ಪಕ್ಷದ ಚಟುವಟಿಕೆಗಳಿಂದ ಹಿಂದೆ ಸರಿದಿರುವ ಮಧುಬಂಗಾರಪ್ಪನವರಿಗೆ ಎಚ್​ಡಿಡಿ ಪತ್ರ

ಬೆಂಗಳೂರು: ಜೆಡಿಎಸ್​ ಯುವಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಪಕ್ಷದ ಚುನಾವಣೆಯಿಂದ ಹೊರಗುಳಿದಿದ್ದು ಈಗ ಅವರ ಮನವೊಲಿಕೆಗೆ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಮುಂದಾಗಿದ್ದಾರೆ ಎನ್ನಲಾಗಿದೆ.

ಮಧುಬಂಗಾರಪ್ಪ ಲೋಕಸಭಾ ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಅವರ ಸೋಲಿಗೆ ವರಿಷ್ಠರು ನೀಡಿದ್ದ ವಿಶ್ಲೇಷಣೆಯಿಂದ ನೊಂದು ಪಕ್ಷದ ಚಟುವಟಕೆಗಳಿಂದ ದೂರವುಳಿದಿದ್ದಾರೆ. ಪಕ್ಷದ ಸಭೆ, ಸಮಾರಂಭಗಳಿಗೂ ಮಧು ಗೈರಾಗುತ್ತಿದ್ದಾರೆ. ಅಲ್ಲದೆ ಸಿಎಂ, ಎ.ಡಿ.ದೇವೇಗೌಡರ ಕರೆಗಳನ್ನೂ ಸ್ವೀಕರಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್​ಡಿಡಿ ಮಧು ಬಂಗಾರಪ್ಪನವರಿಗೆ ಪತ್ರ ಬರೆದಿದ್ದು ಅವರ ಮನವೊಲಿಕೆಗೆ ಮುಂದಾಗಿದ್ದಾರೆ.

ನಿಮಗೆ ಬೇಸರವಾಗಿದ್ದರೆ ಅದನ್ನು ಸರಿಪಡಿಸಲು ನಾನಿದ್ದೇನೆ. ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಿ ಜವಾಬ್ದಾರಿ ಹೊತ್ತುಕೊಳ್ಳಿ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು ಪಕ್ಷ ಸಂಘಟನೆಗೆ ಮುಂದಾಗಿ ಎಂದು ಎಚ್​.ಡಿ.ದೇವೇಗೌಡರು ಮಧುಬಂಗಾರಪ್ಪನವರಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.