ಹೊರೆ ಇಳಿಸಲು ಹಳ್ಳಿಹಕ್ಕಿ ನಿರ್ಧಾರ

ಬೆಂಗಳೂರು: ಮೈತ್ರಿ ಸರ್ಕಾರದ ನೇತೃತ್ವ ವಹಿಸಿರುವ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ತ್ಯಜಿಸಲು ಮಾಜಿ ಸಚಿವ ಎಚ್. ವಿಶ್ವನಾಥ್ ನಿರ್ಧರಿಸಿದ್ದಾರೆ. ಈ ಕುರಿತು ‘ವಿಜಯವಾಣಿ’ ಜತೆ ಮಾತನಾಡಿರುವ ವಿಶ್ವನಾಥ್, ಸದ್ಯದಲ್ಲೇ ಲೋಕಸಭಾ ಚುನಾವಣೆ ಎದುರಾಗುತ್ತಿದ್ದು, ಪ್ರವಾಸ ಮಾಡಲು ಅನಾರೋಗ್ಯ ಅಡ್ಡಿಯಾಗುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡ ಪ್ರಾರಂಭದಲ್ಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೆ. ರಾಜ್ಯಾಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ನಡೆಸಬೇಕಾಗುತ್ತದೆ. ಅದಕ್ಕೆ ಅನಾರೋಗ್ಯ ಅಡ್ಡಿಯಾಗಿದೆ. ಜತೆಗೆ, ದಶಕದ ನಂತರ ಹುಣಸೂರಿನಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಕ್ಷೇತ್ರದ ಜನತೆಯ ಆಶೋತ್ತರ ಈಡೇರುವುದು ಮುಖ್ಯವಾದ್ದರಿಂದ ಈ ನಿರ್ಧಾರ ಎಂದರು.

ಕುಟುಂಬ ರಾಜಕಾರಣಕ್ಕೆ ಬೇಸರ?: ಜೆಡಿಎಸ್​ನಲ್ಲಿ ಕುಟುಂಬ ರಾಜಕಾರಣವೇ ಎಲ್ಲವೂ ಆಗಿದ್ದು, ರಾಜ್ಯಾಧ್ಯಕ್ಷರಾಗಿದ್ದರೂ ನಾಮ್ೆ ವಾಸ್ತೆ ಎನ್ನುವ ಕಾರಣಕ್ಕೆ ವಿಶ್ವನಾಥ್ ಬೇಸರಗೊಂಡಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಅಧ್ಯಕ್ಷ ಸ್ಥಾನದಲ್ಲಿ ಹೆಸರಿಗೆ ಕುಳಿತು ಯಾವುದೇ ನಿರ್ಧಾರ ಮಾಡಲು ಸಾಧ್ಯವಾಗದಿರುವ ಬದಲಿಗೆ ಕ್ಷೇತ್ರದಲ್ಲಿ ಜನಪರ ಕಾರ್ಯದಲ್ಲಿ ತೊಡಗುವುದು ಹೆಚ್ಚು ಸೂಕ್ತ ಎಂಬ ನಿರ್ಧಾರಕ್ಕೆ ಅವರು ಬಂದಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಮಾತನ್ನು ವಿಶ್ವನಾಥ್ ಅಲ್ಲಗಳೆದಿದ್ದಾರೆ. ಯಾವುದೇ ಕಾರಣಕ್ಕೂ ದೇವೇಗೌಡರ ಬಗ್ಗೆ ಮುನಿಸಿಕೊಳ್ಳುವ ಮಾತಿಲ್ಲ. ಸಿದ್ದರಾಮಯ್ಯ ಕುತಂತ್ರ ಮಾಡಿ ನನ್ನನ್ನು ಮೂಲೆಗುಂಪು ಮಾಡಿ ರಾಜಕೀಯ ಜೀವನ ಮುಗಿಸಲು ಹೊರಟಿದ್ದರು. ಈ ಸಮಯದಲ್ಲಿ ಚಿಕ್ಕಮಾದು, ಜಿ.ಟಿ. ದೇವೇಗೌಡ ಮೂಲಕ ನನ್ನನ್ನು ಸಂರ್ಪಸಿ ಪಕ್ಷಕ್ಕೆ ಕರೆತಂದು, ಈ ವಯಸ್ಸಿನಲ್ಲೂ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಗೆಲ್ಲಿಸಿದ್ದಾರೆ. ಯಾವುದೇ ರಾಜಕಾರಣಿಗೆ ಸಂಧ್ಯಾಕಾಲದಲ್ಲಿ ಪರಿಪೂರ್ಣ ಹಾಗೂ ಸಂತೃಪ್ತಿಯ ನಿರೀಕ್ಷೆ ಇರುತ್ತದೆ. ಅದನ್ನು ನೀಡಿದ ದೇವೇಗೌಡರ ಬಗ್ಗೆ ಮುನಿಸಿಲ್ಲ. ಇನ್ನು, ಮೈತ್ರಿ ಧರ್ಮಕ್ಕೆ ಅನುಗುಣವಾಗಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಹ ಸರ್ಕಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಯಾರ ಬಗ್ಗೆಯೂ ಅಸಮಾಧಾನವಿಲ್ಲ ಎಂದರು.

ಜ.3ರಂದು ಬೃಹತ್ ಸಭೆ

ಲೋಕಸಭೆ ಚುನಾವಣೆಗೆ ತಯಾರಿ ನಡೆಸಲು ಜ.3ರಂದು ಬೆಂಗಳೂರಿನ ಜೆ.ಪಿ. ಭವನದಲ್ಲಿ ಜೆಡಿಎಸ್ ಶಾಸಕರು, ಇತರ ಜನಪ್ರತಿನಿಧಿಗಳು, ಬಿಬಿಎಂಪಿ ಸದಸ್ಯರು ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರ ಬೃಹತ್ ಸಭೆ ಆಯೋಜಿಸಲಾಗಿದೆ ಎಂದು ವಿಶ್ವನಾಥ್ ತಿಳಿಸಿದ್ದಾರೆ. ಪಕ್ಷದ ಕಾರ್ಯಕತಂತ್ರದ ಕುರಿತು ರ್ಚಚಿಸಲಾಗುವ ಈ ಸಭೆವರೆಗೂ ಹುದ್ದೆಯಲ್ಲೇ ಇರುತ್ತೇನೆ. ನಂತರ ದೇವೇಗೌಡರ ಜತೆ ವಿಷಯ ಪ್ರಸ್ತಾಪಿಸುತ್ತೇನೆ. ಅವರ ಆದೇಶದಂತೆ ನಡೆಯುತ್ತೇನೆ, ಪಕ್ಷಕ್ಕೆ ನಿಷ್ಠಾವಂತನಾಗಿಯೇ ಇರುತ್ತೇನೆ ಎಂದಿದ್ದಾರೆ.