ಶಿವಮೊಗ್ಗ ಲೋಕಸಭೆ ಕ್ಷೇತ್ರ ಖಂಡಿತ ನಮ್ಮದೇ; ಮಧು ಬಂಗಾರಪ್ಪ ನಮ್ಮ ಅಭ್ಯರ್ಥಿ: ದೇವೇಗೌಡ

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಎಚ್​.ಡಿ ದೇವೇಗೌಡ ಅವರು ಇಂದು ಜೆಡಿಎಸ್​ ಯುವ ಘಟಕದ ಅಧ್ಯಕ್ಷ, ಮಾಜಿ ಶಾಸಕ ಮಧು ಬಂಗಾರಪ್ಪ ಅವರ ನಿವಾಸಕ್ಕೆ ತೆರಳಿ ಕೆಲಕಾಲ ಸಮಾಲೋಚನೆ ನಡೆಸಿದರು. ಮಾತುಕತೆ ನಂತರ ಮಾತನಾಡಿದ ಅವರು, ” ಶಿವಮೊಗ್ಗ ಕ್ಷೇತ್ರ ನಮ್ಮದೇ. ಅಲ್ಲಿ ಮಧು ಬಂಗಾರಪ್ಪ ಅವರೇ ನಮ್ಮ ಅಭ್ಯರ್ಥಿ,” ಎಂದು ಹೇಳಿದರು.

ಕೆಲ ತಿಂಗಳ ಹಿಂದೆ ರಾಜ್ಯದಲ್ಲಿ ಎದುರಾಗಿದ್ದ ಉಪ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರು ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಸೋತಿದ್ದ ಅವರು ನಂತರ ಪಕ್ಷದ ಚಟುವಟಿಕೆಗಳಿಂದ ದೂರ ಸರಿದಿದ್ದರು. ಸದ್ಯ ಕಾಂಗ್ರೆಸ್​-ಜೆಡಿಎಸ್​ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿರುವ ಹೊತ್ತಿನಲ್ಲೇ ಮಧು ಬಂಗಾರಪ್ಪ ಅವರ ಬೆಂಗಳೂರಿನ ಸದಾಶಿವ ನಗರದ ನಿವಾಸಕ್ಕೆ ತೆರಳಿದ ಮಾಜಿ ಪ್ರಧಾನಿ ಚುನಾವಣೆ ಕುರಿತು ಚರ್ಚೆ ನಡೆಸಿದ್ದಾರೆ.

ಸಮಾಲೋಚನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು, ” ಮಧು ಬಂಗಾರಪ್ಪ ಮನಸಿಗೆ ಬೇಸರ ಮಾಡಿಕೊಂಡು ಸ್ವಲ್ಪ ಹಿಂದೆ ಸರಿದಿದ್ದಾರೆ. ಹಾಗಾಗಿ ಅವರನ್ನು ಮಾತನಾಡಿಸಲು ಬಂದೆ. ಶಿವಮೊಗ್ಗ ಕ್ಷೇತ್ರ ನಮಗೆ ಖಚಿತವಾಗಿ ಸಿಗುತ್ತದೆ. ಮಧು ಬಂಗಾರಪ್ಪ ಮತ್ತೆ ಶಿವಮೊಗ್ಗ ಕ್ಷೇತ್ರಕ್ಕೆ ಅಭ್ಯರ್ಥಿ ಆಗುತ್ತಾರೆ,” ಎಂದು ಸ್ಪಷ್ಟಪಡಿಸಿದರು.

“ಕಳೆದ ಉಪಚುನಾವಣೆಯಲ್ಲಿ ನಮಗೆ ಕಟುವಾದ ಅನುಭವ ಆಗಿದೆ. ಮೈತ್ರಿಯಾಗಿ ನಾಲ್ಕು ಕ್ಷೇತ್ರ ಗೆದ್ದಿದ್ದೇವೆ. ಶಿವಮೊಗ್ಗದಲ್ಲಿ ಸ್ವಲ್ಪ ಅಂತರದಲ್ಲಿ ಸೋತಿದ್ದೇವೆ. ಅದರ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳುತ್ತೇವೆ. ಪ್ರವಾಸದಲ್ಲಿದ್ದ ಮಧುಬಂಗಾರಪ್ಪ ಅವರು ಕೊನೆ ಗಳಿಗೆಯಲ್ಲಿ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್ ನಾಯಕರೂ ಮಧು ಬಂಗಾರಪ್ಪ ಅವರೇ ಅಭ್ಯರ್ಥಿ ಆದರೆ ಮಾತ್ರ ಗೆಲುವು ಸಾಧ್ಯ ಎಂದು ಹೇಳಿದ್ದರು. ಜೆಡಿಎಸ್ ನಾಯಕರು ಹೋಗಿ ಪ್ರಚಾರ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ನಾವು ಸೋತಿದ್ದೇವೆ,” ಎಂದರು.

ಇನ್ನು ಮೈತ್ರಿ ವಿಚಾರವಾಗಿ ಮಾತನಾಡಿದ ದೇವೇಗೌಡರು, ” ಇಂದಿನ ಸಭೆಯಲ್ಲಿ ಉಭಯ ಪಕ್ಷಗಳ ನಾಯಕರು ಮಾತುಕತೆ ನಡೆಸಿದ್ದಾರೆ. ನಮಗೆ 12 ಸೀಟು ಬೇಕೆಂದು ರೇವಣ್ಣ ಕೇಳಿದ್ದಾರೆ. ಸಮನ್ವಯ ಸಮಿತಿಯಲ್ಲಿ ಈ ಬಗ್ಗೆ ಚರ್ಚಿಸಿದ ನಂತರ ತೀರ್ಮಾನ ಆಗಲಿದೆ. ನಾನು ಈ ಹಂತದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಅಗತ್ಯವಿದ್ದರೆ ದೆಹಲಿ ಮಟ್ಟದಲ್ಲಿ ಮಾತುಕತೆ ಮಾಡುತ್ತೇನೆ,” ಎಂದು ಹೇಳಿದರು.