿ ನದಿ ಹಬ್ಬ ಮಾಡಿ ಸಂಭ್ರಮಿಸಲಾಗಿದೆ… ಆದರೆ ನಿಮಗೆ ಗೊತ್ತೆ ಈ ನದಿ ಎಷ್ಟು ಕೊಳಕಾಗಿ ಬಿಟ್ಟಿದೆ ಎನ್ನುವುದು?

ಕಳೆದೆರಡು ವರ್ಷಗಳಿಂದಲೇ ಮರವೂರು ಅಣೆಕಟ್ಟು ಆದ ಬಳಿಕ ಫಲ್ಗುಣಿ ನದಿ ನೀರು ಕೆಡುತ್ತಿರುವ ಬಗ್ಗೆ ವರದಿಗಳು ಬರುತ್ತಲೇ ಇದ್ದವು. ಇದಕ್ಕೆ ಲೇಟೆಸ್ಟ್ ವಿಚಾರವೊಂದು ಸೇರ್ಪಡೆಯಾಗಿದೆ. ಫಲ್ಗುಣಿ ನದಿ ನೀರಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜೆಲ್ಲಿಫಿಶ್ ಕಂಡು ಬರುತ್ತಿದೆ. ಅತಿ ವೇಗವಾಗಿ ಸಂಖ್ಯೆ ಹೆಚ್ಚಿಸಿಕೊಳ್ಳುವಲ್ಲಿ ಮುಂದಿರುವ ವಿಶಿಷ್ಟ ಜೀವಿ ಜೆಲ್ಲಿ ಫಿಶ್. ಸಮುದ್ರದಲ್ಲಿ ಮಾತ್ರವಲ್ಲ ಹಿನ್ನೀರುಗಳಲ್ಲೂ ಇದು ಕಂಡುಬರುತ್ತದೆ. ಆದರೆ ಫಲ್ಗುಣಿ ನದಿ ನೀರಿನಲ್ಲಿ ಅತಿ ಹೆಚ್ಚು ಕಂಡು ಬರುತ್ತಿರುವುದು ಅಚ್ಚರಿ.

ಈ ಜೆಲ್ಲಿಫಿಶ್ ನೋಡುವುದಕ್ಕೇನೋ ಕೊಡೆಯಂತೆ ಸುಂದರ ಜೀವಿ. ಆದರೆ ಇದು ಸಂಖ್ಯೆ ವೇಗವಾಗಿ ವರ್ಧಿಸುತ್ತ ಹೋದಂತೆ ಇತರ ಸ್ಥಳೀಯ ಮೀನುಗಳ ಮರಿಗಳನ್ನೇ ತಿನ್ನುತ್ತವೆ, ಅಲ್ಲದೆ ಇತರ ಮೀನುಗಳು ತಿನ್ನುವ ಆಹಾರವನ್ನೂ ಕಬಳಿಸುತ್ತದೆ. ಇದರಿಂದಾಗಿ ಇತರ ಮೀನುಗಳ ಸಂಖ್ಯೆ ಗಣನೀಯ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

ರಾಶಿ ರಾಶಿ ಜೆಲ್ಲಿಫಿಶ್: ಹಿಂದೆ ಕಾಣದಂಥ ಜೆಲ್ಲಿ ಫಿಶ್ ಈಗ ದಿಢೀರ್ ಆಗಿ ಹೆಚ್ಚಾಗಲು ಕಾರಣ? ವಾತಾವರಣ ಹಾಗೂ ನೀರಿನ ತಾಪಮಾನದ ಏರಿಕೆಯಾದಾಗ ಜೆಲ್ಲಿಫಿಶ್ ಕಾಣಿಸಿಕೊಳ್ಳುತ್ತದೆ. ಇಂಥ ಪರಿಸ್ಥಿತಿಯಲ್ಲಿ ಬಹಳ ವೇಗವಾಗಿ ಸಂಖ್ಯೆಯನ್ನೂ ವರ್ಧಿಸಿಕೊಳ್ಳುತ್ತದೆ. ಫಲ್ಗುಣಿ ನದಿಯಲ್ಲಿ ಇದೇ ಸ್ಥಿತಿ ಕಾಣಿಸಿಕೊಂಡಿದೆ. ಚಳಿಗಾಲದ ಕೊನೆಯ ಹಂತದಲ್ಲೇ ನದಿಯ ತಾಪಮಾನ ಏರಿಕೆ ಹಂತದಲ್ಲಿದ್ದು ಭಾರಿ ಸಂಖ್ಯೆಯಲ್ಲಿ ಜೆಲ್ಲಿ ಮೀನುಗಳು ತೇಲುತ್ತಿವೆ. ಒಂದೆಡೆ ನದಿಗೆ ಎಸೆಯಲಾಗಿರುವ ಪ್ಲಾಸ್ಟಿಕ್, ರಬ್ಬರ್ ಮತ್ತಿತರ ತ್ಯಾಜ್ಯ, ಅದರೊಂದಿಗೆ ಈ ಮೀನುಗಳನ್ನೂ ನೋಡಬಹುದು.

ಸಾಮಾನ್ಯವಾಗಿ ಜೆಲ್ಲಿ ಫಿಶ್ ಸಮುದ್ರ ಜೀವಿಗಳು. ಉಪ್ಪು ನೀರನ್ನು ಇಷ್ಟಪಡುತ್ತ್ತವೆ. ಇತರ ಮೀನುಗಾರರು ಜೆಲ್ಲಿ ಮೀನುಗಳನ್ನು ಹಿಡಿಯಲು ಹೋಗುವುದಿಲ್ಲ, ಬಲೆಗೆ ಸಿಕ್ಕವುಗಳನ್ನು ಮತ್ತೆ ನೀರಿಗೆ ಬಿಡುತ್ತಾರೆ. ಇತರ ಮೀನುಗಳ ಸಂಖ್ಯೆ ಕಡಿಮೆಯಾದಷ್ಟೂ ಜೆಲ್ಲಿ ಮೀನುಗಳು ಸಂಖ್ಯೆ ವೃದ್ಧಿಸಿಕೊಳ್ಳುತ್ತವೆ. ಸಮುದ್ರ ಉಬ್ಬರದ ವೇಳೆ ಹಿನ್ನೀರಿಗೂ ಬರುತ್ತವೆ.

ಸಿಹಿ ನೀರು ಕಡಿಮೆಯಾಗಿದ್ದು ಕಾರಣ?: ಮರವೂರು ಡ್ಯಾಂನಿಂದಾಗಿ ಸಿಹಿ ನೀರು ಫಲ್ಗುಣಿ ನದಿಗೆ ಹರಿಯುತ್ತಿಲ್ಲ, ಅಥವಾ ಹರಿಯುವಿಕೆ ಪ್ರಮಾಣ ಕಡಿಮೆಯಾಗಿದೆ. ಒಂದೆಡೆ ಕೈಗಾರಿಕಾ ತ್ಯಾಜ್ಯ ಸೇರುತ್ತಿರುವುದು, ಇನ್ನೊಂದೆಡೆ ಸಿಹಿ ನೀರು ಪ್ರಮಾಣ ಕಡಿಮೆಯಾಗಿ ನೀರಿನಲ್ಲಿರುವ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಮೀನುಗಳು ಸಾಯುವುದು ಹಿಂದಿನ ವರ್ಷಗಳಲ್ಲಿ ನಡೆದಿತ್ತು. ಈ ವರ್ಷವೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಸಿಹಿ ನೀರು ಹರಿಯದಿರುವುದು ಒಂದೆಡೆಯಾದರೆ ಉಬ್ಬರದ ವೇಳೆಯಲ್ಲಿ ಉಪ್ಪು ನೀರು ಸಮುದ್ರದಿಂದ ಹರಿದು ಫಲ್ಗುಣಿ ಸೇರುತ್ತಿರುವುದರಿಂದಾಗಿ ಅದರೊಂದಿಗೆ ಜೆಲ್ಲಿ ಮೀನುಗಳು ಬಂದಿರಬಹುದು ಎನ್ನುತ್ತಾರೆ ಮೀನುಗಾರರು.

ಮೊದಲ ಬಾರಿ ಈ ಬೆಳವಣಿಗೆ: ಜೆಲ್ಲಿ ಫಿಶ್ ಸಮುದ್ರದಲ್ಲಿ ಸಾಮಾನ್ಯ. ಅಳಿವೆ ಬಾಗಿಲಿನಲ್ಲಿ ಕೂಡ ಕಾಣಿಸುತ್ತಿದ್ದವು. ಆದರೆ ಈ ವರ್ಷ ಕೂಳೂರುವರೆಗೂ ಬಂದಿರುವುದು ಅಚ್ಚರಿ ತಂದಿದೆ. ನೀರಿನ ಗುಣಮಟ್ಟದಲ್ಲಿ ಆಗಿರುವ ಬದಲಾವಣೆ ಕಾರಣವಿರಬಹುದು. ತಜ್ಞರು ಈ ಬಗ್ಗೆ ಅಧ್ಯಯನ ನಡೆಸಬೇಕು ಎನ್ನುತ್ತಾರೆ ಬೆಂಗ್ರೆಯ ನಿವಾಸಿ ಲೋಕೇಶ್ ಸುವರ್ಣ.

ನದಿ ನೀರಿನಲ್ಲಿ ಉಪ್ಪು ನೀರಿನ ಅಂಶ ಹೆಚ್ಚಿರುವುದು ಜೆಲ್ಲಿ ಫಿಶ್ ಹೆಚ್ಚಾಗಲು ಕಾರಣವಿರಬಹುದು. ಎರಡು ಬಗೆಯ ಜೆಲ್ಲಿ ಫಿಶ್ ಇಂಥ ನೀರಿನಲ್ಲಿರುತ್ತವೆ. ಅದು ತಾಗಿದರೆ ಕೆಲವೊಮ್ಮೆ ಮೈಮೇಲೆ ದದ್ದುಗಳು ಬರಬಹುದು. ತೆಂಗಿನೆಣ್ಣೆ ಹಚ್ಚಿದರೆ ಅದು ಕಡಿಮೆಯಾಗುತ್ತದೆ.
-ಡಾ.ಪ್ರತಿಭಾ ರೋಹಿತ್, ಸಿಎಂಎಫ್‌ಆರ್‌ಐ ವಿಜ್ಞಾನಿ

ಹೆಚ್ಚಿದ ಮೀನುಗಾರಿಕಾ ಚಟುವಟಿಕೆ ಮತ್ತು ಹವಾಮಾನ ವೈಪರೀತ್ಯದಿಂದ ಜೆಲ್ಲಿ ಫಿಶ್ ದಿಢೀರ್ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇದೆ.
-ಡಾ.ಶಿವಪ್ರಕಾಶ್, ತಜ್ಞರು, ಮೀನುಗಾರಿಕಾ ಕಾಲೇಜು