More

  ಜೀವನಪ್ರೀತಿ ಸವಿಗಾನದ ಭಾವಕವಿ

  ಜನಪ್ರೀತಿಯ ಕವಿ ಎಂದೇ ಪ್ರಸಿದ್ಧರಾಗಿರುವ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಈಗ 80 ವರ್ಷಗಳ ಸಂಭ್ರಮ. ಸಾಹಿತ್ಯ ಕೃಷಿಯ ಎಲ್ಲ ಆಯಾಮಗಳಲ್ಲೂ ಅಪಾರ ಓದುಗರನ್ನು ಸೃಷ್ಟಿಸಿರುವ, ಮೃದು ಮಾತಿನ ಎಚ್ಚೆಸ್ವಿ ಸ್ನೇಹಬಳಗವೂ ದೊಡ್ಡದು. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ, ಭಾವಗೀತೆಗಳ ಮೂಲಕ ಕೇಳುಗರ ಮನಸೂರೆಗೊಂಡಿರುವ ಎಚ್ಚೆಸ್ವಿ, ನಾಡುನುಡಿಗೆ ನೀಡಿರುವ ಕೊಡುಗೆ ಅನುಪಮ. ಸಾಹಿತ್ಯ ಲೋಕದ ಎಚ್ಚೆಸ್ವಿ ಆಪ್ತರು ಅವರೊಂದಿಗಿನ ಒಡನಾಟವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

  ಇಂದು ಎಚ್ಚೆಸ್ವಿ ಕಾವ್ಯಸಂಭ್ರಮ

  ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರ 80ನೇ ಜನ್ಮದಿನೋತ್ಸವದ ಅಂಗವಾಗಿ ಉಪಾಸನಾ ಟ್ರಸ್ಟ್ ಮತ್ತು ಎಚ್ಚೆಸ್ವಿ ವಿದ್ಯಾರ್ಥಿ ಬಳಗದ ಸಹಯೋಗದಲ್ಲಿ ‘ಎಚ್ಚೆಸ್ವಿ ಕಾವ್ಯ ಸಂಭ್ರಮ’ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿದೆ. ಬೆಂಗಳೂರಿನ ಎನ್​ಆರ್ ಕಾಲೋನಿ ರಾಮಮಂದಿರ ಆವರಣದ ಪತ್ತಿ ಸಭಾಂಗಣದಲ್ಲಿ ಭಾನುವಾರ ಸಂಜೆ 5ಕ್ಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಚ್ಚೆಸ್ವಿ ಅವರ ಕುರಿತು ಸಾಕ್ಷ್ಯಚಿತ್ರ, ಪುಸ್ತಕಗಳು, ಭಾವಗುಚ್ಛ ಲೋಕಾರ್ಪಣೆ ಮತ್ತು ಗೌರವಾಭಿನಂದನೆ, ಗೀತಗಾಯನ, ಭಾವನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಪ್ರಾಧ್ಯಾಪಕರಾದ ಡಾ.ವೆಂಕಟಾಚಲ ಹೆಗಡೆ, ಕವಿ ಡಾ. ಬಿ.ಆರ್.ಲಕ್ಷ್ಮಣರಾವ್, ವಿಮರ್ಶಕ ಡಾ. ಎಚ್.ಎಸ್.ಸತ್ಯನಾರಾಯಣ, ಕವಿ ಡಾ. ಕಾ.ವೆಂ.ಶ್ರೀನಿವಾಸಮೂರ್ತಿ, ಹಿರಿಯ ನಟ ಶ್ರೀನಿವಾಸಪ್ರಭು ಹಾಗೂ ಎಚ್.ಎಸ್.ವೆಂಕಟೇಶಮೂರ್ತಿ ಪಾಲ್ಗೊಳ್ಳಲಿದ್ದಾರೆ.

  ಜೋಡಿಜೀವ

  | ಬಿ.ಅರ್.ಲಕ್ಷ್ಮಣರಾವ್

  ಕನ್ನಡದ ಶ್ರೇಷ್ಠಕವಿಗಳಲ್ಲಿ ಒಬ್ಬನಾದ ಎಚ್.ಎಸ್.ವೆಂಕಟೇಶಮೂರ್ತಿ (ಎಚ್ಚೆಸ್ವಿ) ಯೊಂದಿಗೆ ನನ್ನದು ಸುಮಾರು 47 ವರ್ಷಗಳ ನಿಡುಗಾಲದ ಸ್ನೇಹ ಮತ್ತು ಒಡನಾಟ. ಅವನ ಅತ್ಯಂತ ವಿರಳ ಏಕವಚನದ ಗೆಳೆಯರಲ್ಲಿ ನಾನೂ ಒಬ್ಬ. ನಮ್ಮದು ಜೋಡಿಜೀವ. ಏಕೆಂದರೆ ನಾವು ಒಟ್ಟಾಗಿಯೇ ಅದೆಷ್ಟೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇವೆ; ನಮ್ಮ ಪುಸ್ತಕಗಳನ್ನು ಹಾಗೂ ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿದ್ದೇವೆ; ಪ್ರವಾಸಗಳಿಗೆ (ಅಮೆರಿಕಕ್ಕೂ ಸಹ) ಹೋಗಿಬಂದಿದ್ದೇವೆ; ಸುಖ- ದುಃಖಗಳನ್ನು ಹಂಚಿಕೊಂಡಿದ್ದೇವೆ. ಹೀಗಾಗಿ ನಮ್ಮಿಬ್ಬರಿಗೂ ಅತ್ಯಾಪ್ತರಾಗಿದ್ದ ಡಾ.ಜಿ.ಎಸ್.ಶಿವರುದ್ರಪ್ಪನವರು ನಮ್ಮನ್ನು ‘ಕನ್ನಡ ಕಾವ್ಯದ ಅಶ್ವಿನಿ ದೇವತೆಯರು’ ಎಂದು ಕರೆದದ್ದೂ ಉಂಟು.

  ಜೀವನಪ್ರೀತಿ ಸವಿಗಾನದ ಭಾವಕವಿ

  ನಮ್ಮಿಬ್ಬರಿಗೂ ಅಪಾರ ಜನಪ್ರೀತಿಯನ್ನು ಗಳಿಸಿಕೊಟ್ಟ ಸುಗಮ ಸಂಗೀತ ಕ್ಷೇತ್ರಕ್ಕೆ ನಾವು ಅಡಿಯಿಟ್ಟದ್ದೂ ಒಟ್ಟಿಗೇನೇ. 1984ರಲ್ಲಿ ಎಚ್ಚೆಸ್ವಿಯ ‘ಮರೆತ ಸಾಲುಗಳು’ ಹಾಗೂ ನನ್ನ ‘ಪ್ರೇಮ ಸುಳಿವ ಜಾಡು’ ಎಂಬ ನಮ್ಮ ಚೊಚ್ಚಲ ಭಾವಗೀತೆಗಳ ಕಿರು ಹೊತ್ತಿಗೆಗಳು ಚಿಂತಾಮಣಿಯಲ್ಲಿ ಪುತಿನ ಮತ್ತು ರಾಮಚಂದ್ರಶರ್ಮರ ಸಮ್ಮುಖದಲ್ಲಿ ಬಿಡುಗಡೆಯಾದವು. 1985ರಲ್ಲಿ ಸಿ.ಅಶ್ವತ್ಥ್ ಅವರ ಸ್ವರಸಂಯೋಜನೆಯಲ್ಲಿ ಹೊರಬಂದ ‘ಕೆಂಗುಲಾಬಿ’ ಎಂಬ ಭಾವಗೀತೆಗಳ ಧ್ವನಿಸುರುಳಿಯಲ್ಲಿ ನಮ್ಮಿಬ್ಬರ ರಚನೆಗಳು ಮೊದಲಬಾರಿಗೆ ಒಟ್ಟಾಗಿ ರಸಿಕರ ಮನಮುಟ್ಟಿದವು. ಅಲ್ಲಿಂದಾಚೆಗೆ ನಮ್ಮ ಭಾವಗೀತೆಗಳ ಅನೇಕ ಧ್ವನಿಸುರುಳಿಗಳು ನಿರಂತರವಾಗಿ ಹೊರಬಂದು ಜನಾನುರಾಗ ಗಳಿಸಿದವು. 2011ರಲ್ಲಿ ಲಹರಿ ಸಂಸ್ಥೆಯು ನಮ್ಮಿಬ್ಬರ ಒಟ್ಟು 113 ಭಾವಗೀತೆಗಳನ್ನು ಒಳಗೊಂಡ ನಾಲ್ಕು ಧ್ವನಿ ಸಾಂದ್ರಿಕೆಗಳ ‘ಸ್ನೇಹ’ ಎಂಬ ಆಲ್ಬಂ ಹೊರತಂದು, ನಮ್ಮ ಸುದೀರ್ಘ ಮೈತ್ರಿಗೊಂದು ಸಾರ್ಥಕ ಪ್ರತೀಕವನ್ನೊದಗಿಸಿತು.

  See also  ರಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಿ

  ನಮ್ಮಿಬ್ಬರ ಮೊಟ್ಟ ಮೊದಲ ವಿಮಾನಯಾನ ವಾದದ್ದೂ ಒಟ್ಟಿಗೇನೇ. 1986ರಲ್ಲಿ ಅಂತ ನೆನಪು. ಆಗ ನಾವು ಒಂದು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಕ್ಕೆಂದು ಮಂಗಳೂರಿಗೆ ಹೋಗಿದ್ದೆವು. ಎಚ್ಚೆಸ್ವಿಯ ಪತ್ನಿ ರಾಜಲಕ್ಷ್ಮಿ ಹಾಗೂ ಕೊನೆಯ ಮಗ ಸಂಜಯ ಸಹ ಬಂದಿದ್ದರು. ಮಂಗಳೂರಿನಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸೋಣವೆಂದು ಎಚ್ಚೆಸ್ವಿ ಹೇಳಿದ. ಅಲ್ಲಿನ ಕರ್ನಾಟಕ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದ ನಮ್ಮ ಮಿತ್ರರಾದ ಆನಂದರಾಮ ಉಪಾಧ್ಯರು ಟಿಕೆಟ್ಟುಗಳ ವ್ಯವಸ್ಥೆ ಮಾಡಿದರು. ಅದು ನಮಗೆ ವಿಮಾನಯಾನದ ಮೊದಲ ಅನುಭವವಾದ್ದರಿಂದ ಆತಂಕ ಹಾಗೂ ರೋಚಕತೆ ಎರಡೂ ಅದರಲ್ಲಿತ್ತು. ವಿಮಾನದ ಕಿಟಕಿ ಬದಿಯ ಸೀಟು ಹಿಡಿದು, ಬಾನೆತ್ತರದಿಂದ ಭೂಮಿಯ ಸೊಬಗನ್ನು ನಾವು ಸವಿಯತೊಡಗಿ ಇನ್ನೂ ಇಪ್ಪತ್ತು ನಿಮಿಷಗಳಾಗಿರಬಹುದು, ಅಷ್ಟರಲ್ಲೇ ಬೆಂಗಳೂರು ಬಂದೇಬಿಟ್ಟಿತೆಂದು ತಿಳಿದು ನಮಗೆ ನಿಜಕ್ಕೂ ನಿರಾಸೆಯಾಯಿತು. ವಿಮಾನ ನಿಲ್ದಾಣದಲ್ಲಿಳಿದು ಹೊರಬಂದ ಕೂಡಲೇ ಎಚ್ಚೆಸ್ವಿ ತನ್ನ ಬಲಗೈಯಿಂದ ನೆಲವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು, ‘ಸದ್ಯ, ಸುರಕ್ಷಿತವಾಗಿ ಮತ್ತೆ ಭೂಮಿಗೆ ಬಂದೆವಲ್ಲಪ್ಪ!’ ಎಂದದ್ದು ಇನ್ನೂ ನೆನಪಿದೆ; ಹಾಗೆಯೇ ತನ್ನನ್ನು ಬಿಟ್ಟು ನಾನೊಬ್ಬನೇ ವಿಮಾನಯಾನ ಮಾಡಿದ್ದಕ್ಕಾಗಿ ನನ್ನ ಮಡದಿ ಗಿರಿಜ ಮುನಿಸಿಕೊಂಡದ್ದು ಸಹ. ಇಂತಹ ಸವಿನೆನಪುಗಳು ನಮ್ಮ ಸಾಹಿತ್ಯ ಸಹಯಾನದಲ್ಲಿ ಸಾಕಷ್ಟಿವೆ. ಎಚ್ಚೆಸ್ವಿಗೆ 80ರ ಪ್ರೀತಿಯ ಅಭಿನಂದನೆಗಳು. ನೂರ್ಕಾಲ ಅವನು ನಮ್ಮೊಂದಿಗಿದ್ದು ಕನ್ನಡ ಸಾಹಿತ್ಯ ಭಂಡಾರವನ್ನು ಇನ್ನಷ್ಟು ಮತ್ತಷ್ಟು ಶ್ರೀಮಂತಗೊಳಿಸಲಿ.

  ಕಾವ್ಯೋತ್ಸಾಹ

  | ಎಚ್.ಡುಂಡಿರಾಜ್

  ಕನ್ನಡಿಗರ ಪ್ರೀತಿಯ ಕವಿ ಎಚ್ಚೆಸ್ವಿಯವರಿಗೆ ಎಂಬತ್ತು. ಅವರೊಂದಿಗಿನ ನನ್ನ ಸ್ನೇಹಕ್ಕೆ ನಲ್ವತ್ತು. ನನಗೆ ಎಚ್ಚೆಸ್ವಿಯವರ ಪರಿಚಯವಾದಾಗ ಅವರು ಬೆಂಗಳೂರಿನಲ್ಲಿದ್ದರು. ನಾನು ಮಂಗಳೂರಿನಲ್ಲಿದ್ದೆ. ಬ್ಯಾಂಕ್ ಉದ್ಯೋಗಿಯಾದ್ದರಿಂದ ಎರಡು, ಮೂರು ವರ್ಷಗಳಿಗೊಮ್ಮೆ ನನ್ನ ಊರು ಬದಲಾಗುತ್ತಿತ್ತು. ನೇರ ಭೇಟಿ ಅಪರೂಪವಾಗಿದ್ದರೂ ನಮ್ಮ ಸ್ನೇಹ ಪತ್ರ ಹಾಗೂ ದೂರವಾಣಿಯ ಮೂಲಕ ನಿರಂತರವಾಗಿ ಮುಂದುವರಿದಿತ್ತು. ಎಚ್ಚೆಸ್ವಿಯವರ ಸ್ನೇಹದ ಹರಹು ದೊಡ್ಡದು. ಪುತಿನ, ಜಿಎಸ್​ಎಸ್, ಕೆಎಸ್​ನ, ಅನಂತಮೂರ್ತಿಯವರಂಥ ಹಿರಿಯರು, ದೊಡ್ಡರಂಗೇಗೌಡರು, ಬಿಆರ್​ಎಲ್, ನರಹಳ್ಳಿ ಮುಂತಾದ ಸಮಕಾಲೀನರು ಮತ್ತು ಅವರಿಗಿಂತ ಕಿರಿಯರಾದ ನನ್ನಂಥ ಅನೇಕರ ಜೊತೆ ನಿಕಟಸ್ನೇಹ ಇಟ್ಟುಕೊಂಡ ಅಪರೂಪದ ವ್ಯಕ್ತಿತ್ವ ಅವರದು. ಕಾಲೇಜಿನಲ್ಲಿ ತಮ್ಮ ಶಿಷ್ಯರಾಗಿದ್ದವರನ್ನೂ ಕಿರಿಯ ಸ್ನೇಹಿತರಂತೆ ಕಾಣುವುದು ಅವರ ವಿಶೇಷತೆ. ಬಹುಶಃ ಈ ಕಾರಣದಿಂದಲೇ ನಿವೃತ್ತಿಯ ನಂತರವೂ ಎಚ್ಚೆಸ್ವಿಯವರು ವಿದ್ಯಾರ್ಥಿಗಳ ಪಾಲಿಗೆ ನೆಚ್ಚಿನ ಮೇಷ್ಟ್ರಾಗಿ ಉಳಿದಿದ್ದಾರೆ. ಮಾರ್ಗದರ್ಶನ, ಮುನ್ನುಡಿ, ಬೆನ್ನುಡಿ, ಪುಸ್ತಕ ಪ್ರಕಟಣೆಗೆ ಸಲಹೆ, ಕೃತಿ ಬಿಡುಗಡೆಯ ಮೂಲಕ ಬರವಣಿಗೆಯಲ್ಲಿ ತೊಡಗಿರುವ ಕಿರಿಯರಿಗೆ ನೆರವಾಗುವುದು ಅವರಿಗೆ ಪ್ರಿಯವಾದ ಸಂಗತಿ. ಬಿಡುವಿಲ್ಲದ ಬರವಣಿಗೆಯ ನಡುವೆಯೂ ಸ್ನೇಹಸಂಬಂಧಗಳಿಗೆ ಸಮಯ ನೀಡುವ ಅಪರೂಪದ ಗುಣ ಅವರಲ್ಲಿದೆ.

  See also  ಎನ್‌ಟಿಎ ರದ್ದುಗೊಳಿಸಿ ಆಗ್ರಹ

  ಜೀವನಪ್ರೀತಿ ಸವಿಗಾನದ ಭಾವಕವಿ

  ಬೆಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವುದರಿಂದ ನನಗಾದ ಬಹುದೊಡ್ಡ ಲಾಭವೆಂದರೆ ಎಚ್ಚೆಸ್ವಿ, ಬಿಆರ್​ಎಲ್ ಅವರಂಥ ಹಿರಿಯ ಸಾಹಿತಿಗಳ ಜೊತೆ ನೇರಸಂಪರ್ಕ. ಎಚ್ಚೆಸ್ವಿಯವರೊಂದಿಗೆ ನಾನು ಭಾಗವಹಿಸಿದ ಸಾಹಿತ್ಯದ ಕಾರ್ಯಕ್ರಮಗಳು, ಅವುಗಳಿಗಾಗಿ ಮಾಡಿದ ಪ್ರವಾಸ, ದಾರಿಯುದ್ದಕ್ಕೂ ನಡೆಸಿದ ಮಾತುಕತೆಗಳ ನೆನಪು ಅವಿಸ್ಮರಣೀಯ. ಎಚ್ಚೆಸ್ವಿಯವರಿಗೆ ಬರವಣಿಗೆಯ ಬಗ್ಗೆ ಇರುವಷ್ಟೇ ಶ್ರದ್ಧೆ, ಆಸಕ್ತಿ ಊಟ, ತಿಂಡಿಯ ವಿಷಯದಲ್ಲಿಯೂ ಉಂಟು. ಅವರಿಗೆ ಫೋನ್ ಮಾಡಿದಾಗಲೆಲ್ಲ ‘ಭಾರತಿ ಏನು ಅಡುಗೆ ಮಾಡಿದ್ದಾರೆ?’ ಎಂದು ವಿಚಾರಿಸದೆ ಇರುವುದಿಲ್ಲ. ಪ್ರಯಾಣ ಮಾಡುವಾಗ ರಸ್ತೆಬದಿಯಲ್ಲಿ ಒಳ್ಳೆಯ ಎಳನೀರು, ತರಕಾರಿ, ಹಣ್ಣು ಕಣ್ಣಿಗೆ ಬಿದ್ದರೆ ಕಾರು ನಿಲ್ಲಿಸಲೇಬೇಕು.

  ಕಳೆದ ಕೆಲವು ವರ್ಷಗಳಿಂದ ಎಚ್ಚೆಸ್ವಿಯವರನ್ನು ಕಾಡುತ್ತಿರುವ ಗಂಭೀರ ಅನಾರೋಗ್ಯ ಅವರ ಆಹಾರದ ಹಸಿವಿಗೆ ಅಡ್ಡಿಯಾಗಿದೆ. ಆದರೆ ಸಾಹಿತ್ಯದ ಹಸಿವು ಎಂದಿನಂತೆಯೇ ಇದೆ. ಕಳೆದ ವರ್ಷ ಎಚ್ಚೆಸ್ವಿಯವರು ಸರ್ಜರಿ ಮೂಲಕ ಹೃದಯದ ರಕ್ತನಾಳಗಳಿಗೆ ಸ್ಟಂಟ್ ಅಳವಡಿಸಿಕೊಂಡು ಚೇತರಿಸಿಕೊಳ್ಳುತ್ತಿದ್ದಾಗ ಅವರನ್ನು ನೋಡಿ ನಾನು ಕೇಳಿದ ಪ್ರಶ್ನೆ: ‘ಸಾರ್, ಸುಸ್ತು ಹೇಗಿದೆ?’ ಅವರ ಉತ್ತರ: ‘ಪುಸ್ತಕಾನಾ? ಪೂರ್ತಿಯಾಗಿ ಅಚ್ಚಿಗೆ ಹೋಗಿದೆ’. ಎಚ್ಚೆಸ್ವಿಯವರು ಬೆಡ್​ರೆಸ್ಟ್

  ನಲ್ಲಿದ್ದಾಗಲೂ ಅವರೊಳಗಿನ ಕವಿಗೆ ರೆಸ್ಟ್ ಕೊಡಲಿಲ್ಲ. ಗಾಲಿಕುರ್ಚಿಯಲ್ಲಿ ಕುಳಿತುಕೊಂಡು ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಕೈಗೆ ವಾಕಿಂಗ್ ಸ್ಟಿಕ್ ಬಂದಾಗ, ಕಡೆವರೆಗು ಕರೆದೊಯ್ಯಿ/ಊರುಗೋಲೆ/ಉಳಿದದ್ದು ಸಿಗಬಹುದು/ಕಳೆದ ಮೇಲೆ ಎಂದು ಅದರ ಬಗ್ಗೆಯೇ ಕವಿತೆ ಬರೆದರು.

  ಸ್ಟಂಟ್ ಹಾಕಿಸಿಕೊಂಡು ಇನ್ನೇನು ಆರೋಗ್ಯ ಸುಧಾರಿಸಿತು ಎನ್ನುವಾಗ ಎಚ್ಚೆಸ್ವಿಯವರಿಗೆ ಕೆಲವು ತಿಂಗಳುಗಳ ಹಿಂದೆ ಮತ್ತೊಮ್ಮೆ ಹೃದಯಾಘಾತವಾಯಿತು. ಈ ಬಾರಿ ಕಠಿಣವಾದ ತೆರೆದ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾದರು. ನುರಿತ ವೈದ್ಯರ ಶ್ರಮ ಮತ್ತು ಎಚ್ಚೆಸ್ವಿಯವರ ಮನೋಬಲದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಮನೆಗೆ ಬಂದ ಬಳಿಕ ಅಳುಕುತ್ತಲೇ ಮಾತನಾಡಿಸಲು ಹೋದೆ. ಕವಿ ಎಂದಿನಂತೆ ಲವಲವಿಕೆಯಿಂದ ಮಾತನಾಡಿದರು. ಶಸ್ತ್ರಕ್ರಿಯೆಗೆ ತಯಾರಿ ನಡೆಯುತ್ತಿದ್ದಾಗ ಮತ್ತು ಪ್ರಜ್ಞೆ ಬಂದ ನಂತರ ತಾವು ಬರೆದ ಕವಿತೆಗಳನ್ನು ತೋರಿಸಿದರು. ಅವರ ಕಾವ್ಯಪ್ರೇಮ ಮತ್ತು ಜೀವನೋತ್ಸಾಹವನ್ನು ನೋಡಿ ನಾನು ದಂಗಾದೆ. ಮರುದಿನ ಹೀಗೊಂದು ಕವಿತೆ ಬರೆದು ಎಚ್ಚೆಸ್ವಿಯವರಿಗೆ ಕಳುಹಿಸಿದೆ.

  ಸಂಕಲ್ಪ ಬಲ

  ಹೃದಯದ ಶಸ್ತ್ರಚಿಕಿತ್ಸೆಗೆ ವೈದ್ಯರು/ ನಡೆಸುತ್ತಿದ್ದಾಗ ಸಿದ್ಧತೆ
  ಇವರ ಕವಿ ಮನಸ್ಸು ಧೇನಿಸುತ್ತಿತ್ತು/ ಇನ್ನೊಂದು ಹೊಸ ಕವಿತೆ
  ಹನುಮಂತ ಹೃದಯ ತೆರೆದಾಗ ಅಲ್ಲಿ/ ಕಾಣಿಸಿದ್ದರು ರಾಮ ಸೀತೆ
  ಇವರ ಎದೆಯಲ್ಲಿ ಕಂಡಿರಬಹುದು/ ಸಂಪೂರ್ಣ ರಾಮಚರಿತೆ
  ನೂರ್ಕಾಲ ಹೀಗೆ ಬರೆಯುತ್ತಲಿರಲಿ/ ನಮ್ಮೆಲ್ಲರ ನೆಚ್ಚಿನ ಈ ಕವಿ
  ಸಂಕಲ್ಪ ಬಲ ಮತ್ತು ಧನಾತ್ಮಕತೆಗೆ/ ಇನ್ನೊಂದು ಹೆಸರು ಎಚ್ಚೆಸ್ವಿ

  ಕಾವ್ಯ ಸೌಗಂಧಿಕಾ

  | ಮಾಲಿನಿ ಗುರುಪ್ರಸನ್ನ

  See also  ರಾತ್ರೋರಾತ್ರಿ ಶ್ರೀಮಂತಳಾದ ಪತ್ನಿ: ತಾನು ಸತ್ತುಹೋದ ದಾಖಲೆ ನೋಡಿ ಬೆಚ್ಚಿಬಿದ್ದ ಪತಿ!

  ಜೀವನಪ್ರೀತಿ ಸವಿಗಾನದ ಭಾವಕವಿ ಎಚ್ಚೆಸ್ವಿ ಕಾವ್ಯವನ್ನು ಓದುವವರು, ಅಭ್ಯಸಿಸುವವರು ಅಲ್ಲಿ ಪುರಾಣದ ಪಾತ್ರಗಳು ತಳೆಯುವ ರೂಪವನ್ನು ಗಮನಿಸಬೇಕು. ಅವರು ಮತ್ತೆ ಮತ್ತೆ ತಮ್ಮ ಕಾವ್ಯದಲ್ಲಿ ಆ ಪಾತ್ರಗಳನ್ನು ಕರೆತರುತ್ತಾರೆ, ಅವುಗಳ ಕುಶಲ ಕೇಳುತ್ತಾರೆ, ಈಗಿನ ಹೊತ್ತಲ್ಲಿ ಅವುಗಳ ಮನೋಭಾವಕ್ಕೆ ಹೊಸ ರೂಪ ತೊಡಿಸುತ್ತಾರೆ. ಕೃಷ್ಣ-ರಾಧೆಯ ಪ್ರೇಮದ ಕುರಿತ ಪದ್ಯಗಳನ್ನು ಬಿಡಿ, ಅವರ ‘ಆಪ್ತಗೀತ’ದತ್ತ ಮತ್ತೊಮ್ಮೆ ಕಣ್ಣಾಡಿಸಿ. ಬಿಲ್ಲನ್ನು ಕೆಳಗಿಟ್ಟ ಅರ್ಜುನ ಮತ್ತೆ ಬಿಲ್ಲೆತ್ತಿಕೊಂಡು ಹ್ಞೂಕರಿಸುವಂತೆ ತನ್ನ ಭಗವದ್ಗೀತೆಯಲ್ಲಿ ಮಾಡುವ ಕೃಷ್ಣ, ಎಚ್ಚೆಸ್ವಿಯವರ ಆಪ್ತಗೀತದಲ್ಲಿ ಬಿಲ್ಲನ್ನು ಕೆಳಗಿಳಿಸುವ, ನಿರ್ಧನುವಾಗುವ ಅಗತ್ಯದ ಕುರಿತು ಹೇಳುತ್ತಾನೆ. ಅದು ಅಂದಿನ ತುರ್ತಾದರೆ, ಇದು ಇಂದಿನ ತುರ್ತು ಎಂಬುದನ್ನು ಮನಗಾಣಿಸುತ್ತಾರೆ. ಅದಕ್ಕೇ ಅದು ಆಪ್ತಗೀತ! ಇದು ಕೇವಲ ಅವರ ಕಾವ್ಯದಲ್ಲಿ ಅಷ್ಟೇ ಅಲ್ಲ, ನಾಟಕಗಳಲ್ಲೂ ಸಂಭವಿಸುತ್ತದೆ. ಅವರ ಕಣ್ಣೋಟದ ಊರ್ವಿುಳೆ, ಶಬರಿ, ದ್ರೌಪದಿಯರೇ ಬೇರೆ. ಅಷ್ಟೇಕೆ ಅವರ ಬುದ್ಧಚರಣದ ಪ್ರಜಾಪತಿದೇವಿ ಗೌತಮಿಯೂ ಮತ್ತಷ್ಟು ಆರ್ದ್ರರ್ೆ.

  ಅವರ ‘ಸೌಗಂಧಿಕಾ’ ಈ ನಿಟ್ಟಿನಲ್ಲಿ ನನ್ನನ್ನು ಯಾವತ್ತೂ ಸೆಳೆಯುವ ಕಾವ್ಯ. ಬೆಳಗ್ಗೆ ಏಳುವ ಐವರು ಗಂಡಂದಿರ ಪತ್ನಿ ದ್ರೌಪದಿಯ ಪಕ್ಕದಲ್ಲಿ ಖಾಲಿ ಹಾಸಿಗೆ… ಉರಿಉರಿವ, ಧಗಧಗಿಸುವ ಮನಸ್ಥಿತಿಯ, ಸೇಡನ್ನುಳಿದು ಮತ್ತೇನನ್ನೂ ಧ್ಯಾನಿಸದ ಪುರಾಣದ ದ್ರೌಪದಿಯ ಚಿತ್ರಣದ ಹೊರತಾಗಿ ತೆರೆದ ಕಿಟಕಿಯಲ್ಲಿ ಪ್ರಕೃತಿಯನ್ನು ನಿಟ್ಟಿಸುತ್ತ, ಪಕ್ಕದಲ್ಲೊಂದು ಜೀವದ ಮಾತಿಗೆ ಹಂಬಲಿಸುತ್ತ ನಿಂತ ದ್ರೌಪದಿ ಕಾಣಿಸುತ್ತಾಳೆ. ಗಂಡಂದಿರ ಕರ್ತವ್ಯನಿಷ್ಠೆ, ‘ಎದ್ದೆಯಾ, ಎಲ್ಲಿಗೆ ಹೊರಟೆ’ ಎಂದು ಕೇಳುವವರಿಲ್ಲದೆ ಏಕಾಂಗಿಯಾಗಿ ಕಣ್ಣು ತುಂಬಿಕೊಂಡು ನಿಂತ ದ್ರೌಪದಿ ಅಚ್ಚರಿಯೊಟ್ಟಿಗೆ ಆಪ್ತಳಾಗುತ್ತಾಳೆ. ಎಲ್ಲಿಂದಲೋ ಗಾಳಿಯಲಿ ತೇಲಿ ಬಂದ ಘಮಕ್ಕೆ ಮೈಮರೆಯುತ್ತಾಳೆ, ಬಿಚ್ಚಿದ ಕೂದಲಿಗೆ ಹೂವ ಆಸೆಯೇಕೆ? ತನ್ನ ಬಳಿಯಿಲ್ಲದ ಯಾವ ಹೂವು ಅವಳಿಗೆ ಬೇಕಿದ್ದಿತು? ಅವಳಿಗೆ ಗೊತ್ತು, ಅದನ್ನು ತರಬಲ್ಲವನು ಭೀಮನೇ, ಭೀಮನೊಬ್ಬನೇ.

  ಹೂವು ಬೇಕು ಎಂದೊಡನೆ ಹೊರಡುತ್ತಾನೆ ಭೀಮ, ಆ ಘಮದ ಬೆನ್ನಟ್ಟಿ. ಯಾವ ಕಷ್ಟವನ್ನೂ ಲೆಕ್ಕಿಸದೆ. ದಾರಿಯಲ್ಲಿ ಅಡ್ಡವಿದ್ದ ವಾನರದ ಬಾಲವೊಂದನ್ನು ಎತ್ತಲಾರದೆ ಶರಣಾದ ಭೀಮನಿಗೆ ಆ ವಾನರ ಬೆಳೆದು ನಿಂತ ಬಗೆಯ ದರ್ಶನದಲ್ಲಿ (ಆಂಜನೇಯ ಸೃಷ್ಟಿಯ ಆದಿಪುರುಷನಲ್ಲವೇ) ಬೆಳೆಯುವುದು ಹೇಗೆ, ಸೃಷ್ಟಿ ಹೇಗೆ ಎಂಬ ಮಿಂಚು ಹೊಳೆಯುತ್ತದೆ. ಕೈಯ್ಯಲ್ಲಿ ಸೌಗಂಧಿಕಾ ಹಿಡಿದು ತರ ಹೊರಟ ಭೀಮ ಕಣ್ಣಲ್ಲಿ ಹೂವ ಮುಡಿದು ದ್ರೌಪದಿಯ ಬಳಿ ಬರುತ್ತಾನೆ. ತಾನೇ ಸೌಗಂಧಿಕಾ ಆಗುವ ಪವಾಡ ಸಂಭವಿಸುತ್ತದೆ. ಅದು ದ್ರೌಪದಿ ಮುಡಿಯ ಬಯಸಿದ ಸೌಗಂಧಿಕಾ, ಅವಳಿಗೆ ಬೇಕಿದ್ದ ಸೌಗಂಧಿಕಾ. ಎಚ್ಚೆಸ್ವಿ ಪುರಾಣದ ಬೇರಿನಲ್ಲಿಯೇ ಕಾವ್ಯ ಸೌಗಂಧಿಕಾ ಬೆಳೆದಿದ್ದಾರೆ. ಅದು ಅವರ ಕಾವ್ಯದ ಶಕ್ತಿ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts