ಮುಜಾಫರ್‌ನಗರ ಶೆಲ್ಟರ್‌ ಹೌಸ್‌ ಲೈಂಗಿಕ ಕಿರುಕುಳ: ಜೆಡಿಯುನಿಂದ ಮಾಜಿ ಸಚಿವೆ ಅಮಾನತು

ಪಟಾನ: ಮುಜಾಫರ್‌ಪುರದ ಶೆಲ್ಟರ್‌ ಹೌಸ್‌ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧ ಹೊಂದಿರುವ ಆರೋಪದ ಮೇಲೆ ಜನತಾ ದಳ(ಸಂಯುಕ್ತ)ದ ನಾಯಕಿ ಮತ್ತು ಮಾಜಿ ಸಚಿವೆ ಮಂಜು ವರ್ಮಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ವರ್ಮಾರನ್ನು ಬಂಧಿಸುವಂತೆ ಬಿಹಾರ ಪೊಲೀಸರಿಗೆ ಸುಪ್ರೀಂ ಸೂಚಿಸಿತ್ತು. ಆದರೆ, ಬಂಧನ ಪ್ರಕ್ರಿಯೆಯಲ್ಲಿ ವಿಫಲವಾಗಿರುವ ಬಿಹಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಸುಪ್ರೀಂ, ನ. 27ರಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ನ್ಯಾಯಾಲಯಕ್ಕೆ ಹಾಜರಾಗಿ ಏಕೆ ವರ್ಮಾರನ್ನು ಪತ್ತೆ ಮಾಡಲಾಗಿಲ್ಲ ಎನ್ನುವುದನ್ನು ತಿಳಿಸಬೇಕು ಎಂದು ಹೇಳಿದೆ. ಈ ಬೆನ್ನಲ್ಲೇ ಜೆಡಿಯು ಮಂಜು ವರ್ಮಾರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ. 1ರಂದು ಮಂಜು ವರ್ಮಾ ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ ಹೊರಡಿಸಲಾಗಿತ್ತು. ಆದರೆ, ಮಂಜು ವರ್ಮಾರನ್ನು ಬಂದಿಸದಿದ್ದಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಸುಪ್ರೀಂ ಕೋರ್ಟ್‌ ಮೂರು ದಿನಗಳಲ್ಲಿ ಏಕೆ ಮಾಜಿ ಸಚಿವರೊಬ್ಬರನ್ನು ಬಂಧಿಸಲಾಗಿಲ್ಲ. ಮಾಜಿ ಮಂತ್ರಿಗಳು ಕಾನೂನಿಗಿಂತಲೂ ಮೇಲಿದ್ದಾರೆಯೇ? ಇದನ್ನು ನೋಡಿದರೆ ಬಿಹಾರ ಸರ್ಕಾರದಲ್ಲಿಯೇ ಏನೋ ಸಮಸ್ಯೆ ಇರುವಂತೆ ಕಾಣುತ್ತಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿತ್ತು.

ಆಗಸ್ಟ್‌ನಲ್ಲಿ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಮಂಜು ವರ್ಮಾ ಅವರ ಪಾಟ್ನಾ ಮತ್ತು ಬೇಗುಸರಾಯಿ ನಿವಾಸದ ಮೇಲೆ ದಾಳಿ ನಡೆಸಿದಾಗ ಅವರ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ನಂತರ ಅವರ ವಿರುದ್ಧ ವಾರಂಟ್‌ ಜಾರಿಯಾಗಿತ್ತು.

ಶೆಲ್ಟರ್‌ ಹೌಸ್‌ಗೆ ದಾಳಿ ನಡೆಸಿದ್ದ ಪೊಲೀಸರು 44 ಯುವತಿಯರನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸಿದ್ದರು. ಸಂತ್ರಸ್ತರ ಪೈಕಿ ಓರ್ವ ಯುವತಿಯು ಸಿಬ್ಬಂದಿಗೆ ಸಹಕರಿಸದಿದ್ದಕ್ಕಾಗಿ ಆಕೆಯನ್ನು ಕೊಲೆ ಮಾಡಿ ಶೆಲ್ಟರ್‌ ಹೌಸ್‌ನ ಆವರಣದಲ್ಲಿ ಹೂತಿದ್ದರು ಎಂದು ತನಿಖಾಧಿಕಾರಿಗೆ ತಿಳಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಶೆಲ್ಟರ್‌ ಹೌಸ್‌ ಆವರಣದಲ್ಲಿ ಭೂಮಿಯನ್ನು ಅಗೆದು ಶೋಧ ಕಾರ್ಯ ನಡೆಸಿದ್ದರು. (ಏಜೆನ್ಸೀಸ್)