ಜೆಡಿಎಸ್​ ಶಾಸಕನ ಎರಡು ಮದುವೆ ಫಜೀತಿ: ಅಫಿಡವಿಟ್​ ಹಿಡಿದು ಕೋರ್ಟ್​ಗೆ ಹೋದ ಮೊದಲ ಪತ್ನಿ

ಮೈಸೂರು: ಜೆಡಿಎಸ್​ ಶಾಸಕನೋರ್ವನ ಎರಡು ಮದುವೆ ಫಜೀತಿಯ ಕತೆಯಿದು. ಪಿರಿಯಾಪಟ್ಟಣ ಜೆಡಿಎಸ್​ ಶಾಸಕ ಕೆ.ಮಹದೇವ ಇಬ್ಬರು ಹೆಂಡತಿಯರ ಮುದ್ದಿನ ಗಂಡನಾಗಿದ್ದು, ಈಗ ವಿವಾದದ ಕೇಂದ್ರಬಿಂದುವಾಗಿದ್ದಾರೆ.

ಮಹದೇವ್​ ಅವರು ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್​ನಿಂದ ಅವರ ಎರಡು ಮದುವೆ ರಹಸ್ಯ ಬಯಲಾಗಿದೆ. ಮೊದಲನೇ ಪತ್ನಿ ರುಕ್ಮಿಣಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಕೆ.ಮಹದೇವ್ ಅವರು 1975ರಲ್ಲಿ ರುಕ್ಮಿಣಿಯೊಂದಿಗೆ ಮದುವೆಯಾಗಿದ್ದರು. ಹೆಣ್ಣುಮಗು ಕೂಡ ಜನಿಸಿತ್ತು. ಕೆಲ ವರ್ಷಗಳ ಬಳಿಕ ರುಕ್ಮಿಣಿ ಹಾಗೂ ಮಗಳನ್ನು ದೂರ ಮಾಡಿ ಸುಭದ್ರಮ್ಮ ಎಂಬುವರ ಜತೆ ವಿವಾಹವಾಗಿದ್ದರು. ಈ ಮದುವೆಯನ್ನು ಗುಟ್ಟಾಗಿಟ್ಟಿದ್ದರು. ಮೊದಲ ಪತ್ನಿ ಹಸು ಮೇಯಿಸಿಕೊಂಡು ಜೀವನ ನಡೆಸುತ್ತಿದ್ದು, ಅವರ ಮಗಳು ಕೂಡ ಟೇಲರ್​ನನ್ನು ಮದುವೆಯಾಗಿದ್ದು ಬಡತನದಲ್ಲಿ ಬದುಕುತ್ತಿದ್ದಾರೆ.

ಕೆ.ಮಹದೇವ್​ ಅವರು ವಿಧಾನಸಭಾ ಚುನಾವಣೆ ವೇಳೆ ಅಫಿಡವಿಟ್​ ಸಲ್ಲಿಸುವಾಗ ಪತ್ನಿಯ ಹೆಸರಿದ್ದ ಸ್ಥಳದಲ್ಲಿ ಸುಭದ್ರಮ್ಮ ಎಂದು ಉಲ್ಲೇಖಿಸಿದ್ದರು. ಅದನ್ನು ಹೇಗೋ ನೋಡಿದ ಮೊದಲ ಪತ್ನಿ ರುಕ್ಮಿಣಿ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಡಿಎನ್​ಎ ಟೆಸ್ಟ್​ ಮಾಡಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ.
ಅಲ್ಲದೆ, ಮಹದೇವ್​ ಅವರು ಜೀವನಾಂಶ ಕೊಡುತ್ತಿಲ್ಲ. ಕೇಳಿದರೆ ಧಮ್ಕಿ ಹಾಕುತ್ತಿದ್ದಾರೆ ಎಂದು ರುಕ್ಮಿಣಿ ಆರೋಪಿಸಿದ್ದಾರೆ. ಕೆ.ಆರ್​.ನಗರದ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು ಫೆ.16ಕ್ಕೆ ವಿಚಾರಣೆ ಮುಂದೂಡಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *