ಜೆಡಿಎಸ್​ನಲ್ಲೀಗ ಸಚಿವ ಸ್ಥಾನದ ತಳಮಳ

| ಶಿವಕುಮಾರ ಮೆಣಸಿನಕಾಯಿ ಬೆಂಗಳೂರು

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸುವ ತೆರೆಮರೆಯ ಪ್ರಯತ್ನಗಳೆಲ್ಲ ತಲೆಕೆಳಗಾದ್ದರಿಂದ ಜೆಡಿಎಸ್ ನೆಮ್ಮದಿಯ ನಿಟ್ಟುಸಿರುಬಿಟ್ಟಿದೆ. ಆದರೆ, ಪಕ್ಷದ ಶಾಸಕರು-ಮುಖಂಡರಲ್ಲಿ ಹೊಸ ತಳಮಳ ಆರಂಭವಾಗಿದ್ದು, ನಿಗಮ-ಮಂಡಳಿಗಳ ನೇಮಕಾತಿ ಯಾವಾಗ ಎಂಬ ಕಾತರ ಉದ್ಭವಿಸಿದೆ.

ಜತೆಗೆ ಲೋಕಸಭಾ ಚುನಾವಣೆ ಮುಗಿಯುವ ತನಕ ಯಾವುದೇ ನೇಮಕಾತಿ ಹಾಗೂ ಖಾಲಿ ಇರುವ ಎರಡು ಸಚಿವ ಸ್ಥಾನಗಳನ್ನು ಭರ್ತಿ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಬಂದಿರುವುದು ಆಕಾಂಕ್ಷಿಗಳಲ್ಲಿ ಬೇಸರ ಮೂಡಿಸಿದೆ.

ಖಾಲಿ ಇದ್ದ ಏಕೈಕ ವಿಧಾನ ಪರಿಷತ್ ಸದಸ್ಯತ್ವಕ್ಕೆ ಮಾಜಿ ಕೆಎಎಸ್ ಅಧಿಕಾರಿ ತಿಪ್ಪೇಸ್ವಾಮಿ ಅವರನ್ನು ನೇಮಕ ಮಾಡಿದ ವರಿಷ್ಠರು ಸದ್ಯ ಎಲ್ಲ ನೇಮಕಾತಿ ಹಾಗೂ ಅಧಿಕಾರ ಹಂಚಿಕೆ ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ. ಒಂದು ವೇಳೆ ಇನ್ನೊಂದು ವಾರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಿದರೂ ಮಾರ್ಚ್ ಮೊದಲ ವಾರದಲ್ಲಿ ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಬೀಳಲಿದ್ದು, ಅಧಿಕಾರ ಸ್ವೀಕರಿಸಲು ಅಡ್ಡಿ ಉಂಟಾಗಲಿದೆ. ಒಂದು ವೇಳೆ ನೇಮಕಾತಿ ಮಾಡಿದರೂ ಚುನಾವಣಾ ನೀತಿ ಸಂಹಿತೆ ಜಾರಿಗೊಂಡರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಲಿದೆ.

ಪಕ್ಷದ ಹತ್ತಕ್ಕೂ ಹೆಚ್ಚು ಶಾಸಕರು ಹಾಗೂ ಸರಿಸುಮಾರು 10 ಮುಖಂಡರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಪಕ್ಷದಲ್ಲಿದೆ. ಆದರೆ, ವರಿಷ್ಠರು ಈ ನಿರೀಕ್ಷೆಯನ್ನು ಸದ್ಯಕ್ಕೆ ಹುಸಿ ಮಾಡಿದ್ದಾರೆ.

ಇನ್ನು ಖಾಲಿ ಇರುವ ಎರಡು ಸಚಿವ ಸ್ಥಾನಗಳ ಪೈಕಿ ಒಂದನ್ನು ಅಲ್ಪಸಂಖ್ಯಾತರಿಗೆ ಹಾಗೂ ಇನ್ನೊಂದನ್ನು ಪರಿಶಿಷ್ಟ ಜಾತಿಗೆ ನೀಡುವ ಚಿಂತನೆ ನಡೆದಿದೆ. ಅದಕ್ಕಾಗಿ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಸಚಿವ ಸ್ಥಾನದ ಕನಸು ಕಾಣುತ್ತಿದ್ದು, ಪರಿಶಿಷ್ಟ ಪಂಗಡದ ಕೋಟಾದಲ್ಲಿ ಶಾಸಕರಾದ ಡಾ. ಅನ್ನದಾನಿ ಹಾಗೂ ಎಚ್.ಕೆ. ಕುಮಾರಸ್ವಾಮಿ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈ ನಡುವೆ ವಿಧಾನ ಪರಿಷತ್ ಸಭಾಪತಿ ಸ್ಥಾನದಿಂದ ವಂಚಿತರಾದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂಬುದು ವರಿಷ್ಠರಿಗೆ ಮನದಟ್ಟಾಗಿದೆ. ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡಿದರೆ ಮೂವರಿಗೆ ಅಸಮಾಧಾನ ಆಗುವುದು ಖಚಿತವಾಗಿರುವುದರಿಂದ ಎರಡೂ ಸ್ಥಾನಗಳನ್ನು ಭರ್ತಿ ಮಾಡದಿರುವುದೇ ಲೇಸು ಎಂಬ ತೀರ್ವನಕ್ಕೆ ವರಿಷ್ಠರು ಬಂದಿದ್ದಾರೆ ಎನ್ನುತ್ತವೆ ಜೆಡಿಎಸ್​ನ ಉನ್ನತ ಮೂಲಗಳು.

ಲೋಕಸಭಾ ಚುನಾವಣೆ ಕುರಿತಂತೆ ಪಕ್ಷದ ವರಿಷ್ಠರು ಕಾಂಗ್ರೆಸ್ ಹೈಕಮಾಂಡ್ ಜತೆ ರ್ಚಚಿಸುತ್ತಾರೆ. ಹೀಗಾಗಿ ಸದ್ಯಕ್ಕೆ ಯಾವುದೇ ಬೇರೆ ವಿಚಾರಗಳ ಬಗ್ಗೆ ಸಭೆಗಳನ್ನು ಕರೆದಿಲ್ಲ. ಸೂಕ್ತ ಸಂದರ್ಭದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುತ್ತೇವೆ.

| ಎಚ್.ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ