ಚನ್ನಗಿರಿ: ಹನ್ನೆರಡನೇ ಶತಮಾನದ ವಚನ ಪರಂಪರೆ ಕಾಯಕ ಮೊದಲು ಎಂದು ಹೇಳಿದೆ. ಆದರೆ, ವೈದಿಕ ಧರ್ಮ ಜನರು ದುಡಿದು ತಿನ್ನಬೇಕು ಎಂಬುದನ್ನು ಹೇಳಿಲ್ಲ ಎಂದು ರಾಜ್ಯ ಮಾನವ ಬಂಧುತ್ವ ವೇದಿಕೆ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಶರಣ ಜೇಡರ ದಾಸಿಮಯ್ಯನವರ ಸ್ಮರಣೋತ್ಸವ ಮತ್ತು 868ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಎರಡು ಪ್ರಧಾನ ಧರ್ಮಗಳನ್ನು ಕಾಣಬಹುದಾಗಿದೆ. ಒಂದು ಅಭೌತ ಧರ್ಮ, ಮತ್ತೊಂದು ಭೌತ ಧರ್ಮ. ಅಭೌತ ಧರ್ಮ ಕಾಣಲಾಗದ ಜಗತ್ತಿನ ಬಗ್ಗೆ ಹೇಳುತ್ತದೆ. ಆದರೆ ಭೌತ ಧರ್ಮ ಇಲ್ಲಿ ಮನುಷ್ಯ ಏನು ಮಾಡುತ್ತಾನೆ, ಅದನ್ನು ಸತ್ಯವೆಂದು ವಚನ ಪರಂಪರೆ ಹೇಳುತ್ತದೆ ಎಂದು ತಿಳಿಸಿದರು.
ಶಿವಶರಣರ ಕಾಲದಲ್ಲಿಯೇ ಲಿಂಗಾಯತ ಧರ್ಮ ಬೆವರಿಗೆ ಬೆಲೆ ಕೊಟ್ಟಿದೆ. ಸಾಂಘಿಕ ಹೋರಾಟ ಮಾಡಿದ ಶರಣರು 12ನೇ ಶತಮಾನದಲ್ಲಿಯೇ ಸಾಮಾಜಿಕ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಿದರು. ಬೆವರು ಸುರಿಸಿ ದುಡಿಯುವುದು ವಚನ ಪರಂಪರೆಯಾಗಿದೆ ಎಂದು ಹೇಳಿದರು.
ಶರಣರ ಪರ್ವದಲ್ಲಿ ಮೊದಲ ವಚನ ಕೊಟ್ಟಿದ್ದು ಜೇಡರ ದಾಸಿಮಯ್ಯ. ದೇವರು ಮತ್ತು ಮನುಷ್ಯನ ನಡುವೆ ಹೇಗೆ ಇರಬೇಕು. ದೇವರ ಕಲ್ಪನೆ ಬೆವರು, ಕಾಯಕ, ನಿಷ್ಠೆಯಲ್ಲಿ ಇದ್ದಾನೆ ಎಂದು ದಾಸಿಮಯ್ಯ ಅವರು ವಚನದಲ್ಲಿ ಸಾರಿದ್ದಾರೆ. ಅಂದು ವೈದಿಕ ಧರ್ಮ ಮೌಢ್ಯಾಚಾರ ಹುಟ್ಟುಹಾಕಿದ್ದು, ಇಂದಿಗೂ ಕಾಣುತ್ತಿರುವುದು ದುರಂತವಾಗಿದೆ. ಬಸವಣ್ಣ ಮತ್ತು ಅಂಬೇಡ್ಕರ್ ಅವರನ್ನು ಆರಾಧಿಸುವ ಬದಲು ಅವರ ತತ್ವಗಳನ್ನು ಅನುಸರಿಸಬೇಕಿದೆ ಎಂದರು.
ತುಮ್ೋಸ್ ನಿರ್ದೇಶಕ ಎಚ್.ಎಸ್.ಶಿವಕುಮಾರ್ ಮಾತನಾಡಿ, ನಾವು ಮಾಡುವಂತಹ ಉತ್ತಮ ಕಾಯಕದಲ್ಲಿ ಸ್ವರ್ಗವನ್ನು ಕಾಣಬಹುದು ಎಂದು ಬಸವಣ್ಣ ಹೇಳಿದ್ದಾರೆ. ಕಾಯಕ, ದಾನ, ನಿಷ್ಠೆ ಹಾಗೂ ಸಾಮಾಜಿಕ ಸೌಹಾರ್ದತೆಯ ಬದುಕು ಸಾಗಿಸಿದರೆ ನೆಮ್ಮದಿಯ ಜೀವನ ಹಾಗೂ ಯಶಸ್ಸು ನಮ್ಮದಾಗಲಿದೆ ಎಂದು ತಿಳಿಸಿದರು.
ಡಾ.ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜೇಡರ ದಾಸಿಮಯ್ಯ ಅವರು ವಚನ ಸಾಹಿತ್ಯದಲ್ಲಿ ಮೊದಲ ವಚನ ರಚಿಸಿದವರಾಗಿದ್ದಾರೆ. ಅವರ ಚಿಂತನೆಗಳು ಇಂದಿನ ದಿನಮಾನಕ್ಕೆ ಅವಶ್ಯಕವಾಗಿವೆ. ಸತ್ಯ, ಕಾಯಕ, ದಾಸೋಹ ಹಾಗೂ ದಾನಕ್ಕೆ ಮಹತ್ವ ನೀಡಿದ್ದು ಶರಣರ ಪರಂಪರೆಯಾಗಿದೆ ಎಂದರು.
ಮಾಜಿ ಶಾಸಕ ಬಸವರಾಜ ನಾಯ್ಕ, ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಪಾಟೀಲ್, ಬಿಇಒ ಎಲ್.ಜಯಪ್ಪ, ಹಾಸ್ಯ ಕಲಾವಿದ ಜಗನ್ನಾಥ್, ಗರಗ ಶಿವಲಿಂಗಪ್ಪ, ಬಿದರೆ ಸಿದ್ದಮೂರ್ತಿ, ಖಗ್ಗಿ ಶ್ರೀಕಂಠಮೂರ್ತಿ, ಅತ್ತಿಮೊಗ್ಗೆ ಚಂದ್ರಶೇಖರ್, ಸಿದ್ದನಮಠ ಎಸ್.ಅರ್.ಕುಮಾರ್ ಇದ್ದರು. ಬಸವತತ್ವ ಸಮ್ಮೇಳನದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.