ಜೆಡಿಎಸ್ ಮಹತ್ವದ ಸಭೆ ಇಂದು

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ಭಾನುವಾರ (ಆ.5) ಜೆ.ಪಿ.ಭವನದಲ್ಲಿ ಜೆಡಿಎಸ್​ನ ಮಹತ್ವದ ಸಭೆ ನಡೆಯಲಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾಗವಹಿಸಲಿದ್ದಾರೆ. ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ಪ್ರಮುಖ ಮುಖಂಡರು ಪಾಲ್ಗೊಳ್ಳಲಿದ್ದು, ಚುನಾವಣೆ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಬೇಕೆ, ಏಕಾಂಗಿಯಾಗಿ ಚುನಾವಣೆ ಎದುರಿಸಬೇಕೆ ಎಂಬ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಜತೆಗೆ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಚರ್ಚೆ ನಡೆಯಲಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಆ.29ರಂದು ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಕಾರ್ಯತಂತ್ರಗಳ ಬಗ್ಗೆ ದೇವೇಗೌಡರು ಮುಖಂಡರಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲು ಜೆಡಿಎಸ್ ತೀರ್ವನಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶಾಸಕ ಎಚ್.ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷರಾದರೆ ಸಂತೋಷ. ಈ ವಿಷಯದಲ್ಲಿ ನನ್ನ ಅಭ್ಯಂತರವೇನಿಲ್ಲ. ವರಿಷ್ಠರು ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ. ಪುತ್ರ ಪ್ರಜ್ವಲ್ ರಾಜಕೀಯವಾಗಿ ಬೆಳೆಯಲು ಸಾಕಷ್ಟು ಕಾಲಾವಕಾಶ ಇದೆ.

| ಎಚ್.ಡಿ. ರೇವಣ್ಣ ಸಚಿವ

ಶಿವಮೊಗ್ಗಕ್ಕೆ ಗೀತಾ ಶಿವರಾಜ್​ಕುಮಾರ್?

ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರನ್ನು ಚಿತ್ರನಟ ಶಿವರಾಜ್​ಕುಮಾರ್ ಹಾಗೂ ಪತ್ನಿ ಗೀತಾ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ಪರ್ಧಿಸುತ್ತಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಶಿವರಾಜ್​ಕುಮಾರ್ ಮಾತನಾಡಿ, ಚುನಾವಣೆ ಸ್ಪರ್ಧೆ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ. ಅವರು ಸ್ಪರ್ಧಿಸಬೇಕು, ಗೆಲ್ಲಬೇಕೆಂದು ದೇವರ ಇಚ್ಛೆ ಇದ್ದರೆ ಯಾರೂ ತಪ್ಪಿಸಲಾಗದು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿ ಮತ್ತಷ್ಟು ಕುತೂಹಲ ಮೂಡಿಸಿದರು. ಪಾರ್ವತಮ್ಮ ರಾಜ್​ಕುಮಾರ್ ಸಮಾಧಿ ಸ್ಥಳ ಅಭಿವೃದ್ಧಿ ಕುರಿತು ಸಿಎಂ ಜತೆ ಶಿವರಾಜ್​ಕುಮಾರ್ ದಂಪತಿ ರ್ಚಚಿಸಿದ್ದಾರೆ ಎನ್ನಲಾಗಿದೆ.