ಮಹಿಳಾ ಸಿಂಗಲ್ಸ್​ನಲ್ಲಿ ಹೊರಬಿತ್ತು ಅಗ್ರ ಹತ್ತು!

ಲಂಡನ್: ಗ್ರಾಂಡ್ ಸ್ಲಾಂ ಟೆನಿಸ್ ಇತಿಹಾಸದ ಅತ್ಯುನ್ನತ ಟೂರ್ನಿ ವಿಂಬಲ್ಡನ್​ನ ಮಹಿಳಾ ಸಿಂಗಲ್ಸ್ ವಿಭಾಗದ ಅಗ್ರ 10 ಶ್ರೇಯಾಂಕಿತ ಆಟಗಾರ್ತಿಯರು ಕ್ವಾರ್ಟರ್​ಫೈನಲ್ ಪ್ರವೇಶಿಸುವ ಮುನ್ನವೇ ಸವಾಲು ಮುಗಿಸಿದ್ದಾರೆ. 4ನೇ ಸುತ್ತಿನ ಕಣದಲ್ಲಿ ಅಗ್ರ 10ರೊಳಗಿನ ಕೊನೇ ಆಟಗಾರ್ತಿಯಾಗಿ ಉಳಿದಿದ್ದ 7ನೇ ಶ್ರೇಯಾಂಕಿತೆ ಕ್ಯಾರೊಲಿನಾ ಪ್ಲಿಸ್ಕೊವಾ ಕೂಡ ನೇರಸೆಟ್​ಗಳಿಂದ ಸೋತು ನಿರ್ಗಮಿಸಿದರು. ಮುಕ್ತ ಯುಗದಲ್ಲಿ ಟಾಪ್ 10 ಆಟಗಾರ್ತಿಯರು ಪ್ರಿ ಕ್ವಾರ್ಟರ್​ಫೈನಲ್​ನಲ್ಲೇ ಹೊರಬಿದ್ದಿರುವುದು ಇದೇ ಮೊದಲ ಬಾರಿಯಾಗಿದೆ. ಸ್ವಿಜರ್ಲೆಂಡ್​ನ ದಾಖಲೆ ಒಡೆಯ ರೋಜರ್ ಫೆಡರರ್ ವಿಂಬಲ್ಡನ್​ನಲ್ಲಿ ಒಟ್ಟಾರೆ 16ನೇ ಬಾರಿ ಕ್ವಾರ್ಟರ್​ಫೈನಲ್ ಪ್ರವೇಶಿಸಿದ್ದರೆ, ಅಮೆರಿಕ ತಾರೆ ಸೆರೇನಾ ವಿಲಿಯಮ್್ಸ, ಮಾಜಿ ರನ್ನರ್​ಅಪ್ ಜರ್ಮನಿಯ ಏಂಜೆಲಿಕ್ ಕೆರ್ಬರ್, 2017ರ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ತಾಪೆಂಕೊ ಮಹಿಳಾ ಸಿಂಗಲ್ಸ್ ಕ್ವಾರ್ಟರ್​ಫೈನಲ್​ಗೇರಿದ್ದಾರೆ.

ಟೂರ್ನಿಯ 7ನೇ ದಿನವಾದ ಸೋಮವಾರ ಕಣಕ್ಕಿಳಿದ ಜೆಕ್ ಗಣರಾಜ್ಯದ ಪ್ಲಿಸ್ಕೊವಾ 3-6, 6-7ರಿಂದ ನೆದರ್ಲೆಂಡ್​ನ ಕಿಕಿ ಬೆರ್ತೆನ್ಸ್ ವಿರುದ್ಧ 1 ಗಂಟೆ, 39 ನಿಮಿಷಗಳ ಹೋರಾಟದಲ್ಲಿ ಸೋತರು. ಇದರಿಂದ 2016ರ ಯುಎಸ್ ಓಪನ್ ರನ್ನರ್​ಅಪ್ 26 ವರ್ಷದ ಪ್ಲಿಸ್ಕೊವಾರ ಚೊಚ್ಚಲ ಗ್ರಾಂಡ್ ಸ್ಲಾಂ ಗೆಲುವಿನ ಆಸೆ ಈ ಬಾರಿಯೂ ಭಗ್ನಗೊಂಡಿತು. ವಿಶ್ವ ನಂ.18 ಕಿಕಿ ಬೆರ್ತೆನ್ಸ್​ಗೆ ಇದು ಚೊಚ್ಚಲ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಪ್ರವೇಶವಾಗಿದೆ. ರಷ್ಯಾ ಅನುಭವಿ ಎಕಟರೀನಾ ಮಕರೋವಾ 3-6, 4-6ರಿಂದ 2012ರ ಪ್ರಿ ಕ್ವಾರ್ಟರ್​ಫೈನಲಿಸ್ಟ್ ಇಟಲಿಯ ಕ್ಯಾಮಿಲಾ ಜಿಯೊರ್ಜಿ ವಿರುದ್ಧ ಆಘಾತ ಎದುರಿಸಿದರು. -ಏಜೆನ್ಸೀಸ್

ಮಹಿಳಾ ಸಿಂಗಲ್ಸ್ ಕ್ವಾರ್ಟರ್​ಫೈನಲ್ಸ್

# ಡೊಮಿನಿಕಾ ಸಿಬುಲ್ಕೊವಾ – ಜೆಲೆನಾ ಒಸ್ತಾಪೆಂಕೊ

#ಡರಿಯಾ ಕಸಟ್ಕಿನಾ – ಏಂಜೆಲಿಕ್ ಕೆರ್ಬರ್

# ಕಿಕಿ ಬೆರ್ತೆನ್ಸ್- ಜೂಲಿಯಾ ಜಾರ್ಜಸ್

# ಸೆರೇನಾ ವಿಲಿಯಮ್್ಸ- ಕ್ಯಾಮಿಲಾ ಜಿಯೊರ್ಜಿ

ಎಂಟರ ಘಟ್ಟಕ್ಕೆ ಸೆರೇನಾ, ಕೆರ್ಬರ್

ಗೆಲುವಿನ ಓಟ ಮುಂದುವರಿಸಿರುವ ಸೆರೇನಾ ವಿಲಿಯಮ್್ಸ 6-2, 6-2ರಿಂದ ರಷ್ಯಾದ ಇವ್ಗೆನಿಯಾ ರೊಡಿನಾರನ್ನು ಸೋಲಿಸಿದರು. 2 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿ ಏಂಜೆಲಿಕ್ ಕೆರ್ಬರ್ 6-3, 7-6ರಿಂದ ವಿಶ್ವ ನಂ.56 ಬೆಲಿಂಡಾ ಬೆನ್ಸಿಕ್​ರನ್ನು ಹೊರದಬ್ಬಿದರು. ವಿಶ್ವ ನಂ.12 ಲಾಟ್ವಿ್ವಾದ ಜೆಲೆನಾ ಒಸ್ತಾಪೆಂಕೊ 4ನೇ ಸುತ್ತಿನಲ್ಲಿ 7-6, 6-0ಯಿಂದ ಬೆಲಾರಸ್​ನ ಅಲೆಕ್ಸಾಂಡ್ರಾ ಸೆಸ್ನೊವಿಚ್​ರನ್ನು ಮಣಿಸಿ ಸತತ 2ನೇ ವರ್ಷ ಅಂತಿಮ 8ರ ಘಟ್ಟಕ್ಕೆ ಲಗ್ಗೆ ಇಟ್ಟರು. ಸ್ಲೊವಾಕಿಯಾ ಆಟಗಾರ್ತಿ ಡೊಮಿನಿಕಾ ಸಿಬುಲ್ಕೊವಾ 6-4, 6-1ರಿಂದ ಚೀನಾ ತೈಪೆಯ ಸುವೈ ಶೀರನ್ನು ಸೋಲಿಸಿ 3ನೇ ಸಲ ಕ್ವಾರ್ಟರ್​ಫೈನಲ್​ಗೇರಿದ ಸಾಧನೆ ಮಾಡಿದರು. ಜರ್ಮನಿಯಾ ಜೂಲಿಯಾ ಜಾರ್ಜಸ್ 6-3, 6-2ರಿಂದ ಕ್ರೊವೇಷಿಯಾದ ಡೊನ್ನಾ ವೆಕಿಕ್​ರನ್ನು ಮಣಿಸಿದರು. ಡರಿಯಾ ಕಸಟ್ಕಿನಾ 6-7, 6-3, 6-2ರಿಂದ ಬೆಲ್ಜಿಯಂನ ಅಲಿಸನ್ ವಾನ್ ವಿರುದ್ಧ ಗೆದ್ದು ಚೊಚ್ಚಲ ಬಾರಿ ವಿಂಬಲ್ಡನ್ ಕ್ವಾರ್ಟರ್​ಫೈನಲ್ ಪ್ರವೇಶಿಸಿದರು.

ಮುನ್ನಡೆದ ಫೆಡರರ್ ರಾವೊನಿಕ್

36ನೇ ವಯಸ್ಸಿನಲ್ಲೂ 21ನೇ ಗ್ರಾಂಡ್ ಸ್ಲಾಂ ಮುಡಿಗೇರಿಸಿಕೊಳ್ಳುವ ಸನಿಹ ತಲುಪಿರುವ ಫೆಡರರ್ 6-0, 7-5, 6-4 ನೇರಸೆಟ್​ಗಳಿಂದ ಫ್ರಾನ್ಸ್​ನ ಏಡ್ರಿಯನ್ ಮೆನಾರಿಯೊರನ್ನು ಸೋಲಿಸಿ ಹಾಲಿ ಋತುವಿನಲ್ಲಿ 2ನೇ ಗ್ರಾಂಡ್ ಸ್ಲಾಂನಲ್ಲಿ 16ರ ಘಟ್ಟಕ್ಕೇರಿದ್ದಾರೆ. ಇದರಿಂದ ಫೆಡ್ ವಿಂಬಲ್ಡನ್​ನಲ್ಲಿ ಸತತ 32 ಸೆಟ್ ಜಯಿಸಿದ ಸಾಧನೆ ಮೆರೆದರು. ವಿಂಬಲ್ಡನ್​ನಲ್ಲಿ ಅತ್ಯಧಿಕ ಸತತ ಸೆಟ್ ಜಯಿಸಿರುವ ದಾಖಲೆ ಫೆಡರರ್ ಹೆಸರಿನಲ್ಲೇ ಇದೆ. 2005-06ರಲ್ಲಿ ಅವರು ಸತತ 34 ಸೆಟ್ ಜಯಿಸಿದ್ದರು. ಕೆನಡ ಸ್ಟಾರ್ ಮಿಲೋಸ್ ರಾವೊನಿಕ್ ವಿಂಬಲ್ಡನ್​ನಲ್ಲಿ ಸತತ 3ನೇ ಕ್ವಾರ್ಟರ್ ಫೈನಲ್​ಗೇರಿದ್ದಾರೆ. 2016ರ ರನ್ನರ್ ಅಪ್ ರಾವೊನಿಕ್ 4 ಸೆಟ್​ಗಳ ಹೋರಾಟದಲ್ಲಿ 6-3, 6-4, 6-7, 6-2ರಿಂದ ಅಮೆರಿಕದ ಮೆಕೆಂಜಿ ಮೆಕ್​ಡೊನಾಲ್ಡ್​ರನ್ನು ಸೋಲಿಸಿ ಮುನ್ನಡೆದರು.

ವಿಂಬಲ್ಡನ್ ಫೈನಲ್ ಸಮಯ ಬದಲಿಲ್ಲ

ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಜತೆಗೆ ಸಂಘರ್ಷ ಏರ್ಪಡುವ ಹೊರತಾಗಿಯೂ ವಿಂಬಲ್ಡನ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದ ಸಮಯ ಬದಲಾವಣೆ ಮಾಡಲಾಗುವುದಿಲ್ಲ ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಇಂಗ್ಲೆಂಡ್ ತಂಡ ಫಿಫಾ ವಿಶ್ವಕಪ್​ನಲ್ಲಿ ಫೈನಲ್​ಗೇರಿದರೆ ಆಂಗ್ಲರು ಹೆಚ್ಚು ಸಂಕಟಕ್ಕೆ ಸಿಲುಕಲಿದ್ದಾರೆ. ವಿಂಬಲ್ಡನ್ ಫೈನಲ್ ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 6.30) ಆರಂಭಗೊಂಡರೆ, ವಿಶ್ವಕಪ್ ಫೈನಲ್ ಯುಕೆ ಕಾಲಮಾನ ಸಂಜೆ 4 ಗಂಟೆಗೆ (ಭಾರತೀಯ ಕಾಲಮಾನ ರಾತ್ರಿ 8.30) ಶುರುವಾಗಲಿದೆ. 1966ರ ಬಳಿಕ ಮತ್ತೊಮ್ಮೆ ಫಿಫಾ ವಿಶ್ವಕಪ್​ಗೆ ಮುತ್ತಿಕ್ಕುವ ಹುರುಪಿನಲ್ಲಿರುವ ಆಂಗ್ಲರು, ವಿಂಬಲ್ಡನ್ ಫೈನಲ್​ಗಿಂತ ವಿಶ್ವಕಪ್​ನತ್ತ ಹೆಚ್ಚು ಆಕರ್ಷಿತರಾಗುವ ನಿರೀಕ್ಷೆ ಇದೆ. ಆದರೂ ವಿಂಬಲ್ಡನ್ ಫೈನಲ್ ಸಮಯ ಬದಲಾವಣೆ ಇಲ್ಲ. ವಿಂಬಲ್ಡನ್​ನ ದೈತ್ಯ ಪರದೆಯಲ್ಲಿ ಫಿಫಾ ವಿಶ್ವಕಪ್ ಸೆಮಿಫೈನಲ್ ಅಥವಾ ಫೈನಲ್ ಪಂದ್ಯವನ್ನು ಪ್ರಸಾರ ಮಾಡುವ ಯೋಚನೆಯೂ ಇಲ್ಲ ಎಂದು ಆಲ್ ಇಂಗ್ಲೆಂಡ್ ಕ್ಲಬ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಚರ್ಡ್ ಲೆವಿಸ್ ಹೇಳಿದ್ದಾರೆ.