ಜೆಡಿಎಸ್​ ಅಭ್ಯರ್ಥಿ ಗೆಲುವಿನ ಸಂಪೂರ್ಣ ಜವಾಬ್ದಾರಿಯನ್ನು ದೇಶಪಾಂಡೆಯವರ ಹೆಗಲಿಗೆ ಹಾಕಿದ್ದೇವೆ: ಎಚ್​ಡಿಡಿ

ಉತ್ತರ ಕನ್ನಡ: ಇಲ್ಲಿನ ಲೋಕಸಭಾ ಜೆಡಿಎಸ್​ ಅಭ್ಯರ್ಥಿ ಆನಂದ್ ಆಸ್ನೋಟಿಕರ್​ ಪರ ಪ್ರಚಾರ ನಡೆಸಲು ಇಂದು ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಎಚ್​.ಡಿ.ದೇವೇಗೌಡರು ಹೊನ್ನಾವರಕ್ಕೆ ಆಗಮಿಸಿದ್ದಾರೆ.

ನ್ಯೂ ಇಂಗ್ಲೀಷ್ ಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಶಾಸಕ ಆರ್​.ವಿ.ದೇಶಪಾಂಡೆಯವರು ಇಲ್ಲಿನ ಹಿರಿಯರು. ನಾವಿಬ್ಬರೂ ಸಹೋದ್ಯೋಗಿಗಳು. ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರಿಗೆ ಸುದೀರ್ಘ ಅನುಭವ ಇದೆ. ಹಾಗಾಗಿ ಸಂಪೂರ್ಣ ಜವಾಬ್ದಾರಿಯನ್ನು ಅವರ ಮೇಲೆ ಹಾಕಿದ್ದೇವೆ ಎಂದು ಹೇಳಿದರು.

ಆನಂದ್​ ಆಸ್ನೋಟಿಕರ್​ ಪರ ಪ್ರಚಾರಕ್ಕೆ ಬಂದಿದ್ದೇನೆ. ಇಲ್ಲಿನ ಮಹಾಜನತೆ ತೀರ್ಪು ನೀಡಬೇಕು. ನಮ್ಮ ನಾಯಕರಲ್ಲಿ ಯಾರಲ್ಲೂ ಭಿನ್ನಾಭಿಪ್ರಾಯವಿಲ್ಲ. ಸಿದ್ದರಾಮಯ್ಯ, ಪರಮೇಶ್ವರ್​ ಸೇರಿ ಎಲ್ಲರೂ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದರು.

ಹೆಲಿಕಾಪ್ಟರ್​ ತಪಾಸಣೆ
ದೇವೇಗೌಡರು ಹೊನ್ನಾವರಕ್ಕೆ ಆಗಮಿಸಿದ ಹೆಲಿಕಾಪ್ಟರ್​ನ್ನು ರಾಮತೀರ್ಥ ಹೆಲಿಪ್ಯಾಡ್​ ಬಳಿ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದರು.