ರಾಜ್ಯದ ವಿವಿಧೆಡೆ ಜೆಡಿಎಸ್ ಸಮಾವೇಶ

ಕಡೂರು: ಪ್ರಚಾರ ಸಮಿತಿ ಅಧ್ಯಕ್ಷನಾಗಿ ನಾನು ಮುಂದಿನ 100 ದಿನಗಳಿಗೆ ಹಲವು ಸಭೆಗಳನ್ನು ಆಯೋಜಿಸಿದ್ದು ವಿಜಯಪುರದಲ್ಲಿ ಫೆ.10ರಂದು ದಲಿತರ ಸಮಾವೇಶ ನಡೆಯಲಿದೆ. ಫೆ.17-18ರಂದು ಹುಬ್ಬಳ್ಳಿಯಲ್ಲಿ ರೈತರ ಸಮಾವೇಶ ನಡೆಯಲಿದೆ. ಉಳಿದ ದಿನಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಮಾವೇಶ, ಪ್ರಚಾರ ಮಾಡಿ ಪಕ್ಷವನ್ನು ಬಲಪಡಿಸಲಾಗುತ್ತದೆ ಎಂದು ಜೆಡಿಎಸ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್​ವಿ ದತ್ತ ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಹೊಂದಾಣಿಕೆ ಖಚಿತ. ವಿಜಯಪುರ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಮಂಡ್ಯ, ಹಾಸನ, ಬೆಂಗಳೂರು ಸೇರಿ ಹಲವೆಡೆ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಪಕ್ಷದ ಹಿರಿಯರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಧಾನಿ ಮೋದಿ ಅವರ ದುರಾಡಳಿತ, ಸರ್ವಾಧಿಕಾರಿ ಧೋರಣೆ ಸಂಕೇತವೇ ಮಹಾಘಟಬಂಧನ್ ಗಟ್ಟಿಯಾಗಲು ಕಾರಣ. ಈಗಾಗಲೇ 5 ರಾಜ್ಯಗಳಲ್ಲಿ ಸೋತು ಸುಣ್ಣವಾಗಿರುವ ಮೋದಿಗೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ರಾಷ್ಟ್ರ ಮಟ್ಟದಲ್ಲಿ ಜಾತ್ಯತೀತ ಪ್ರಾದೇಶಿಕ ಪಕ್ಷಗಳು ಒಟ್ಟಾಗಿವೆ. ಇದರಿಂದ ಉತ್ತಮ ಫಲಿತಾಂಶ ಬಂದಿದೆ. ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುವುದು ಶತಸಿದ್ಧ ಎಂದರು.

ಬಿಜೆಪಿ ರಾಷ್ಟ್ರೀಯ ಪಕ್ಷವಾದರೂ ಅದಕ್ಕೆ ಮಾನ, ಮರ್ಯಾದೆ ಇಲ್ಲ. ಈಗಾಗಲೇ ನಾಲ್ಕೈದು ಬಾರಿ ರಾಜ್ಯ ಸರ್ಕಾರ ಬೀಳಿಸಲು ಪ್ರಯತ್ನಿಸಿ ಮಾನ ಕಳೆದುಕೊಂಡಿದೆ. ಬಿಜೆಪಿ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದೆ. ಒಂದು ವೇಳೆ ಬಜೆಟ್ ಮಂಡನೆಗೆ ಕಲ್ಲು ಹಾಕಿದರೆ ಬಿಜೆಪಿಗೆ ದೋಷ ತಪ್ಪಿದ್ದಲ್ಲ. ಕುಮಾರಸ್ವಾಮಿ ಬಜೆಟ್ ಮಂಡಿಸುವುದು ಶತಸಿದ್ಧ. ಈ ಬಾರಿ ಉತ್ತಮ ಬಜೆಟ್ ಮಂಡಿಸುವ ಮೂಲಕ ಜನರ ಮನ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು.